ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ವರ್ತಕರ ಸಂಭ್ರಮ ಕಸಿದ ಮಳೆ !

Last Updated 2 ಸೆಪ್ಟೆಂಬರ್ 2014, 6:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶ ಹಬ್ಬದ ಅಂಗವಾಗಿ ಮಾರು­ಕಟ್ಟೆಯಲ್ಲಿ ತರಹೇವಾರಿ ಪಟಾಕಿಗಳು ಬಂದಿವೆ. ಇದೇ ಬಾರಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ 3–ಡಿ (ಮೂರು ಆಯಾಮ) ಪಟಾಕಿಗಳು, ಛೋಟಾ ಭೀಮ್‌, ಐಪಿಎಲ್‌ನಂತಹ ಪಟಾಕಿಗಳು ಜನರ ಸಂಭ್ರಮ­ವನ್ನು ಹೆಚ್ಚಿಸಿವೆ. ಆದರೆ, ಪಟಾಕಿ ಮಾರಾಟ ಮಾಡುವವರ ಮೊಗದಲ್ಲಿ ಮಾತ್ರ ಈ ಬಾರಿಯ ಗಜಮುಖನ ಹಬ್ಬ ಮಂದಹಾಸ ಮೂಡಿಸಿಲ್ಲ.

ನಗರದ ನೆಹರೂ ಮೈದಾನದಲ್ಲಿ ಅಳ­ವಡಿಸಲಾಗಿರುವ ಒಟ್ಟು 10 ತಾತ್ಕಾಲಿಕ ಮಳಿಗೆಗಳಲ್ಲಿ ಹಲವು ಬಗೆಯ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಆದರೆ, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ, ನಗರ­ವಲ್ಲದೇ ಬೇರೆ ಊರುಗಳಿಗೂ ಹಂಚಿಹೋಗಿರುವ ವ್ಯಾಪಾರ ಹೀಗೆ ವಿವಿಧ ಕಾರಣಗಳಿಂದಾಗಿ ಪಟಾಕಿ ಮಾರಾಟಗಾರರಿಗೆ ಈ ಹಬ್ಬ ಸಂಭ್ರಮ ತಂದಿಲ್ಲ.

ಸೌಲಭ್ಯಗಳ ಕೊರತೆ
‘ನೆಹರೂ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಯಾವುದೇ ಸೌಲಭ್ಯ­ಗಳೇ ಇಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿಯೇ ತಾತ್ಕಾ­ಲಿಕ

3–ಡಿ ಪಟಾಕಿ !
ಇದೇ ಬಾರಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ 3–ಡಿ (ಮೂರು ಆಯಾಮ) ಪಟಾಕಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಪಟಾಕಿ ಖರೀದಿಯೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕನ್ನಡಕ ನೀಡಲಾಗುತ್ತದೆ. ಈ ಪಟಾಕಿ ಹೊಡೆದಾಗ ವಿಶಿಷ್ಟ ರೀತಿಯಲ್ಲಿ ಮೂಡುವ ಚಿತ್ತಾರಗಳು ಈ ಕನ್ನಡಕದ ಮೂಲಕ ಅತ್ಯಾಕರ್ಷಕವಾಗಿ ಕಾಣುತ್ತವೆ ಎಂದು ವಿಮಲ್‌ ತಾಳಿಕೋಟೆ ವಿವರಿಸಿದರು.

ಇನ್ನು, ಛೋಟಾ ಭೀಮ್‌ ಪಟಾಕಿ ಮಕ್ಕಳನ್ನು ಆಕರ್ಷಿಸುತ್ತಿದೆ. ಡಬ್ಬದಲ್ಲಿನ ಪಟಾಕಿ ಸಿಡಿದ ನಂತರ ಕೆಲವು ಆಟಿಕೆ ಸಾಮಗ್ರಿಗಳು ಹೊರಗೆ ಬೀಳುತ್ತವೆ ಎಂದೂ ಹೇಳಿದರು. ಇವುಗಳ ಜೊತೆಗೆ ಐಪಿಎಲ್‌, ಬಾಲಿವುಡ್‌ ಪಟಾಕಿಗಳೂ ಲಭ್ಯ.

ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದೇವೆ’ ಎಂದು ಪಟಾಕಿ ಮಾರಾಟಗಾರರು ಹೇಳುತ್ತಾರೆ.

‘ಈ ಬಾರಿ ಹಬ್ಬಕ್ಕಿಂತ ಮುನ್ನವೇ ಮಳೆ ಆರಂಭ­ಗೊಂಡಿದೆ. ಇನ್ನೂ ನಿಂತಿಲ್ಲ. ಅಂಗಡಿಗಳನ್ನು ಅಳ­ವಡಿಸಿರುವ ಪ್ರೇಕ್ಷಕರ ಗ್ಯಾಲರಿ ಮುಂಭಾಗದ ಮೈದಾನ ಕೆಸರಿನ ಗದ್ದೆಯಂತಾಗಿದೆ. ಗ್ರಾಹಕರು ಈ ಕೆಸರನ್ನು ದಾಟಿ ಪಟಾಕಿ ಖರೀದಿಸಲು ಬರುವುದೇ ಅಪರೂಪ ಎನ್ನುವಂತಾಗಿದೆ. ಹೀಗಾಗಿ ಮೈದಾನ ಪ್ರವೇಶಿಸುವ ಗ್ರಾಹಕರು ಪ್ರವೇಶ ದ್ವಾರದ ಪಕ್ಕದಲ್ಲಿರುವ ಅಂಗಡಿಗಳಲ್ಲ ಖರೀದಿ ಮುಗಿಸಿ, ಮರಳುತ್ತಿದ್ದಾರೆ. ಉಳಿದ ಅಂಗಡಿಕಾರರು ವ್ಯಾಪಾರ ಇಲ್ಲದೇ ತೊಂದರೆ ಅನುಭವಿಸುಂತಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಂಗಡಿಕಾರರೊಬ್ಬರು ಹೇಳಿದರು.

‘ಮಳಿಗೆಗಳನ್ನು ಅಳವಡಿಸಲು ಅಗ್ನಿ ಶಾಮಕ ಕಚೇರಿಯಲ್ಲಿ ಪ್ರತಿ ಅಂಗಡಿಕಾರರು ₨ 2,000 ಶುಲ್ಕ ಭರಿಸಬೇಕು. ಪ್ರೇಕ್ಷಕರ ಗ್ಯಾಲರಿಯಲ್ಲಿ ತಾತ್ಕಾಲಿಕ ಮಳಿಗೆ ಅಳವಡಿಸುವ ಸಲುವಾಗಿ ಮಹಾನಗರ ನಗರ ಪಾಲಿಕೆಗೆ ದಿನವೊಂದಕ್ಕೆ ₨ 1,350 ಶುಲ್ಕ ತುಂಬಬೇಕು’ ಎಂದು ಪಟಾಕಿ ಮಾರಾಟಗಾರರಾದ ವಿಮಲ್‌ ತಾಳಿಕೋಟೆ ವಿವರಿಸಿದರು.

‘ಮೈದಾನ ಕೆಸರಿನ ಗದ್ದೆಯಾಗಿದೆ. ಇದರಿಂದ ವ್ಯಾಪಾರಕ್ಕೆ ತೊಂದರೆಯಾಗಿದ್ದು, ಈ ಜಾಗದಲ್ಲಿ ಮಣ್ಣು ಹಾಕಿಸಿ ಅನುಕೂಲ ಮಾಡಿಕೊಡುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಟಾಕಿ ಅಂಗಡಿಗಳ ಬಳಿ ಉಸುಕು ತುಂಬಿದ ಬಕೆಟ್‌ಗಳು, ನೀರಿರುವ ಡ್ರಮ್‌ ಹಾಗೂ ಅಗ್ನಿ ನಂದಿಸುವ ಸಾಧನಗಳನ್ನು ಇರಿಸುವುದು ಕಡ್ಡಾಯ. ಆದರೆ, ಕೆಸರು ದಾಟಿ ಬರುವ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಉಸುಕನ್ನು ಅಂಗಡಿ ಮುಂದಿನ ಕೆಸರಿನಲ್ಲಿ ಹಾಕಿದ್ದೇವೆ. ಹೀಗಾಗಿ ಯಾವ ಅಂಗಡಿ ಮುಂದಿನ ಬಕೆಟ್‌­ನಲ್ಲಿಯೂ ಉಸುಕು ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೊದಲು ಹುಬ್ಬಳ್ಳಿಯೇ  ಪಟಾಕಿಗೆ ದೊಡ್ಡ ಮಾರುಕಟ್ಟೆ ಇತ್ತು. ಗದಗ ಮತ್ತು ಹಾವೇರಿ ಜಿಲ್ಲೆಗಳ ರಚನೆಯಾದ ನಂತರ ವ್ಯಾಪಾರವೂ ವಿಕೇಂದ್ರಿಕರಣಗೊಂಡಿದೆ. ಇದರಿಂದ ಈಗ ಮೊದಲಿನಂತೆ ವ್ಯಾಪಾರ ಇಲ್ಲ. ಕಮರಿಪೇಟೆಯ ಆರ್ಥಿಕ ಸ್ಥಿತಿ ಕುಂಠಿತಗೊಂಡ ನಂತರ ಪಟಾಕಿ ವ್ಯಾಪಾರಕ್ಕೆ ಭಾರಿ ಹೊಡೆತ ಬಿತ್ತು. ಈಗಲೂ ವ್ಯಾಪಾರ ಚೇತರಿಸಿಕೊಳ್ಳುತ್ತಿಲ್ಲ’ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT