ಮಂಗಳವಾರ, ಮೇ 24, 2022
30 °C
ಕಾರ್ಮಿಕರ ದಿನ ಇಂದು; ಎಸ್ಸೆಸ್ಸೆಲ್ಸಿಯಲ್ಲಿ ಹಮಾಲಿ ಕಾರ್ಮಿಕರ ಮಕ್ಕಳ ಅನನ್ಯ ಸಾಧನೆ

ಬೆವರ ಹನಿಗೆ ಬೆಲೆತಂದ ಸಾಧಕರು

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅವರೆಲ್ಲ ರಾಜ್ಯಕ್ಕೆ ಮೊದಲಿಗರೇನಲ್ಲ; ಆದರೆ, ಕುಟುಂಬದ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಛಲ ಬಿಡದೆ ದೊಡ್ಡ ಸಾಧನೆಯ ಕನಸು ಬೆನ್ನು ಹತ್ತಿದವರು. ಪರಿಣಾಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಎಲ್ಲರಿಂದಲೂ ಶಹಬ್ಬಾಸ್‌ ಎನಿಸಿಕೊಂಡಿದ್ದಾರೆ.

ಅಮರಗೋಳದ ಎಪಿಎಂಸಿಯಲ್ಲಿ ಹಮಾಲರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮಕ್ಕಳು ಈ ಸಾಧನೆ ಮಾಡಿದವರು. 20 ವರ್ಷಗಳಿಂದ ಹಮಾಲಿಯಾಗಿರುವ ದುರ್ಗಪ್ಪ ಚಿಕ್ಕತುಂಬಳ ಅವರ ಪುತ್ರಿ ಅನ್ನಪೂರ್ಣ ನವಲಗುಂದದ ರಾಣಿಚನ್ನಮ್ಮ ವಸತಿಶಾಲೆಯಲ್ಲಿ ಓದಿ ಶೇ 88ರಷ್ಟು ಫಲಿತಾಂಶ ಪಡೆದಿದ್ದಾಳೆ. ಒಟ್ಟು 625ಕ್ಕೆ 551 ಅಂಕಗಳನ್ನು ಗಳಿಸಿದ್ದಾಳೆ.

ಬೈರಿದೇವರಕೊಪ್ಪದಲ್ಲಿರುವ ಜಗದ್ಗುರು ಶಿವಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನ್ನಪೂರ್ಣ ಅರಾಗನೂರ 417, ಚಂದ್ರಿಕಾ ಹುಲಿಯಾಳ 390, ಗಣೇಶ ಅಂಬಿಗೇರ 382 ಮತ್ತು ದೇವರಾಜ ಅರಗಾನೂರು 353 ಅಂಕಗಳನ್ನು ಪಡೆದಿದ್ದಾರೆ.

ಅನ್ನಪೂರ್ಣ ಅರಾಗನೂರು ತಂದೆ ಶರಣಪ್ಪ, ದೇವರಾಜ ತಂದೆ ಭೀಮಣ್ಣ, ಗಣೇಶ ತಂದೆ ಶಿವಪ್ಪ ಹಮಾಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಚಂದ್ರಿಕಾ ತಂದೆ ಕಲ್ಲಪ್ಪ ಕಾರು ಚಾಲಕರಾಗಿದ್ದಾರೆ. 40 ವರ್ಷಗಳಿಂದ ಹಮಾಲಿ ಕೆಲಸ ಮಾಡುತ್ತಿರುವ ಅಜ್ಜ ಸಂಗಪ್ಪ ಕೆಳಗಿನಮನಿ ಅವರ ಮನೆಯಲ್ಲಿದ್ದುಕೊಂಡು ಚಂದ್ರಿಕಾ ಓದುತ್ತಿದ್ದಾಳೆ.

‘ಒಂದೂವರೆ ವರ್ಷದವಳಾಗಿದ್ದಾಗಿನಿಂದಲೇ ಚಂದ್ರಿಕಾ ನಮ್ಮ ಮನೆಯಲ್ಲಿದ್ದಾಳೆ. ನಮ್ಮಲ್ಲಿ ಹೆಚ್ಚು ಓದಿದವರು ಯಾರೂ ಇಲ್ಲ. ಆದ್ದರಿಂದ ಏನೇ ಕಷ್ಟ ಬಂದರೂ ಮೊಮ್ಮಗಳನ್ನು ಓದಿಸುತ್ತಿದ್ದೇನೆ. 40 ವರ್ಷಗಳಿಂದ ಹಮಾಲಿ ಕೆಲಸ ಮಾಡಿ ಕಾಲುಗಳು ಶಕ್ತಿ ಕಳೆದುಕೊಂಡಿವೆ. ಎದ್ದು ಓಡಾಡುವುದೂ ಕಷ್ಟವಿದೆ. ಆದರೆ, ಮೊಮ್ಮಗಳನ್ನು ಓದಿಸಬೇಕು ಎನ್ನುವ ಒಂದೇ ಆಸೆಯಿಂದ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಶ್ರಮಕ್ಕೆ ಬೆಲೆ ತಂದುಕೊಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಸಂಗಪ್ಪ ಭಾವುಕರಾದರು.

ಚಂದ್ರಿಕಾ ತಾಯಿ ಶೀಲಾ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡು ‘ಮಗಳು ಇನ್ನಷ್ಟು ಅಂಕಗಳನ್ನು ಪಡೆಯಬೇಕಿತ್ತು. ಕಷ್ಟದ ಪರಿಸ್ಥಿತಿಯಲ್ಲಿಯೂ ಆಕೆ ಈಗ ಪಡೆದಿರುವ ಫಲಿತಾಂಶ ಖುಷಿ ನೀಡಿದೆ. ಮಗಳಿಗೆ ಡಾಕ್ಟರ್‌ ಆಗಬೇಕೆನ್ನುವ ಆಸೆಯಿದೆ. ಆದರೆ ನಮಗೆ ಅಷ್ಟೊಂದು ಓದಿಸುವ ಶಕ್ತಿಯಿಲ್ಲ. ಕನಿಷ್ಠ ಎಂಜಿನಿಯರ್‌ ಆದರೂ ಓದಿಸುತ್ತೇವೆ’ ಎಂದರು.

ಅನ್ನಪೂರ್ಣ ಚಿಕ್ಕತುಂಬಳ ‘ಕನಿಷ್ಠ ಶೇ 90ಕ್ಕಿಂತಲೂ ಹೆಚ್ಚು ಅಂಕ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕಗಳು ಬಂದಿರುವ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುವೆ. ಈಗ ಬಂದಿರುವ ಅಂಕಗಳಿಂದ ಸಮಾಧಾನವಾಗಿದೆ. ನಮಗೋಸ್ಕರ ಅಪ್ಪ ಹಗಲಿರುಳು ಕಷ್ಟಪಡುತ್ತಾರೆ. ನಮಗೆ ಓದಲು ಸಾಧ್ಯವಾಗಿಲ್ಲ, ನೀವಾದರೂ ಚೆನ್ನಾಗಿ ಓದಿ ಎಂದು ಅಪ್ಪ ಆಗಾಗ ಹೇಳುತ್ತಿರುತ್ತಾರೆ. ಅವರ ಈ ಮಾತೇ ಯಾವಾಗಲೂ ಸ್ಫೂರ್ತಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.