ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: 78 ವರ್ಷಗಳ ದಾಖಲೆ ಸರಿಗಟ್ಟಿದ ಬಿಸಿಲು

ಉಷ್ಣಾಂಶ ಏರಿಕೆ ಮತ್ತು ಬಿಸಿಗಾಳಿಯಿಂದ ತತ್ತರಿಸಿರುವ ಜನರು
Last Updated 25 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ 78 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದೆ.1941ರಲ್ಲಿ ಅಂದರೆ ಏಳೂವರೆ ದಶಕಗಳ ಹಿಂದೆ ಗದಗ–ಬೆಟಗೇರಿ ಅವಳಿ ನಗರದಲ್ಲಿ 41.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆ. ಗುರುವಾರದ ಉಷ್ಣಾಂಶ ಈ ದಾಖಲೆಯನ್ನು ಸರಿಗಟ್ಟಿದೆ.

ಏ.25ರಂದು ನಗರದಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಮೂರು ವರ್ಷಗಳ ಹಿಂದೆ ಅಂದರೆ 2016ರ ಏಪ್ರಿಲ್‌ನಲ್ಲಿ 40.5 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಕಳೆದೊಂದು ದಶಕದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ ಇದಾಗಿತ್ತು. ಆದರೆ, ಈ ಬಾರಿ ಬಿಸಿಲು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ.

ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ಇನ್ನೊಂದು ವಾರದೊಳಗೆ ನಗರದ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ ಸಮೀಪಕ್ಕೆ ಬರಲಿದೆ. ಮಾರ್ಚ್ 25ರಂದು ರಂಗಪಂಚಮಿ ದಿನ ಗದಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಸು ಮಳೆಯಾಗಿದ್ದು, ಬಿಟ್ಟರೆ ನಂತರ ಒಂದು ಹನಿಯೂ ಸುರಿದಿಲ್ಲ. ಮಧ್ಯಾಹ್ನದ ವೇಳೆಗೆ ಭೂಮಿ ಕಾದ ಕಾವಲಿಯಂತಾಗುತ್ತಿದೆ. ನಗರ ಮತ್ತು ಜಿಲ್ಲೆಯಾದ್ಯಂತ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಅಕ್ಷರಶಃ ಪರದಾಡುತ್ತಿದ್ದಾರೆ. ಬೇಸಿಗೆ ರಜೆ ಇದ್ದರೂ, ಬಿಸಿಲಿನ ತಾಪದಿಂದಾಗಿ ಮಕ್ಕಳು ಆಟವಾಡಲೂ ಸಹ ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ಇದೆ.

ಬಿಸಿಲಿನ ತೀವ್ರತೆಯಿಂದ ಮಧ್ಯಾಹ್ನದ ವೇಳೆ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಾಣುತ್ತಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಸ್ಟೇಷನ್‌ ರಸ್ತೆ, ಬ್ಯಾಂಕ್‌ ರಸ್ತೆಗಳಲ್ಲಿ ಮಧ್ಯಾಹ್ನದ ವೇಳೆಗೆ ಜನಸಂದಣಿ ಕರಗುತ್ತಿದೆ. ನಗರದ ಭೂಮರೆಡ್ಡಿ ವೃತ್ತ, ಗಾಂಧಿ ವೃತ್ತ ಸೇರಿದಂತೆ ಅಲ್ಲಲ್ಲಿ ಸ್ಥಾಪಿಸಲಾಗಿರುವ ಅರವಟಿಗೆಗಳ ಮುಂದೆ ಜನ ಕುಡಿಯುವ ನೀರಿಗಾಗಿ ಮುಗಿ ಬೀಳುತ್ತಿದ್ದಾರೆ.

ಏಪ್ರಿಲ್‌ನಲ್ಲಿ ಜಿಲ್ಲೆಯಲ್ಲಿ 37ರಿಂದ 38 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ,ಈ ಬಾರಿ ಏ. 1ರಿಂದಲೇ ಬಿಸಿಲಿನ ಝಳದಲ್ಲಿ ಏರಿಕೆ ಆಗಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ತೀವ್ರ ಬಿಸಿಲಿರುತ್ತದೆ. ಸಾರ್ವಜನಿಕರು ಬಿಸಿಲು ಮತ್ತು ಬಿಸಿಗಾಳಿಯಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಮನೆಯಿಂದ ಹೊರಗಡಿ ಇಡುತ್ತಿದ್ದಾರೆ. ರಾತ್ರಿ ವೇಳೆ, ವಿಪರೀತ ಸೆಕೆಯಿಂದಾಗಿ ಜನರು ಮನೆಯ ತಾರಸಿ ಮೇಲೆ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುತ್ತಿದ್ದಾರೆ.

ಏಪ್ರಿಲ್‌ ತಿಂಗಳ ಜಿಲ್ಲೆಯ ಗರಿಷ್ಠ ಉಷ್ಣಾಂಶ

2018; 39.04

2017; 39.08

2016; 40.05

2015; 38.01

2014; 38.05

2013; 39.06

2012; 38.06

2011; 37.06

2010; 37.09

1941; 41.01*

(* ಜಿಲ್ಲೆಯಲ್ಲಿ ದಾಖಲಾಗಿರುವ ಸಾರ್ವಕಾಲಿಕ ದಾಖಲೆ ಉಷ್ಣಾಂಶ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT