ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ | ಆಧುನಿಕ ಭರಾಟೆ: ಕುಗ್ಗಿದ ಕೌದಿ ಬೇಡಿಕೆ

ಚಳಿಗಾಲಕ್ಕೆ ಬೆಚ್ಚಗೆ, ಬೇಸಿಗೆಯಲ್ಲಿ ತಣ್ಣಗಿನ ಅನುಭವ ನೀಡುವ ಕೌದಿ
ಶ್ರೀಶೈಲ ಎಂ. ಕುಂಬಾರ
Published 10 ಡಿಸೆಂಬರ್ 2023, 5:50 IST
Last Updated 10 ಡಿಸೆಂಬರ್ 2023, 5:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಹಳೆ ಸೀರೆ, ಹರಿದ ಅಂಗಿ, ದೋತರ, ಪ್ಯಾಂಟ್ ಹೀಗೆ ಉಟ್ಟು ಹರಿದ ಹಳೆ ಬಟ್ಟೆಗಳಿಂದ ಸಿದ್ಧಪಡಿಸುವ ಕೌದಿಯನ್ನು ಹೊದ್ದುಕೊಳ್ಳುವುದೆಂದರೆ ಉತ್ತರ ಕರ್ನಾಟಕದ ಜನರಿಗೆ ಬಲು ಹಿತ. ಆದರೆ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಕೌದಿಯ ಬಳಕೆ ಕಡಿಮೆಯಾಗಿದ್ದು, ಕೌದಿಯ ಜಾಗವನ್ನು ಜಮಕಾನ, ಚಾದರ, ರಗ್ಗುಗಳು ಆಕ್ರಮಿಸಿಕೊಂಡು ತುಂಡು ಬಟ್ಟೆ ಸೇರಿಸಿ ಕೌದಿ ಹೊಲಿಯುವವರ ಬದುಕು ತುಂಡಾಗಿಸಿವೆ.

ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಣ್ಣಗಿನ ಅನುಭವ ನೀಡುವ ಕೌದಿಯು ಉತ್ತರ ಕರ್ನಾಟಕದಲ್ಲಿ ಮೋಚಿಗೇರ ಸಮುದಾಯದವರ ವಿಶಿಷ್ಟ ಕಲೆ. ಗಜೇಂದ್ರಗಡ, ಸೂಡಿ, ಇಟಗಿ ಸೇರಿದಂತೆ ಹಲವು ಊರುಗಳಲ್ಲಿ ಈ ಕುಟುಂಬಗಳು ಕೌದಿ ಹೊಲಿಯುವ ಕಾಯಕವನ್ನು ಇನ್ನೂ ಮುಂದುವರೆಸಿಕೊಂಡು ಬಂದಿದ್ದಾರೆ.

‘ಕಂಡ ಕಂಡವರಿಗೆ ಕೌದಿ ಹೊಲಿಯ್ಯಾಕ ಬರಂಗಿಲ್ಲ’ ಎಂಬ ಹಳ್ಳಿಗಳಲ್ಲಿ ಕೇಳಿ ಬರುವ ಈ ಮಾತು ಅಕ್ಷರಶಃ ನಿಜ. ತುಂಡು ಬಟ್ಟೆಗಳನ್ನು ಸೇರಿಸಿ ವಿವಿಧ ವಿನ್ಯಾಸಗಳಲ್ಲಿ ತಯಾರಿಸುವ ಕೌದಿಗಳು ನೋಡಲು ಸುಂದರವಾಗಿರುತ್ತವೆ. ಅದರಲ್ಲೂ ತ್ರಿಭುಜಾಕೃತಿಯ ತುಂಡು ಬಟ್ಟೆಗಳನ್ನು ಸೇರಿಸಿ ಹೊಲಿಯುವ ಪಗಡಿ ಕೌದಿ ಸುಂದರ ಹಾಗೂ ಆಕರ್ಷಕವಾಗಿರುತ್ತದೆ.

ಈ ಜನಾಂಗದವರು ಹಳ್ಳಿಗಳಿಗೆ ಹೋಗಿ ಕೌದಿ ಹೊಲಿಸುವವರ ಮನೆಯಲ್ಲಿನ ಹಳೆಯ ಬಟ್ಟೆಗಳನ್ನು ತಂದು ಅವುಗಳನ್ನು ಹರಿದು, ಹಾಸಿ, ಸಣ್ಣ ಸಣ್ಣ ಬಟ್ಟೆಗಳನ್ನು ಒಳಗೆ ಹಾಕಿ ದೊಡ್ಡ ಬಟ್ಟೆಗಳನ್ನು ಮೇಲೆ ಹಾಕಿ ಹೊಲಿಯುತ್ತಾರೆ. ದಿನಕ್ಕೊಂದು ಅಥವಾ ಎರಡು ಕೌದಿ ಹೊಲಿಯುವ ಇವರು ಒಂದು ಕೌದಿಗೆ ಸುಮಾರು ₹300 ಪಡೆಯುತ್ತಾರೆ.

‘ಹಿಂದಿನಿಂದ ಬಂದಿರುವ ಕುಲ ಕಸಬೆಂದು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ದಿನಕ್ಕೆ ಒಂದೆರಡು ಕೌದಿ ಹೊಲಿಯುತ್ತೇವೆ. ಹೊಲಿಯುವಾಗ ಮುದುಡಿಯಾದರೆ, ಹೊಲಿಗೆ ಸರಿಯಾಗದಿದ್ದರೆ ಹೊಲಿಸುವವರು ಕಿರಿ ಕಿರಿ ಮಾಡುತ್ತಾರೆ. ಇದಕ್ಕೆ ತಾಳ್ಮೆ ಬೇಕು. ಬಗ್ಗಿ ಹೊಲಿಯುವುದರಿಂದ ಕುತ್ತಿಗೆ ನೋವು ಹೆಚ್ಚಾಗಿ ಕಾಡುತ್ತದೆ’ ಎನ್ನುತ್ತಾರೆ ಗಜೇಂದ್ರಗಡದ ಕೌದಿ ಹೊಲಿಯುವ ಮಹಿಳೆ ಗಂಗವ್ವ ಕ್ವಾಟಿ.

‘ಬಿಸಾಡಿದ ಹಳೆಯ ಬಟ್ಟೆಗಳು, ಹಾಸಿಗೆ­ಯಾಗಿ, ಹೊದಿಕೆ­ಯಾಗಿ ನೆರವಾಗುತ್ತವೆ. ಬೇಸಿಗೆಯಲ್ಲಿ ಹಾಸಿಕೊಳ್ಳುವುದಕ್ಕೂ, ಮಳೆ, ಚಳಿಗಾಲದಲ್ಲಿ ಹೊದ್ದುಕೊಳ್ಳುವುದಕ್ಕೂ ಬಳಕೆಯಾಗುವ ಕೌದಿ ಅತ್ಯಂತ ಆಪ್ತ ಎಂಬುದು ಅನೇಕರಿಗೆ ಗೊತ್ತಿಲ್ಲ’ ಎನ್ನುತ್ತಾರೆ ನಾಗಮ್ಮ ಗೊಂಡಬಾಳ.

ಗಜೇಂದ್ರಗಡದ ಸಿದ್ದಾರೂಢ ಮಠದ ಹತ್ತಿರ ಕೌದಿ ಹೊಲಿಯುತ್ತಿರುವ ಮಹಿಳೆಯರು
ಗಜೇಂದ್ರಗಡದ ಸಿದ್ದಾರೂಢ ಮಠದ ಹತ್ತಿರ ಕೌದಿ ಹೊಲಿಯುತ್ತಿರುವ ಮಹಿಳೆಯರು
ನಮ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೌಶಲಾಭಿವೃದ್ದಿ ಯೋಜನೆಯಲ್ಲಿ ಉತ್ತರ ಕರ್ನಾಟಕದ ವಿಶಿಷ್ಟ ಕಲೆಯಾಗಿರುವ ಕೌದಿ ಹೊಲಿಯುವುದಕ್ಕೆ ಸರ್ಕಾರ ಉತ್ತೇಜನ ನೀಡಬೇಕಿದೆ
ನಾಗರಾಜ ಕ್ವಾಟಿ ಮೋಚಿ ಸಮುದಾಯದ ಯುವಕ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT