ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಾಪುರ ರತಿ, ಕಾಮದೇವ: ಹೋಳಿ ಹಬ್ಬ ಇಂದು

ನರಗುಂದ ಪಟ್ಟಣದಲ್ಲಿ 30ಕ್ಕೂ ಹೆಚ್ಚು ಕಡೆ ಕಾಮದಹನ
ಬಸವರಾಜ ಹಲಕುರ್ಕಿ
Published 26 ಮಾರ್ಚ್ 2024, 5:06 IST
Last Updated 26 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ನರಗುಂದ: ರಂಗುರಂಗಿನ ಹೋಳಿ ಹಬ್ಬ ತಾಲ್ಲೂಕಿನಾದ್ಯಂತ ಮಂಗಳವಾರ ನಡೆಯಲಿದ್ದು, ಕಾಮದಹನ ಹಾಗೂ ಬಣ್ಣದಾಟವಾಡಲು ಚಿಣ್ಣರು, ಯುವಕರು ತುದಿಗಾಲಿನಲ್ಲಿ ನಿಂತಿದ್ದಾರೆ. 

ಚೌಡಿ (ಚಾವಡಿ) ಕಾಮಣ್ಣ: ಪಟ್ಟಣದಲ್ಲಿ 30ಕ್ಕೂ ಹೆಚ್ಚು ಕಡೆ ಕಾಮದಹನ ನಡೆಯುತ್ತದೆ. ಈ ಎಲ್ಲ ಕಾಮದಹನಕ್ಕೂ ಮೂಲ ಕಾಮದೇವ ದಂಡಾಪುರ ಓಣಿಯ ಚಾವಡಿ (ಸರ್ಕಾರಿ) ಕಾಮಣ್ಣ. ಇದು ಭಾಸ್ಕರರಾವ್ ಭಾವೆ (ನರಗುಂದ ಅರಸು ಬಾಬಾಸಾಹೇಬ) ಅವರ ಕಾಲದಿಂದಲೂ ಇಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಹುಣ್ಣಿಮೆ ಮಾರನೇ ದಿನ ಸುಡಲಾಗುತ್ತದೆ.

ಚವಡಿ ಕಾಮಣ್ಣ ಎಲ್ಲ ಓಣಿಯ ಕಾಮದೇವರಿಗೆ ಮೂಲ. ಹಲವು ದಶಕಗಳ ಹಿಂದಿನವರೆಗೂ ಇದ್ದ ಸರ್ಕಾರಿ ಚಾವಡಿಯಲ್ಲಿ ಹುಣ್ಣಿಮೆ ದಿನ ಸಂಜೆ ಮೂರ್ತಿ ಪ್ರತಿಷ್ಠಾಪಿಸಿ ಮಾರನೇ ದಿನ ದಹನ ಮಾಡಲಾಗುತ್ತಿತ್ತು. ಈ ಕಾಮದಹನ ಮಾಡಿದ ನಂತರ ಇದೇ ಬೆಂಕಿ ತೆಗೆದುಕೊಂಡು ಹೋಗಿ 10ಕ್ಕೂ ಹೆಚ್ಚು ಕಡೆ ಕಾಮದಹನ ಮಾಡಲಾಗುತ್ತದೆ. ನಂತರ ಹೋಳಿ ಹಬ್ಬ ಆರಂಭವಾಗಿ ಬಣ್ಣದಾಟ ನಡೆಯುತ್ತಿತ್ತು. ಅದೇ ಸಂಪ್ರದಾಯ ಈಗಲೂ ಮುಂದುವರೆದಿದೆ.

ಆದರೆ, ಚಾವಡಿ ನೆಲಸಮವಾಗಿದ್ದರಿಂದ ಜಾಗದ ಪಕ್ಕದಲ್ಲೇ ಇರುವ ಉಡಚಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಚೌಡಿ ಕಾಮದೇವನ ಪ್ರತಿಷ್ಠಾಪನೆ ಬಾರಕೇರ ಕುಟುಂಬದವರಿಂದ ನಡೆದು ವಿಶೇಷ ಪೂಜೆ ಹಾಗೂ ನೈವೇದ್ಯ ನೆರವೇರಿಸಲಾಗುತ್ತದೆ.

ಈ ಕಾಮದಹನಕ್ಕಾಗಿ ನಿಗದಿತ ಜಾಗ ಇಂದಿಗೂ ಕಾಯ್ದಿರಿಸಲಾಗಿದೆ. ಬೆಳಿಗ್ಗೆ 6 ಗಂಟೆಗೆ ಕಾಮದಹನ ನಡೆದು, ನಂತರ ಉಳಿದ ಕಾಮದಹನ ನಡೆಯುತ್ತವೆ ಎಂದು ಇತಿಹಾಸ ಪ್ರಸಿದ್ಧ ಚೌಡಿ ಕಾಮಣ್ಣನ ಕುರಿತು ಸಂಜೀವ ಬೋಸಲೆ ಹಾಗೂ ಗುರುನಾಥ ಸವದತ್ತಿ ಹೇಳುತ್ತಾರೆ. ನರಗುಂದ ಪಟ್ಟಣದ ಜನರೆಲ್ಲ ಇಲ್ಲಿ ಸೇರುವುದು ವಿಶೇಷ.

ಶತಮಾನಗಳ ಹಿಂದಿನ ಕಾಮ, ರತಿದೇವ: ದಂಡಾಪುರ ಓಣಿಯ ರಾಮದುರ್ಗ ಮನೆಯವರ ಪಕ್ಕದಲ್ಲೇ 1885ರಿಂದಲೂ  ಇಷ್ಟಾರ್ಥ ಪೂರೈಸುವ ರತಿ,ಕಾಮದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೋಳಿ ಹಬ್ಬದಂದು ಎರಡು ದಿನ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲೇ ಪ್ರಾಚೀನ ಕಾಲದ ಕರಿಗಳ (ಉದ್ದನೆಯ ಕಂಬ) ಪ್ರತಿಷ್ಠಾಪಿಸಲಾಗುತ್ತದೆ.

ಹೋಳಿ ಹಬ್ಬದ ದಿನ ಮಂಗಳವಾರ ಬೆಳಿಗ್ಗೆ ಎಲ್ಲ ಕಾಮದಹನಕ್ಕೆ ದಿಕ್ಸೂಚಿಯಂತೆ ಇದನ್ನು ವಾದ್ಯಮೇಳದೊಂದಿಗೆ ತೆಗೆದುಕೊಂಡು ಹೋಗುವುದು ವಿಶೇಷ.

ನರಗುಂದ ದಂಡಾಪುರ ಓಣಿಯಲ್ಲಿ ಶತಮಾನಗಳಿಂದಲೂ ಪ್ರತಿಷ್ಠಾಪಿಸಲಾಗುತ್ತಿರುವ ಕಾಮರತಿದೇವರ ದೃಶ್ಯ.
ನರಗುಂದ ದಂಡಾಪುರ ಓಣಿಯಲ್ಲಿ ಶತಮಾನಗಳಿಂದಲೂ ಪ್ರತಿಷ್ಠಾಪಿಸಲಾಗುತ್ತಿರುವ ಕಾಮರತಿದೇವರ ದೃಶ್ಯ.
ನರಗುಂದ ದಂಡಾಪುರ ಓಣಿಯಲ್ಲಿ ಶತಮಾನಗಳಿಂದಲೂ ಪ್ರತಿಷ್ಠಾಪಿಸಲಾಗುತ್ತಿರುವ ಕರಿಗಳ
ನರಗುಂದ ದಂಡಾಪುರ ಓಣಿಯಲ್ಲಿ ಶತಮಾನಗಳಿಂದಲೂ ಪ್ರತಿಷ್ಠಾಪಿಸಲಾಗುತ್ತಿರುವ ಕರಿಗಳ

ಹುಬ್ಬಿ ನಕ್ಷತ್ರದಲ್ಲಿ ಕಾಮದಹನ ಕಾಮದಹನದಲ್ಲಿ ವಿಶೇಷತೆ ಪಡೆದಿದ್ದು ಅದಕ್ಕೆ ಪೂರಕವಾಗಿ ಹೋಳಿ ಹಬ್ಬದ ಎರಡು ದಿನ ಮೊದಲೇ ದಂಡಾಪುರದ ಎರಡನೇ ಗಲ್ಲಿ (ಅಗ್ರಹಾರ)ಯಲ್ಲಿ ಬ್ರಾಹ್ಮಣ ಸಮುದಾಯದವರು ಕಾಮದಹನ ಮಾಡುವುದು ವಿಶೇಷ. ಆದ್ದರಿಂದ ಇಲ್ಲಿ ಭಾನುವಾರ ರಾತ್ರಿಯೇ ಕಾಮದಹನ ನಡೆದಿದೆ. ಪಟ್ಟಣದಲ್ಲಿ ದಂಡಾಪುರದಲ್ಲಿ ಹೋಳಿ ಹಬ್ಬ ವಿಶೇಷತೆ ಪಡೆದಿದೆ. ಬಣ್ಣದ ಮಾರಾಟ ಹಲಗೆ ಸಪ್ಪಳ ಸೋಮವಾರ ಜೋರಾಗಿ ಕಂಡು ಬಂದಿತು. ಚಿಣ್ಣರು ಪರಸ್ಪರ ಬಣ್ಣ ಎರಚಿ ಮುನ್ನಾ ದಿನವೇ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT