ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ನಿರ್ವಹಣೆ ಕೊರತೆಯಿಂದ ಬಳಲುತ್ತಿರುವ ಗ್ರಾಮ

ಸಮರ್ಪಕವಾಗಿರದ ನೀರು ಸರಬರಾಜು ವ್ಯವಸ್ಥೆ; ಸ್ವಚ್ಛತೆ ಮರೆಮಾಚಿಕೆ
ಶ್ರೀಶೈಲ ಎಂ. ಕುಂಬಾರ
Published 14 ಫೆಬ್ರುವರಿ 2024, 5:20 IST
Last Updated 14 ಫೆಬ್ರುವರಿ 2024, 5:20 IST
ಅಕ್ಷರ ಗಾತ್ರ

ಗಜೇಂದ್ರಗಡ: ಕೆಲ ವರ್ಷಗಳ ಹಿಂದೆ ನೀರಿನ ಸಮಸ್ಯೆಗೆ ಪ್ರತಿಭಟನೆ ನಡೆಸಿ ಜಿಲ್ಲೆಯಲ್ಲಿಯೇ ಗಮನ ಸೆಳೆದಿದ್ದ ಲಕ್ಕಲಕಟ್ಟಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ) ನೀರು ಬಂದ ಮೇಲೆ ಗ್ರಾಮದಲ್ಲಿ ನೀರಿನ ಬವಣೆ ನೀಗಿತ್ತು. ಆದರೆ ಇತ್ತಿಚೇಗೆ ಗ್ರಾಮ ಪಂಚಾಯ್ತಿಯವರು ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡದ ಕಾರಣ ಮತ್ತೆ ನೀರಿನ ಸಮಸ್ಯೆ ಎದುರಾಗಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ 5– 6 ಬೋರ್‌ವೆಲ್‌ಗಳ ನೀರು ಹಾಗೂ ಡಿಬಿಒಟಿ ನೀರು ಬರುತ್ತಿದ್ದರೂ, ಗ್ರಾಮದಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ನೀರಿನ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದೆ. ಅಲ್ಲದೆ ಗ್ರಾಮದಲ್ಲಿನ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಕೆಲವು ಕಡೆಗಳಲ್ಲಿ ನಲ್ಲಿಗಳು ಚರಂಡಿಯಲ್ಲಿದ್ದು, ಕೊಳಚೆಯಲ್ಲಿಯೇ ಕುಡಿಯುವ ನೀರು ತುಂಬಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗ್ರಾಮದ ಮುಖ್ಯ ಚರಂಡಿಗಳು ಶಿಥಿಲಗೊಂಡಿದ್ದು, ಹೂಳು ತುಂಬಿಕೊಂಡಿವೆ. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯೇ ಕಣ್ಣಿಗೆ ಬೀಳುತ್ತದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಂದಿನ ಮುಖ್ಯ ರಸ್ತೆ ಹಾಗೂ ಗ್ರಾಮದಿಂದ ದಿಂಡೂರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಚರಂಡಿಗಳು ಶಿಥಿಲಗೊಂಡಿದ್ದು, ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಶಾಲೆಗೆ ಬರುವ ಮಕ್ಕಳು ಚರಂಡಿ ನೀರನ್ನು ದಾಟಿಯೇ ಶಾಲೆಗೆ ಹೋಗಬೇಕು.
ಗ್ರಾಮ ಪಂಚಾಯ್ತಿಯಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ 15ನೇ ಹಣಕಾಸಿನಲ್ಲಿ ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಅಲ್ಲದೆ ಚರಂಡಿಗಳನ್ನು ಸ್ವಚ್ಛಗೊಳಿಸದೆ ಸಣ್ಣ ಪುಟ್ಟ ಸ್ವಚ್ಛತೆ ಮಾಡಿಸಿ ಜನರ ತೆರಿಗೆ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

‘ಗ್ರಾಮದ ಅನೇಕರ ಜನತಾ ಮನೆ ಬಿಲ್‌ ಬೇರೆಯವರ ಹೆಸರಿನಲ್ಲಿ ಮಾಡಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿ ಹಣ ನೀಡಿಲ್ಲ. ಬಹಳಷ್ಟು ಬೋಗಲ್‌ ಬಿಲ್‌ ಮಾಡಲಾಗಿದೆ. ಈ ಕುರಿತು ಕೇಳಿದರೆ ನೆಪ ಹೇಳುತ್ತಾರೆ. ಪಂಚಾಯ್ತಿ ಕಚೇರಿಗೆ ಪಿಡಿಒ ಮಂಜುನಾಥ ಪಾಟೀಲ ಸರಿಯಾಗಿ ಬರಲ್ಲ. ಪೋನ್‌ ಮಾಡಿದರೆ ಸಂಪರ್ಕಕ್ಕೆ ಸಿಗಲ್ಲ ಎಂದು ದೂರುತ್ತಾರೆ ಗ್ರಾಮಸ್ಥ ಜಾಕಿರಹುಸೇನ ನದಾಫ್.

‘ಗ್ರಾಮದಲ್ಲಿ ಹೊಳೆ ನೀರು ಹಾಗೂ 5ರಿಂದ 6 ಬೋರ್‌ವೆಲ್‌ ನೀರು ಇದ್ದರೂ ಸಹ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯ್ತಿಯವರಿಗೆ ಆಗುತ್ತಿಲ್ಲ. ಪಂಚಾಯ್ತಿ ಸಿಬ್ಬಂದಿ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಹೀಗಾಗಿ ಗ್ರಾಮದ ವಿವಿಧ ಓಣಿಗಳು ಸೇರಿದಂತೆ ಜನತಾ ಪ್ಲಾಟ್‌ ಹಾಗೂ ಆನಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ’ ಎಂದು ಗ್ರಾಮದ ಜನತಾ ಪ್ಲಾಟ್‌ ನಿವಾಸಿ ಹನಮಂತ ರಾಠೋಡ ಹೇಳಿದರು.

ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದ ಓಣಿಯೊಂದರಲ್ಲಿ ಸಿ.ಸಿ ರಸ್ತೆ ಇಲ್ಲದಿರುವುದು
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದ ಓಣಿಯೊಂದರಲ್ಲಿ ಸಿ.ಸಿ ರಸ್ತೆ ಇಲ್ಲದಿರುವುದು
ಅಳೆಬಸಪ್ಪ ಬೆನಕನವರಿ ಲಕ್ಕಲಕಟ್ಟಿ ಗ್ರಾಮಸ್ಥ.
ಅಳೆಬಸಪ್ಪ ಬೆನಕನವರಿ ಲಕ್ಕಲಕಟ್ಟಿ ಗ್ರಾಮಸ್ಥ.
ಜಾಕಿರಹುಸೇನ ನದಾಫ್ ಲಕ್ಕಲಕಟ್ಟಿ ಗ್ರಾಮಸ್ಥ.
ಜಾಕಿರಹುಸೇನ ನದಾಫ್ ಲಕ್ಕಲಕಟ್ಟಿ ಗ್ರಾಮಸ್ಥ.
ಹನಮಂತ ರಾಠೋಡ ಜನತಾ ಪ್ಲಾಟ್‌ ನಿವಾಸಿ ಲಕ್ಕಲಕಟ್ಟಿ.
ಹನಮಂತ ರಾಠೋಡ ಜನತಾ ಪ್ಲಾಟ್‌ ನಿವಾಸಿ ಲಕ್ಕಲಕಟ್ಟಿ.
ಮಂಜುನಾಥ ಬೆನಕನವಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಕಲಕಟ್ಟಿ.
ಮಂಜುನಾಥ ಬೆನಕನವಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಕಲಕಟ್ಟಿ.

ಗ್ರಾಮದ ಪ್ರಾಥಮಿಕ ಶಾಲೆ ಎದುರಿನ ರಸ್ತೆಯಲ್ಲಿ ಚರಂಡಿ ನೀರು ಶೇಖರಣೆಯಾಗಿದ್ದು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ. ಗ್ರಾ.ಪಂ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ -ಅಳೆಬಸಪ್ಪ ಬೆನಕನವರಿ ಗ್ರಾಮಸ್ಥ

-ಗ್ರಾಮದಲ್ಲಿ 2 ಹೊಸ ಬೋರ್‌ವೆಲ್ ಕೊರೆಸಲಾಗಿದೆ. ಆದರೆ ನೀರು ಸರಬರಾಜಿಗೆ ಪೈಪ್‌ಲೈನ್‌ ಅಳವಡಿಸಿಲ್ಲ. 2 ತಿಂಗಳ ಹಿಂದೆ ಚರಂಡಿ ಸ್ವಚ್ಛ ಗೊಳಿಸಲಾಗಿದೆ. ಶಿಥಿಲಗೊಂಡ ಚರಂಡಿಗಳನ್ನು ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು- ಮಂಜುನಾಥ ಬೆನಕನವಾರಿ ಅಧ್ಯಕ್ಷ ಗ್ರಾ.ಪಂ ಲಕ್ಕಲಕಟ್ಟಿ

ಜೆಜೆಎಂ ಕಾಮಗಾರಿಯಿಂದ ಹಾಳಾದ ಸಿ.ಸಿ ರಸ್ತೆ ಗ್ರಾಮದಲ್ಲಿ ಜಲ ಜೀವನ್‌ ಯೋಜನೆ ಅನುಷ್ಠಾನಗೊಳಿಸಲು ಪ್ರತಿ ಓಣಿಯಲ್ಲಿ ಸಿ.ಸಿ ರಸ್ತೆ ಒಡೆದು ನೆಲ ಅಗೆದು ಪೈಪ್‌ಲೈನ್‌ ಅಳವಡಿಸಲಾಗಿದೆ.ಕೆಲ ಕಡೆ ಅಗೆದ ರಸ್ತೆಯನ್ನು ದುರಸ್ತಿ ಮಾಡಿದರೇ ಇನ್ನೂ ಕೆಲಕಡೆ ಹಾಗೇ ಬಿಡಲಾಗಿದೆ. ದುರಸ್ತಿ ಮಾಡಿಸಿದ ಕಾಮಗಾರಿಯೂ ಕಳಪೆಯಾಗಿದ್ದು ಅಲ್ಲಲ್ಲಿ ತೆಗ್ಗು ನಿರ್ಮಾಣವಾಗಿ ಕೊಳಚೆ ನೀರು ಶೇಖರಣೆಯಾಗುತ್ತದೆ.

ಚರಂಡಿಯಲ್ಲಿರುವ ನಲ್ಲಿಗಳು ಗ್ರಾಮದಿಂದ ಬೇವಿನಕಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಚರಂಡಿಯಲ್ಲೇ ಕುಡಿಯುವ ನೀರಿನ ನಲ್ಲಿಗಳಿವೆ. ಚರಂಡಿ ತುಂಬ ಹೂಳು ತುಂಬಿಕೊಂಡಿದೆ. ನಲ್ಲಿಯಲ್ಲಿ ನೀರು ಬಂದಾಗ ಇಲ್ಲಿನ ಜನರು ಚರಂಡಿಯಲ್ಲಿ ಇಳಿದು ಕೊಳಚೆಯಲ್ಲಿ ನಿಂತು ಕುಡಿಯುವ ನೀರು ತುಂಬಿಕೊಳ್ಳಬೇಕು. ಮಳೆಗಾಲದಲ್ಲದಂತೂ ನಲ್ಲಿಗಳಲ್ಲಿ ಕೊಳಚೆ ನೀರು ತುಂಬಿಕೊಳ್ಳುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT