ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕಕ್ಕಾಗಿ ನಾವು’ ಜನಜಾಗೃತಿ ಬೈಕ್ ರ‍್ಯಾಲಿ ನಾಳೆ

ಕೆಆರ್‌ಎಸ್‌ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಮೂಗನೂರ ಮಾಹಿತಿ
Published 27 ಫೆಬ್ರುವರಿ 2024, 4:59 IST
Last Updated 27 ಫೆಬ್ರುವರಿ 2024, 4:59 IST
ಅಕ್ಷರ ಗಾತ್ರ

ಗದಗ: ‘ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಫೆ.19ರಂದು ಬೆಂಗಳೂರಿನ ದೇವನಹಳ್ಳಿಯಿಂದ ಆರಂಭಿಸಿರುವ ‘ಕರ್ನಾಟಕಕ್ಕಾಗಿ ನಾವು’ ಜನಜಾಗೃತಿ ಬೈಕ್ ರ‍್ಯಾಲಿ ಫೆ.28ರಂದು ಗದಗ ಜಿಲ್ಲೆ ಪ್ರವೇಶಿಸಲಿದೆ’ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಮೂಗನೂರ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಫೆ.28ರಂದು ಬುಧವಾರ ಅಡವಿಸೋಮಾಪೂರ ಬಳಿಯಿಂದ ಗದಗ ನಗರ ಪ್ರವೇಶಿಸಿ, ನಗರದ ಭೂಮರಡ್ಡಿ ವೃತ್ತದ ಬಳಿಯ ಪುಟ್ಟರಾಜರ ಪ್ರತಿಮೆ ಹಿಂಭಾಗ ಸಾರ್ವಜನಿಕ ಸಭೆ ನಡೆಯಲಿದೆ. ಅಲ್ಲಿಂದ ಲಕ್ಷ್ಮೇಶ್ವರ ಮೂಲಕ ಹಾವೇರಿಗೆ ತೆರಳಲಿದೆ’ ಎಂದು ತಿಳಿಸಿದರು.

‘ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಛ ಪ್ರಾಮಾಣಿಕ ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ನಡೆಯುತ್ತಿರುವ ಈ ಬೈಕ್ ರ‍್ಯಾಲಿಯು ರಾಜ್ಯದ 31 ಜಿಲ್ಲೆಗಳಲ್ಲೂ ಸಂಚರಿಸಿ, ಮಾರ್ಚ್ 2ರಂದು ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶದ ಮೂಲಕ ರ‍್ಯಾಲಿ ಅಂತ್ಯಗೊಳ್ಳಲಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳನ್ನು ಎಸಗದೆ ಹಣ-ಹೆಂಡ ಹಂಚದೆ, ಜಾತಿ-ಕೋಮುಗಳ ಅನೈತಿಕ ರಾಜಕಾರಣ ಮಾಡದೆ ಕೆಆರ್‌ಎಸ್ ಪಕ್ಷವು 195 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗಿತ್ತು. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಕೆಆರ್‌ಎಸ್ ಪಕ್ಷ ಸ್ಪರ್ಧಿಸಲಿದೆ’ ಎಂದು ತಿಳಿಸಿದರು.

‘ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಹ ಪಕ್ಷ ಸ್ಪರ್ಧಿಸಲಿದ್ದು, ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಪ್ರಾಮಾಣಿಕ ಮತ್ತು ನ್ಯಾಯಪರ ವ್ಯಕ್ತಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದೆ’ ಎಂದು ತಿಳಿಸಿದರು.

ಫಕೀರಗೌಡ ತಮ್ಮನಗೌಡ್ರ, ಮೌಲಾಸಾಬ, ರಫೀಕ್‌ಸಾಬ ಅಣ್ಣಿಗೇರಿ, ಸುಲೇಮಾನ್‌ ಬೆಟಗೇರಿ, ಬಸವರಾಜ ಅರಗಂಜಿ, ಖಾದರ್‌ಸಾಬ್‌ ತೆಕ್ಕಲಕೋಟಿ, ಕೋಟೇಶ ಮುಳಗುಂದ, ಕೃಷ್ಣ ವಡವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT