ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ: ವೈವಿಧ್ಯತೆಗೆ ಹೆಸರಾದ ಅನ್ನದಾನೀಶ್ವರ ಜಾತ್ರೆ

ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ, ಪುಸ್ತಕ ಬಿಡುಗಡೆ ಸಮಾರಂಭ
ಕಾಶೀನಾಥ ಬಿಳಿಮಗ್ಗದ
Published 22 ಫೆಬ್ರುವರಿ 2024, 4:07 IST
Last Updated 22 ಫೆಬ್ರುವರಿ 2024, 4:07 IST
ಅಕ್ಷರ ಗಾತ್ರ

ಮುಂಡರಗಿ: ಸಾಮಾನ್ಯವಾಗಿ ಬಹುತೇಕ ಜಾತ್ರೆಗಳು ಅಲ್ಲಿಯ ದೇವರ ಮಹಾರಥೋತ್ಸವ, ಅಗ್ನಿಕುಂಡ ಪ್ರವೇಶ, ಪಲ್ಲಕ್ಕಿ ಉತ್ಸವ ಮೊದಲಾದ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಆಚರಣೆಗಳ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಮಾದರಿಯಾಗಿದೆ.

ಕಳೆದ ಹಲವು ದಶಕಗಳಿಂದ ಪ್ರತಿ ವರ್ಷ ಜಾತ್ರೆಯಲ್ಲಿ ಎಲ್ಲ ಜಾತಿ, ಮತ, ಪಂಥಗಳ ಜನರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ 30ರಿಂದ 40 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ನೂರಾರು ಜಂಗಮ ವಟುಗಳಿಗೆ ಉಚಿತವಾಗಿ ವಟುದೀಕ್ಷೆ (ಅಯ್ಯಾಚಾರ) ನೆರವೇರಿಸಲಾಗುತ್ತದೆ.

ಅನ್ನದಾನೀಶ್ವರ ಸ್ವಾಮೀಜಿ ಶ್ರೇಷ್ಠ ಸಾಹಿತಿಗಳಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಶ್ರೀಗಳ ಗ್ರಂಥಗಳ ಜೊತೆಗೆ ಅನ್ಯ ಗ್ರಂಥಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಶ್ರೀಗಳು ರಚಿಸಿರುವ 160 ಗ್ರಂಥಗಳು ಸೇರಿ ಈವರೆಗೆ ಸುಮಾರು 250 ಗ್ರಂಥಗಳನ್ನು ಜಾತ್ರೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಅನ್ನದಾನೀಶ್ವರ ಜಾತ್ರೆಯು ಗ್ರಂಥಗಳ ಬಿಡುಗಡೆಯ ಜಾತ್ರೆಯೂ ಆಗಿದೆ.

12ನೇ ಶತಮಾನದ ಚನ್ನಬಸಣ್ಣನವರಿಂದ ವಿಭೂತಿ ಪಡೆದುಕೊಂಡು ಶರಣರ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠವು ಈ ಭಾಗದ ಒಂದು ಪ್ರಮುಖ ವೀರಶೈವ ಮಠವಾಗಿದೆ. ಮೂಲ ಅನ್ನದಾನೀಶ್ವರ ಸ್ವಾಮೀಜಿಯಿಂದ ಈಗಿನ ಅನ್ನದಾನೀಶ್ವರ ಸ್ವಾಮೀಜಿ ವರೆಗೆ ಒಟ್ಟು 10 ಪೀಠಾಧಿಪತಿಗಳು ಮಠವನ್ನು ಮುನ್ನಡೆಸಿದ್ದಾರೆ.

ಕಾಡಿನಲ್ಲಿದ್ದ ಬೇಡರನ್ನು ನಾಗರಿಕರನ್ನಾಗಿ ಮಾಡಿದ ಕೀರ್ತಿ ಮಠದ ಮೂಲ ಪೀಠಾಧಿಪತಿಗಳಿಗೆ ಸಲ್ಲುತ್ತದೆ. ಮಠದ ಇಂದಿನ ಪೀಠಾಧಿಪತಿ ಅನ್ನದಾನೀಶ್ವರ ಸ್ವಾಮೀಜಿ ಅವರು ಗುರುಕುಲ, ಶಾಲೆ, ಕಾಲೇಜು, ಉಚಿತ ಪ್ರಸಾದ ನಿಲಯ ಮೊದಲಾದವುಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿಗೆ ಮುಂದಾದರು. ಅವರ ಶ್ರಮದ ಫಲವಾಗಿ ಇಂದು ಮಠವು ಸುಮಾರು 35 ಶಾಲೆ ಕಾಲೇಜುಗಳ ಮೂಲಕ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ.

ಅನ್ನದಾನೀಶ್ವರ ಸ್ವಾಮೀಜಿಯ ಹಲವು ಗ್ರಂಥಗಳು ಇಂಗ್ಲಿಷ್ ಸೇರಿದಂತೆ ದೇಶದ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಕವಿವಿಯು ಅವರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಅವರಿಗೆ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅನ್ನದಾನೀಶ್ವರ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ.

ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ
ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ

ಅನ್ನದಾನೀಶ್ವರ ಜಾತ್ರಾ ಮಹೋತ್ಸವ

ಇಂದು ಪಟ್ಟಣದ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.22ರಂದು ಬೆಳಿಗ್ಗೆ ಮಠದಲ್ಲಿ ಉಚಿತ ಸಾಮೂಹಿಕ ವಿವಾಹ ಅನ್ನ ಸಂತರ್ಪಣೆ ಮಹಾರಥೋತ್ಸವ ಜರುಗಲಿವೆ. ಸಂಜೆ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ನಾಡಿವ ವಿವಿಧ ಮಠಾಧೀಶರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.23ರಂದು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಪ್ರಾರಂಭೋತ್ಸವ ಸಿಬ್ಬಂದಿ ಸಮಾವೇಶ ಪ್ರತಿಭಾ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ಜರಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT