ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೆ ತಪ್ಪಿಸಲು ‘ನರೇಗಾ’ ಉದ್ಯೋಗಾವಕಾಶ

ಏಪ್ರಿಲ್ 1ರಿಂದ ಕಾಮಗಾರಿ ಆರಂಭ, ಐದು ಲಕ್ಷಕ್ಕೂ ಹೆಚ್ಚು ಮಾನವ ದಿನ ಸೃಜನೆ ಗುರಿ
ನಾಗರಾಜ ಎಸ್. ಹಣಗಿ
Published 22 ಮಾರ್ಚ್ 2024, 5:47 IST
Last Updated 22 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಭೀಕರ ಬರಗಾಲದ ಪರಿಣಾಮ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಗ್ರಾಮಸ್ಥರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಕೆಲಸ ಅರಸಿ ಊರು ಬಿಟ್ಟು ಗುಳೆ ಹೋಗುವ ತಯಾರಿಯಲ್ಲಿದ್ದಾರೆ. ಆದರೆ ಗ್ರಾಮಸ್ಥರು ಕೆಲಸ ಹುಡುಕಿಕೊಂಡು ಬೇರೆ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯ್ತಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಲು ಮುಂದಾಗಿದೆ.

2024-25ನೇ ಸಾಲಿಗಾಗಿ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯಡಿ ಜನರಿಗೆ ಕೆಲಸ ನೀಡುವ ಸಲುವಾಗಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ ಏಪ್ರಿಲ್ ಒಂದರಿಂದ ಕಾಮಗಾರಿ ಆರಂಭಗೊಳ್ಳಲಿವೆ.

ನರೇಗಾ ಯೋಜನೆಯಡಿ ಕಲ್ಲು ತಡೆ, ಕಿಂಡಿ ಅಣೆಕಟ್ಟು ನಿರ್ಮಾಣ, ಕೆರೆಗಳ ನಿರ್ಮಾಣ ಮತ್ತು ಹಳೇ ಕೆರೆಗಳ ಹೂಳೆತ್ತುವುದು, ಗೋ ಕಟ್ಟೆ ನಿರ್ಮಾಣ, ಕೃಷಿಹೊಂಡ, ಬದು ನಿರ್ಮಾಣ, ಕೊಳವೆ ಬಾವಿಗಳ ಮರುಪೂರಣ, ಸರ್ಕಾರಿ ಕಚೇರಿ ಮತ್ತು ಗ್ರಾಮ ಪಂಚಾಯ್ತಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ರಚನೆ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ.

ಅದರಂತೆ ರಸ್ತೆಬದಿ ನೆಡುತೋಪು, ಕೃಷಿ ಅರಣ್ಯೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು, ಅರಣ್ಯ ಪ್ರದೇಶಗಳಲ್ಲಿ ಕಂದಕಗಳನ್ನು ನಿರ್ಮಿಸುವುದು, ದನಗಳ ಶೆಡ್, ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ತಾಲ್ಲೂಕು ಪಂಚಾಯ್ತಿ ಸಿಬ್ಬಂದಿ, ಗ್ರಾಮಕಾಯಕ ಮಿತ್ರರು, ಮೇಟ್‍ಗಳು, ಬಿಎಫ್‍ಟಿಗಳು ಜನರ ಮನೆ ಬಾಗಿಲಿಗೆ ತೆರಳಿ ಕೆಲಸ ಬೇಡಿಕೆ ಅಂದರೆ ಫಾರ್ಮ್ ನಮೂನೆ-6ರಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.

‘ಗುಳೆ ಬಿಡಿ ಕೆಲಸಕ್ಕೆ ಆಗಿ ರೆಡಿ’ ಎಂಬ ಘೋಷಣೆಯೊಂದಿಗೆ ಏಪ್ರಿಲ್ 1ರಿಂದ ತಾಲ್ಲೂಕಿನಾದ್ಯಂತ ನರೇಗಾ ಯೋಜನೆಯಡಿ ಕಾಮಗಾರಿಗಳು ಆರಂಭಗೊಳ್ಳಲಿವೆ. ಇದಕ್ಕಾಗಿ ಈ ವರ್ಷ ₹19 ಕೋಟಿ ಖರ್ಚು ಮಾಡಿ ಐದು ಲಕ್ಷಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.

‘ಈಗಾಗಲೇ ಯೋಜನೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಕಾರಣ ಜನರು ಬೇರೆ ಊರುಗಳಿಗೆ ದುಡಿಯಲು ಹೋಗುವ ಅಗತ್ಯ ಇಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT