ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ಬತ್ತಿದ ನದಿ: ಬೀದಿಗೆ ಬಿದ್ದ ಮೀನುಗಾರರು

ಅನ್ಯ ಕೆಲಸ ಗೊತ್ತಿಲ್ಲ; ಮೀನುಗಾರಿಕೆ ಇಲ್ಲದೇ ಕಂಗಾಲಾಗಿರುವ ಬೆಸ್ತರು
Published 14 ಮೇ 2024, 4:42 IST
Last Updated 14 ಮೇ 2024, 4:42 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹರಿದಿರುವ ತುಂಗಭದ್ರಾ ನದಿಯು ಕಳೆದ ಜನವರಿಯಿಂದ ಸಂಪೂರ್ಣ ಬರಿದಾಗಿದ್ದು, ಜೀವನ ನಿರ್ವಹಣೆಗೆ ಮೀನುಗಾರಿಕೆಯನ್ನೇ ಅವಲಂಬಿಸಿದ್ದ ತಾಲ್ಲೂಕಿನ ಮೀನುಗಾರ ಕುಟುಂಬಗಳ ಬದುಕು ಬೀದಿಗೆ ಬೀಳುವಂತಾಗಿದೆ.

ಆರು ತಿಂಗಳನಿಂದ ನದಿಯಲ್ಲಿ ನೀರಿಲ್ಲವಾದ್ದರಿಂದ ಮೀನುಗಾರಿಕೆ ಇಲ್ಲದೆ ಮೀನುಗಾರರ ಕುಟುಂಬಗಳ ತೀವ್ರ ತೊಂದರೆ ಅನುಭವಿಸುತ್ತಿವೆ. ಸಂಕ್ರಾಂತಿಯ ನಂತರ ನೀರಿಲ್ಲದೆ ಬರಿದಾಗಿರುವ ತುಂಗಭದ್ರಾ ನದಿಯಂತೆ ತಾಲ್ಲೂಕಿನ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಹಮ್ಮಿಗಿ ಮೊದಲಾದ ಗ್ರಾಮಗಳಲ್ಲಿರುವ ಸಾವಿರಾರು ಬಡ ಮೀನುಗಾರರ ಕುಟುಂಬಗಳ ಬದುಕು ಕೂಡ ಬರಿದಾಗಿದೆ.

ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಯೊಂದರಲ್ಲಿಯೇ ಸುಮಾರು 1,500 ಜನಸಂಖ್ಯೆ ಹೊಂದಿರುವ 300 ಬಡ ಮೀನುಗಾರ ಕುಟುಂಬಗಳು ವಾಸಿಸುತ್ತಿದ್ದು, ಹಲವು ತಿಂಗಳಿನಿಂದ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಬಡ ಕುಟುಂಬಗಳ ಕೆಲವು ಸದಸ್ಯರು ಕೂಲಿಗಾಗಿ ದೂರದ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗಿದ್ದು, ಅವರೆಲ್ಲ ನದಿಗೆ ನೀರು ಬರುವುದನ್ನೇ ಕಾಯುತ್ತಲಿದ್ದಾರೆ.

ಕಳೆದ ಮುಂಗಾರಿನಲ್ಲಿ ತಾಲ್ಲೂಕಿನಾದ್ಯಂತ ಸಕಾಲದಲ್ಲಿ ಮಳೆಯಾಗದೆ ರೈತರು ಸರಿಯಾಗಿ ಬಿತ್ತನೆ ಮಾಡದೆ, ಕೃಷಿ ಕೂಲಿ ಕಾರ್ಮಿಕರೆಲ್ಲ ಉದ್ಯೋಗ ದೊರೆಯದೆ ಪರದಾಡುವಂತಾಗಿತ್ತು. ಪ್ರಸ್ತುತ ವರ್ಷ ಮಳೆಯಾಗದೆ ಇರುವುದರಿಂದ ಕೃಷಿ ಕೂಲಿ ಕಾರ್ಮಿಕರ ಜೊತೆಗೆ ಮೀನುಗಾರ ಕುಟುಂಬಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ನದಿಯಲ್ಲಿ ಭರಪೂರ ನೀರಿದ್ದರೆ ಇಲ್ಲಿಯ ಮೀನುಗಾರರ ಕುಟುಂಬದವರಿಗೆ ಕೈತುಂಬಾ ಕೆಲಸಗಳಿರುತ್ತವೆ. ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ, ಕೊಪ್ಪಳ ಮೊದಲಾದ ಪಟ್ಟಣಗಳಿಗೆ ನಿತ್ಯ ಐದಾರು ಕ್ವಿಂಟಲ್ ಮೀನು ಸರಬರಾಜು ಮಾಡಿ ಕೈತುಂಬಾ ಕಾಸು ಮಾಡಿಕೊಳ್ಳುತ್ತಾರೆ. ಆದರೆ ನದಿಯಲ್ಲಿ ನೀರಿಲ್ಲದ್ದರಿಂದ ಅವರ ಬದುಕು ಈಗ ನೀರಿನಿಂದ ಆಚೆ ಬಿದ್ದ ಮೀನಿನಂತಾಗಿದೆ.

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮೀನುಗಾರಿಕೆ ಇಲಾಖೆಯ ಕಾರ್ಯಾಲಯಗಳಿದ್ದು, ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೊರ್ಲಹಳ್ಳಿ ಗ್ರಾಮದ ಮೀನುಗಾರರು ಆರೋಪಿಸುತ್ತಾರೆ.

ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೀನುಗಾರಿಕೆ ಇಲಾಖೆ ವತಿಯಿಂದ ಬಲೆ, ಗಾಳ ಮೊದಲಾದವುಗಳನ್ನು ಒಳಗೊಂಡಿರುವ ಕಿಟ್‍ಗಳನ್ನು ವಿತರಿಸಲಾಗುತ್ತಿತ್ತು. ಆದರೆ ನಾಲ್ಕು ವರ್ಷಗಳಿಂದ ಮೀನುಗಾರರಿಗೆ ಮೀನುಗಾರಿಕೆ ಕಿಟ್‍ಗಳನ್ನು ವಿತರಿಸಿಲ್ಲ ಎಂದು ಮೀನುಗಾರರು ದೂರಿದ್ದಾರೆ.

‘ಮೀನುಗಾರರಿಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕರಾವಳಿ ಭಾಗದ ಮೀನುಗಾರರಿಗೆ ಮಾತ್ರ ಬಹುತೇಕ ಯೋಜನೆಗಳು ತಲುಪುತ್ತಲಿವೆ. ಬಯಲುಸೀಮೆಯ ಮೀನುಗಾರರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದ್ದು, ಸಹಾಯಧನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕರಾವಳಿ ಪ್ರದೇಶದ ಮೀನುಗಾರರಿಗೆ ಮಾತ್ರ ನೀಡಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಕೊರ್ಲಹಳ್ಳಿ ಗ್ರಾಮದ ಮುತ್ತು ಆರೋಪಿಸಿದರು.

‘ಸಕಾಲದಲ್ಲಿ ಸಮರ್ಪಕವಾಗಿ ಮಳೆಯಾಗದೆ ಇರುವುದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಕೃಷಿ ಕೂಲಿಯು ಮೀನುಗಾರರ ಕುಟುಂಬಗಳಿಗೆ ದೊರೆಯದಂತಾಗಿದೆ. ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲದ್ದರಿಂದ ಇಲ್ಲಿಯ ಮೀನುಗಾರರ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ’ ಎಂದು ಮಹೇಶ ಕಿಳ್ಳಿಕ್ಯಾತರ ಅಳಲು ತೋಡಿಕೊಂಡರು.

ಸರ್ಕಾರ ಮೀನುಗಾರರಿಗೆ ನೀಡುವ ಸೌಲಭ್ಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಎಲ್ಲ ಸೌಲಭ್ಯಗಳನ್ನು ಕರಾವಳಿ ಮೀನುಗಾರರಿಗೆ ಮಾತ್ರ ನೀಡುತ್ತಲಿದೆ. ಬಯಲುಸೀಮೆ ಮೀನುಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
ಪರಸಪ್ಪ ಕಿಳ್ಳಿಕ್ಯಾತರ ಕೊರ್ಲಹಳ್ಳಿ ಗ್ರಾಮದ ಮೀನುಗಾರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT