ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಣ | ಶಿವಭಕ್ತರ ನೆಚ್ಚಿನ ಸವಡಿಯ ದೊಡ್ಡೇಶ್ವರ

ಉಮೇಶ ಬಸವನಗೌಡರ
Published 10 ಮಾರ್ಚ್ 2024, 5:18 IST
Last Updated 10 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ರೋಣ: ಪ್ರಾಚೀನ ಕಾಲದಿಂದಲೂ ಶೈವ ಪರಂಪರೆಗೆ ಹೆಸರಾದ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ, ವಿಶಿಷ್ಟ ಧಾರ್ಮಿಕ ಆಚಾರ ವಿಚಾರಗಳಿಂದ ಹೆಸರಾದ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತಾಲ್ಲೂಕಿನ ಸವಡಿ ಗ್ರಾಮದ ದೊಡ್ಡಪ್ಪನ ದೇಗುಲವು ಒಂದು.

ಗ್ರಾಮದ ಉತ್ತರ ಭಾಗದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಿರುವ ದೊಡ್ಡಪ್ಪನ ಗುಡಿಯು 8 ರಿಂದ 10ನೇ ಶತಮಾನದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಶೈವ ಸಂಪ್ರದಾಯದ ಪ್ರಾಚೀನ ದೇವಾಲಯವಾಗಿದೆ.

ಪ್ರತಿ ವರ್ಷ ಬರುವ ಶಿವರಾತ್ರಿಯಂದು ಉತ್ಸವ ಜರುಗುತ್ತದೆ.

ದೇಗುಲದ ವಾಸ್ತುಶಿಲ್ಪ: ದೇವಾಲಯವು ಗರ್ಭಗೃಹ ಒಳಾಂಗಣ, ನವರಂಗ ಭಾಗಗಳನ್ನು ಹೊಂದಿದ್ದು, ಗರ್ಭಗೃಹ ಮೂಲ ಸ್ವರೂಪದ ಭಾಗದಲ್ಲಿಯೇ ಉಳಿದಿದ್ದು ಉಳಿದಂತೆ ಹಲವು ಜೀರ್ಣೋದ್ದಾರ ಕಂಡ ಕಾರಣ ಕಟ್ಟಿಗೆ ಮಡಿಗೆ ತಗಡಿನ ಚಾವಣಿ ಹೊಂದಿದ್ದು, ಗರ್ಭಗೃಹದ ಲಿಂಗ ಸ್ವಲ್ಪ ಪ್ರಮಾಣದಲ್ಲಿ ಭಗ್ನಗೊಂಡಿದೆ.

ನಕ್ಷತ್ರಾಕಾರದ ಪೀಠದ ಮೇಲೆ ವಿರಾಜಮಾನವಾಗಿರುವ ಶಿವಲಿಂಗವು ನೋಡಲು ಸುಂದರವಾಗಿದ್ದು, ಛತ್ತಿನಲ್ಲಿ ಭುವನೇಶ್ವರಿ ದೇವಿಯನ್ನು‌ ಕೆತ್ತಲಾಗಿದೆ. ಸರಳವಾದ ಬಾಗಿಲು ಮತ್ತು ಚೌಕಟ್ಟುಗಳನ್ನು ಹೊಂದಿರುವ ದೇಗುಲವು ದ್ವಾರ ಬಾಗಿಲ ಬಳಿ ದ್ವಾರಪಾಲಕರ ಉಬ್ಬು ಶಿಲ್ಪಕೃತಿಗಳನ್ನು ಹೊಂದಿದೆ. ಗ್ರಾಮದ ಶಿವಪೂಜಿಯವರ ಕುಟುಂಬ ತಲೆತಲಾಂತರಗಳಿಂದ ದೇಗುಲದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬಂದಿದೆ.

ಗ್ರಾಮದ ಎತ್ತರದ ಪ್ರದೇಶದಲ್ಲಿ ದೊಡ್ಡದಾದ ಲಿಂಗ ಹೊಂದಿದ್ದರಿಂದ ಇದಕ್ಕೆ ದೊಡ್ಡಪ್ಪನ ಗುಡಿ ಅಥವಾ ದೊಡ್ಡಲಿಂಗೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತದೆ. ದೀರ್ಘಾವಧಿ ಸಮಯದಲ್ಲಿ ಜೀರ್ಣೋದ್ದಾರ ಕಾಣದ ದೇಗುಲದ ಒಳಾಂಗಣ ಬಹುತೇಕ ಶಿಥಿಲಾವಸ್ಥೆ ತಲುಪಿದ್ದು, ಹೊರಗೋಡೆಗಳಲ್ಲಿ ಮಿಥುನ ಶಿಲ್ಪವಿದೆ.

ದೇವಾಲಯದ ಮುಂಭಾಗದಲ್ಲಿ ಅನೇಕ ಬಿಡಿ ಶಿಲ್ಪಗಳಿದ್ದು ಶೈವ ಪರಂಪರೆಯ ದೈವಗಳ ಶಿಲ್ಪಗಳಾಗಿದ್ದು, ಪುರಾತತ್ವ ಇಲಾಖೆಯ ನಿರ್ಲಕ್ಷದಿಂದ ಶಿಲ್ಪಗಳು ಗುರುತಿಸಲಾಗದಷ್ಟು ಹಾಳಾಗಿವೆ. ನಿತ್ಯ ಅಭಿಷೇಕಕ್ಕೆಂದು ನಿರ್ಮಿಸಿದ ಬಾವಿ ಮುಚ್ಚಲ್ಪಟ್ಟಿದೆ. ಕೇವಲ ಶೈವ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯೂ ಸಮಾನ ಸ್ಥಾನ ದೇಗುಲದಲ್ಲಿ ಪಡೆದಿತ್ತು ಎಂಬುವುದಕ್ಕೆ ದೇಗುಲದ ಆವರಣದಲ್ಲಿ ದೊರಕಿರುವ ಅನಂತಶಯನ ಶಿಲ್ಪ ಸಾಕ್ಷಿಭೂತವಾಗಿದ್ದು ಸದ್ಯ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT