ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಲಸೌಲಭ್ಯ ವಂಚಿತ ಪೇಠಾಲೂರ ಗ್ರಾಮ

ಸಾರ್ವಜನಿಕರ ನಿರೀಕ್ಷೆಯಷ್ಟು ನಡೆಯದ ಅಭಿವೃದ್ಧಿ ಕಾರ್ಯ
ಲಕ್ಷ್ಮಣ ಎಚ್ ದೊಡ್ಡಮನಿ
Published 24 ಜನವರಿ 2024, 4:55 IST
Last Updated 24 ಜನವರಿ 2024, 4:55 IST
ಅಕ್ಷರ ಗಾತ್ರ

ಡಂಬಳ: ಹೋಬಳಿ ವ್ಯಾಪ್ತಿಯ ಪೇಠಾಲೂರ ಗ್ರಾಮದಲ್ಲಿ ಸಾರ್ವಜನಿಕರು ನಿರೀಕ್ಷೆ ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹಾಗಾಗಿ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ನಗರ ಪ್ರದೇಶದ ಸೌಲಭ್ಯಕ್ಕೆ ಕಡಿಮೆ ಇಲ್ಲದಂತೆ ಗ್ರಾಮದಲ್ಲಿ ಮೂಲಸೌಲಭ್ಯವನ್ನು ಕಲ್ಪಿಸಬೇಕು. ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಡಂಬಳ ಹೋಬಳಿ ಪೇಠಾಲೂರ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ 5,800 ಜನಸಂಖ್ಯೆ ಇದೆ. ಪ್ರಸ್ತುತ ಪುರುಷ ಮತ್ತು ಮಹಿಳೆಯರು ಸೇರಿ ಅಂದಾಜು 6,900 ಜನಸಂಖ್ಯೆಯನ್ನು ಹೊಂದಿದೆ. ಒಟ್ಟು 11 ಸದಸ್ಯರಿದ್ದು ಆರು ಮಹಿಳೆಯರು ಮತ್ತು ಐವರು ಪುರುಷ ಸದಸ್ಯರಿದ್ದಾರೆ. ಒಟ್ಟು 1,785 ಕುಟುಂಬ ವಾಸ ಮಾಡುತ್ತಿದ್ದು ಈಗಾಗಲೆ 1,760 ಮನೆಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಪ್ರತಿ ಕುಟುಂಬ ಮನೆಗಳಿಗೆ ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ನಳ ಸಂರ್ಪಕ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ವ್ಯವಸ್ಥೆ ಆಗಿದೆ. ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಬೇಕು. ಸಾರ್ವಜನಿಕರಿಂದ ಒಳಚರಂಡಿ ನಿರ್ಮಾಣ ಮಾಡುವ ಕುರಿತು ಒತ್ತಾಯ ಕೇಳಿ ಬಂದಿದೆ.

‘ಗ್ರಾಮದ ಆರೋಗ್ಯ ಉಪಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿವಿಧ ಗ್ರಾಮ ಮತ್ತು ನಗರ ಪ್ರದೇಶಗಳಿಗೆ ಹೋಗಲು ಇನ್ನೂ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ವಿಶೇಷವಾಗಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸಾರ್ವಜನಿಕ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಭರಮಪ್ಪ ಬಾರಕೇರ ಮತ್ತು ಮುತ್ತಪ್ಪ ಜೋಗರಡ್ಡಿ.

ಹೆರಿಗೆ ಮತ್ತು ತುರ್ತು ಚಿಕಿತ್ಸೆಗಾಗಿ ಸಮೀಪದ ಜಂತಲಿ ಶಿರೂರ ಗ್ರಾಮ ಅಥವಾ ತಾಲ್ಲೂಕು ಆಸ್ಪತ್ರಗೆ ಹೋಗಬೇಕಿದೆ. ಗ್ರಾಮದಲ್ಲಿನ ಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕಾರಣ ಕಾರಣ ಕೊಳಚೆನೀರು ರಸ್ತೆ ಮೇಲೆ ನಿಂತು ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಆದ ಕಾರಣ, ಗ್ರಾಮದ ಸ್ವಚ್ಛತೆಗೂ ಆದ್ಯತೆ ನೀಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಗ್ರಾಮದಲ್ಲಿ ಗಟಾರಗಳು ಭರ್ತಿಯಾಗುತ್ತಿರುವದರಿಂದ ದಿನಗೂಲಿ ಕೂಲಿ ಕಾರ್ಮಿಕರ ಮೂಲಕ ಗಟಾರ ಸ್ವಚ್ಛಗೊಳಿಸಲಾಗುತ್ತಿದೆ. ನಮ್ಮ ಪಂಚಾಯ್ತಿಯಲ್ಲಿ ಸ್ಚಚ್ಛತೆಗಾರರು ಇಲ್ಲ. ಇಬ್ಬರು ಸ್ವಚ್ಛತಾಗಾರರನ್ನು ನೇಮಕ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಕಳಿಸಿದ್ದೇವೆ ಎಂದು ಪಿಡಿಒ ವಸಂತ ಎಲ್ ಗೋಕಾಕ ತಿಳಿಸಿದ್ದಾರೆ.

ಪೇಠಾಲೂರ ಗ್ರಾಮದಲ್ಲಿ ರಸ್ತೆಯ ಬದಿಯಲ್ಲೆ ತ್ಯಾಜ್ಯವಸ್ತುಗಳನ್ನು ಸುರಿದಿರುವುದು
ಪೇಠಾಲೂರ ಗ್ರಾಮದಲ್ಲಿ ರಸ್ತೆಯ ಬದಿಯಲ್ಲೆ ತ್ಯಾಜ್ಯವಸ್ತುಗಳನ್ನು ಸುರಿದಿರುವುದು

ಸಾಮೂಹಿಕ ಶೌಚಾಲಯ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಈ ಕುರಿತು ಅಗತ್ಯ ಕ್ರಮ ತಗೆದುಕೊಳ್ಳಲಾಗುವುದು. ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಮುಖ್ಯ ಉಡಚವ್ವ ಹಾಲಪ್ಪ -ಬೆಣಕಲ್ ಪೇಠಾಲೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ಗ್ರಾಮದ ಅಭಿವೃದ್ಧಿಗೆ ಬೇಕಾದ ಕ್ರಿಯಾಯೋಜನೆ ರೂಪಿಸಲಾಗಿದ್ದು ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಸರ್ಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ

-ವಸಂತ ಎಲ್. ಗೋಕಾಕ ಪೇಠಾಲೂರ ಗ್ರಾಮ ಪಂಚಾಯ್ತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT