ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸೇವೆ ಮಾಡುವ ಗುರಿ’: ಶಿವಾನಂದ ಪಾಟೀಲ

ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದ ಶಿವಾನಂದ ಪಾಟೀಲ
Last Updated 19 ಮೇ 2022, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಶೇ 100ರಷ್ಟು ಅಂಕ ಗಳಿಸಬೇಕು ಎನ್ನುವ ಆಸೆ ಇತ್ತು. ಅದು ನೆರವೇರಿದ್ದು, ಮುಂದೆ ಐಎಎಸ್‌ ಅಧಿಕಾರಿಯಾಗಿ ಸಮಾಜ ಸೇವೆ ಮಾಡುವ ಕನಸಿದೆ’ ಎಂದು ಎಸೆಸ್ಸೆಲ್ಸಿ ಪರೀಕ್ಷೆಯ ಟಾಪರ್ ಶಿವಾನಂದ ಪಾಟೀಲ ಹೇಳಿದರು.

ಸಾಧನೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಸಂತೋಷ ಹಂಚಿಕೊಂಡ ಅವರು, ‘ಬೆಳಗಾವಿಯ ಹುಕ್ಕೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹಾಗೂ ಚೇತನ ಶಾಲೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಶಾಲೆಯಲ್ಲಿ ಅಂದು ಮಾಡಿದ ಪಾಠವನ್ನು ಅಂದೇ ಓದಿಕೊಳ್ಳುತ್ತಿದ್ದೆ. ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಏಳರಿಂದ ಎಂಟು ತಾಸು ಅಭ್ಯಾಸ ಮಾಡುತ್ತಿದ್ದೆ’ ಎಂದು ಹೇಳಿದರು.

ಹೆಮ್ಮೆ ತಂದ ಸಾಧನೆ: ‘ಮಗನ ಸಾಧನೆ ಹೆಮ್ಮೆ ತಂದಿದೆ’ ಎಂದು ಶಿವಾನಂದ ಅವರ ತಾಯಿ ಮಂಜುಳಾ ಪಾಟೀಲ ಹೇಳಿದರು.‌

‘ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದ. ಎಂಟನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿಸಲಾಗಿತ್ತು. ಉತ್ತಮ ಅಂಕ ಗಳಿಸುತ್ತಾನೆ ಎನ್ನುವ ಭರವಸೆ ಇತ್ತು’ ಎಂದರು.

ಹುಕ್ಕೇರಿ ಮೂಲದ ಶಿವಾನಂದ ಅವರದ್ದು, ಮಧ್ಯಮ ವರ್ಗದ ಕುಟುಂಬವಾಗಿದ್ದು, ಅವರ ತಂದೆ ಬಸಗೌಡ ಪಾಟೀಲ, ತಾಯಿ ಮಂಜುಳಾ ಪಾಟೀಲ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗುಣಮಟ್ಟದ ಶಿಕ್ಷಣ: ‘ಶಿವಾನಂದ ಪಾಟೀಲ ಅವರು ಶೇ 100ರಷ್ಟು ಗಳಿಸಿದ್ದು, ಜಿಲ್ಲೆ ಮತ್ತು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ’ ಎಂದು ಅಕ್ಷಯ ನಗರದ ಚೇತನ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಎಂ.ಎಂ. ಕರೇಗೌಡರ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘61 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಹಾಗೂ 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ. ಅದೇ ರೀತಿ ಶಿವಾನಂದ ಅವರಿಗೂ ರಿಯಾಯಿತಿ ನೀಡಲಾಗಿತ್ತು’ ಎಂದರು.

ಶಾಲೆಯ ಅಧ್ಯಕ್ಷ ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಮಹೇಶ ದೇವಪ್ಪನವರ, ನಿರ್ದೇಶಕ ಜಗದೀಶ ದೇವಪ್ಪನವರ ಇದ್ದರು.

ಆದಿತಿ ಸಾರಂಗಮಠ (ಶೇ 99.52), ಭರತೇಶ ನಭಾಪೂರ (ಶೇ 99.36), ಶ್ರೇಯಸ್‌ ಪಾಟೀಲ (ಶೇ 99.2), ಅಮಯ ಪಾಟೀಲ (ಶೇ 98.88), ಶ್ರೀಕರ ಗಾಂವಕರ (ಶೇ 98.88), ಕಾರ್ತಿಕ ರೇವಣಕರ (ಶೇ 98.72), ಅಕ್ಷತ ಪಾಟೀಲ (ಶೇ 98.56), ರಾಮ ಸಂಗೊಳಿ (ಶೇ98.56) ಉತ್ತಮ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT