ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ: ಚಿಂಚಲಿ ಗ್ರಾಮದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ

ಚಿಂಚಲಿ: ಎರಡನೇ ವಾರ್ಡ್‌ನಲ್ಲಿ ಸ್ವಚ್ಛತೆ ಮರೆತ ಗ್ರಾಮ ಪಂಚಾಯ್ತಿ
ಚಂದ್ರಶೇಖರ್ ಕ.ಭಜಂತ್ರಿ
Published 7 ಫೆಬ್ರುವರಿ 2024, 4:42 IST
Last Updated 7 ಫೆಬ್ರುವರಿ 2024, 4:42 IST
ಅಕ್ಷರ ಗಾತ್ರ

ಮುಳಗುಂದ: ಇಲ್ಲಿಗೆ ಸಮೀಪದ ಚಿಂಚಲಿ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಗ್ರಾಮ ಪಂಚಾಯ್ತಿ ಸ್ವಚ್ಛತೆ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಪರಿಣಾಮವಾಗಿ ಇಲ್ಲಿನ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ.

ಇಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿವೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿದೆ. ಈ ವಾರ್ಡ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಮಾಡಿಲ್ಲ. ಇದರಿಂದ ಮನೆಗಳ ಕೊಳಚೆ ನೀರು ಮುಂದೆ ಸಾಗುತ್ತಿಲ್ಲ. ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಕೊಳಚೆ ಸಂಗ್ರಹವಾಗಿ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಸಂಜೆ ವೇಳೆ ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಗ್ರಾಮ ಪಂಚಾಯ್ತಿ ಹತ್ತಿರದ ಚರಂಡಿಯಲ್ಲಿ ಹುಲ್ಲು ಬೆಳೆದು ಸುಮಾರು ದಿನಗಳೇ ಕಳೆದಿವೆ. ಆದರೂ ಸಹ ಸ್ವಚ್ಛಗೊಳಿಸಿಲ್ಲ. ಸುಗಮ ಸಂಚಾರಕ್ಕಾಗಿ ಸಿಸಿ ರಸ್ತೆ, ಚರಂಡಿ ಮಾಡಿದ್ದಾರೆ. ಆದರೆ ತೇರಿನಗಡ್ಡಿ ಮನೆ ಹತ್ತಿರ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ನೀರು ಮುಂದೆ ಸಾಗಲು ಚರಂಡಿ ಸಹ ಇಲ್ಲ. ಇದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿತಾಣವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

‘ಜೆಜೆಎಂ ಕಾಮಗಾರಿಗೆ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಇದರಿಂದ ಬೈಕ್‌ ಸವಾರರು, ವೃದ್ದರು, ಮಕ್ಕಳು ನಡೆದಾಡುವುದೇ ಕಷ್ಟವಾಗಿದೆ. ಚಕ್ಕಡಿ, ಟ್ರ್ಯಾಕ್ಟರ್‌ಗಳು ಅಡ್ಡಾಡಲು ತೊಂದರೆಯಾಗುತ್ತಿದೆ. ಗುಂಡಿ ಮುಚ್ಚುವಂತೆ ಮನವಿ ಮಾಡಿದರೂ ಪಿಡಿಒ ಮಾತ್ರ ನನಗ್ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ಸದಾನಂದ ಕಮ್ಮಾರ ಆರೋಪಿಸಿದರು.

‘ತೇರಿನ ಮನೆ ಹತ್ತಿರ 2016ರಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಗ್ರಂಥಾಲಯದ ಕಟ್ಟಡ ಸ್ಲ್ಯಾಬ್‌ವರೆಗೂ ನಿರ್ಮಿಸಲಾಗಿದ್ದು, ಅಪೂರ್ಣವಾಗಿ ನಿಂತಿದೆ. ಅಪೂರ್ಣ ಕಟ್ಟಡದಲ್ಲಿ ಕೆಲವು ಕಿಡಿಗೇಡಿಗಳು ಹಗಲು ಹೊತ್ತಿನಲ್ಲಿ ಇಸ್ಪೀಟ್‌ ಅಡ್ಡೆ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಅಭಿವೃದ್ದಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ದಾದಾಪೀರ ನದಾಫ್‌ ಆರೋಪಿಸಿದರು.

ಗ್ರಾಮ ಪಂಚಾಯ್ತಿ ಪಿಡಿಒ ಸದಸ್ಯರ ಮಾತು ಕೇಳುತ್ತಿಲ್ಲ ಗ್ರಾಮದ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಹಲವು ಬಾರಿ ಹೇಳಿದರೂ ಎನು ಪ್ರಯೋಜನವಾಗಿಲ್ಲ ಪಿಡಿಒ ವಿರುದ್ದ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ
- ನಿಂಗಪ್ಪ ತೇರಿನಗಡ್ಡಿ ಗ್ರಾ.ಪಂ ಸದಸ್ಯ ಚಿಂಚಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT