ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾರಿ ಬಂದ್‌, ಗಿಡಗಳ ನಾಶ: ನಿಡಗುಂದಿ ಗ್ರಾಮದಲ್ಲಿ ಪವನ ವಿದ್ಯುತ್‌ ಕಂಪನಿಯ ಕೆಲಸ

ಚಂದ್ರು ಎಂ. ರಾಥೋಡ್
Published 1 ಮಾರ್ಚ್ 2024, 5:57 IST
Last Updated 1 ಮಾರ್ಚ್ 2024, 5:57 IST
ಅಕ್ಷರ ಗಾತ್ರ

ನರೇಗಲ್:‌ ಸಮೀಪದ ನಿಡಗುಂದಿ ಗ್ರಾಮದ ವ್ಯಾಪ್ತಿಯಲ್ಲಿ ಪವನ ವಿದ್ಯುತ್‌ ಕಂಪನಿಯವರು ರಸ್ತೆಪಕ್ಕದ ಕಿರು ಹಳ್ಳಕ್ಕೆ ಅಡ್ಡಲಾಗಿ ಅಪಾರ ಪ್ರಮಾಣದಲ್ಲಿ ಗರಸು ಹಾಕಿ ಮುಚ್ಚಿದ್ದಾರೆ. ಇದರ ಮೇಲೆ ಸಾಗಿ ಪವನ ವಿದ್ಯುತ್‌ ಉತ್ಪಾದನೆಗಾಗಿ ವಿವಿಧೆಡೆ ಕಂಬಗಳನ್ನು ಅಳವಡಿಸುತ್ತಿದ್ದಾರೆ.

ನರೇಗಲ್-ಗಜೇಂದ್ರಗಡ ಮಾರ್ಗದ ರಸ್ತೆಯ ನಿಡಗುಂದಿ ಗ್ರಾಮದ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಕ್ರಾಸ್‌ ಹಾಗೂ ನಿಡಗುಂದಿ ಬಸವೇಶ್ವರ ದೇವಸ್ಥಾನದ ನಡುವೆ ನಿಡಗುಂದಿ ಗ್ರಾಮಕ್ಕೆ ಹೋಗುವಾಗ ಎಡಕ್ಕೆ ಬರುವ ಹೊಲವೊಂದರಲ್ಲಿ ಬಹುರಾಷ್ಟ್ರೀಯ ಪವನ ವಿದ್ಯುತ್‌ ಖಾಸಗಿ ಕಂಪನಿಯವರು ಬೃಹತ್‌ ಆಕಾರದ ಕಂಬಗಳನ್ನು ಅಳವಡಿಸುತ್ತಿದ್ದಾರೆ. ಆದರೆ ಕಾಮಗಾರಿ ಸ್ಥಳಕ್ಕೆ ವಾಹನಗಳ ಮೂಲಕ ಹೋಗುವುದಕ್ಕಾಗಿ ರಸ್ತೆ ಪಕ್ಕದಲ್ಲಿದ್ದ ಕಿರು ಹಳ್ಳದ ದಾರಿಯನ್ನು ವಿಸ್ತರಣೆ ಮಾಡಿದ್ದಾರೆ. ಫ್ಯಾನ್‌ ಕಂಬಗಳನ್ನು ಹಾಗೂ ಕಬ್ಬಿಣವನ್ನು ಹೊತ್ತು ಸಾಗುವ ವಾಹನಗಳ ಬೇಡಿಕೆಗೆ ಅನುಗುಣವಾಗಿ ದೊಡ್ಡಪ್ರಮಾಣದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಗರಸು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿ ಬೆಳೆಯಲಾಗಿದ್ದ ಹಾಗೂ ಅರಣ್ಯ ಇಲಾಖೆಯಿಂದ ನೆಡಲಾಗಿದ್ದ ಕೆಲವು ಗಿಡಗಳನ್ನು ನಾಶಪಡಿಸಿದ್ದಾರೆ.

ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಅಥವಾ ದೊಡ್ಡ ಗಾತ್ರದ ಪೈಪುಗಳನ್ನು ಜೋಡಣೆ ಮಾಡಿದ ನಂತರ ಸಂಚಾರ ಮಾಡಿದರೆ ತೊಂದರೆ ಆಗುತ್ತಿರಲಿಲ್ಲ. ಆದರೆ ಹಳ್ಳಕ್ಕೆ ಅಡ್ಡಲಾಗಿ ಗರಸು ಹಾಕಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಲು ದಾರಿ ಇಲ್ಲದಂತಾಗುತ್ತದೆ. ಮೇಲ್ಭಾಗದ ಹೊಲಗಳಿಂದ ಹರಿದು ಬರುವ ಮಳೆ ನೀರು ಮುಂದಕ್ಕೆ ಹರಿದು ಹೋಗದೇ ಅಕ್ಕಪಕ್ಕದ ಹೊಲಗಳಿಗೆ ನುಗ್ಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಮತ್ತು ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.

‘ತಮ್ಮ ವೈಯಕ್ತಿಕ ಲಾಭಕ್ಕಾಗಿ ಫಲವತ್ತಾದ ಕೃಷಿ ಭೂಮಿಯನ್ನು ನಾಶಪಡಿಸುತ್ತಿರುವ ಖಾಸಗಿ ಕಂಪನಿಯವರು ಗಿಡಗಳನ್ನು ಕಡಿದು ಇಲ್ಲಿನ ಹಳ್ಳ, ಸರುವು, ಕಿರು ಹಳ್ಳಗಳ ದಿಕ್ಕುಗಳನ್ನೇ ಬದಲಿಸಿದ್ದಾರೆ. ಮಳೆಗಾಲದಲ್ಲಿ ನೀರು ಹರಿದು ಹೋಗುವ ಮಾರ್ಗಗಳನ್ನು ನಾಶಪಡಿಸಿದ್ದಾರೆ. ಇದು ಮುಂಬರುವ ದಿನಗಳಲ್ಲಿ ರೈತರ ಜಮೀನುಗಳ ಮೇಲೆ ಪ್ರಭಾವ ಬೀರಲಿದೆ’ ಎಂದು ರೈತರಾದ ಶರಣಪ್ಪ ಕಟ್ಟಿಮನಿ, ಬಸಪ್ಪ ಮಾದರ, ರೇಣಪ್ಪ ಹರಿಜನ ಆರೋಪಿಸಿದರು.

ಪ್ರಾಕೃತಿಕವಾಗಿ ಸಮಸ್ಯೆ ಉಂಟು ಮಾಡುತ್ತಿರುವ ಖಾಸಗಿ ಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ಹಾಗೂ ಸ್ಥಳೀಯ ಅಧಿಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಯವರು ಇಂದು ನಮ್ಮ ಭಾಗದಲ್ಲಿದ್ದು ಮುಂದೊಂದು ದಿನ ಬೇರೆ ಊರಿಗೆ ಹೋಗುತ್ತಾರೆ. ಆದರೆ ಒಂದೇ ಕಡೆ ಇದ್ದು ಜೀವನ ನಡೆಸಬೇಕಾದ ರೈತರು ಹಾಗೂ ನರೇಗಲ್‌ ಹೋಬಳಿ ಭಾಗದ ಜನರು ತೊಂದರೆ ಒಳಗಾಗುತ್ತಾರೆ. ಆದ್ದರಿಂದ ಈ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರೈತರಾದ ಎಂ. ಎಸ್.‌ ಬೂದಿಹಾಳ, ರಮೇಶ ಪೊಲೀಸ್‌ ಪಾಟೀಲ ಒತ್ತಾಯಿಸಿದರು.

ಕಂಪನಿ ವಿರುದ್ಧ ಕ್ರಮವಹಿಸುವಂತೆ ತಾಲ್ಲೂಕು ಆಡಳಿತಕ್ಕೆ ರೈತರ ಆಗ್ರಹ ನೀರು ಹರಿಯುವ ದಿಕ್ಕು ಬದಲಿಸಿದರೆ ಪ್ರಾಕೃತಿಕ ವಿಕೋಪ: ಆತಂಕ
ಕಿರುಹಳ್ಳಕ್ಕೆ ಅಡ್ಡಲಾಗಿ ಗರಸು ಹಾಕಿರುವ ಕುರಿತು ಮಾಹಿತಿ ಇಲ್ಲ. ಮೂರು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ
ಕಿರಣಕುಮಾರ ಜಿ. ಕುಲಕರ್ಣಿ ತಹಶೀಲ್ದಾರ್‌ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT