ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಥ ನಿರ್ಮಾಣ, ಶಿಲ್ಪಕಲಾ ಸಿದ್ಧಹಸ್ತರ ನೆಲೆವೀಡು ‘ರೋಣ’

ಉಮೇಶ ಬಸನಗೌಡರ್
Published 17 ಡಿಸೆಂಬರ್ 2023, 4:45 IST
Last Updated 17 ಡಿಸೆಂಬರ್ 2023, 4:45 IST
ಅಕ್ಷರ ಗಾತ್ರ

ರೋಣ: ನಾಗರಿಕತೆಗಳು ಉಗಮಿಸಿದ ಕಾಲದಿಂದಲೂ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯ ಪರಂಪರೆಗೆ ವಿಶ್ವಕರ್ಮ ಸಮಾಜದ ಕೊಡುಗೆ ಅನುಪಮವಾದದ್ದು. ಅಂತಹ ಸಮಾಜದ ನೂರಾರು ಕುಟುಂಬಗಳನ್ನು ಒಳಗೊಂಡ ರೋಣ ಪಟ್ಟಣ ಮೊದಲಿನಿಂದಲೂ ವೃತ್ತಿ ಶ್ರೇಷ್ಠತೆಗೆ ಹೆಸರಾಗಿದ್ದು ಮರಮುಟ್ಟು ಉದ್ಯಮದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ.

ಸಾಮಾನ್ಯವಾಗಿ ಕೃಷಿ ಸಲಕರಣೆಗಳಿಂದ ಹಿಡಿದು ಹಬ್ಬಹರಿದಿನಗಳಂದು ಎಳೆಯಲಾಗುವ ರಥಗಳು, ದೇವರ ವಿಗ್ರಹಗಳಿಂದ ಹಿಡಿದು ಆಲಂಕಾರಿಕ ವಸ್ತುಗಳವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ಮಿಸುವ ಇವರ ಅದ್ಭುತ ಕಲೆಗೆ ನೆಲೆಯಾಗಿದೆ ರೋಣ ನಗರ. ಸುತ್ತಮುತ್ತ ಹೊಂದಿರುವ ಪರಿಸರವೂ ಇದಕ್ಕೆ ಪ್ರಮುಖ ಕಾರಣ. ಬಾದಾಮಿ, ಹೊಳೆಆಲೂರು ಸೇರಿದಂತೆ ಮಲಪ್ರಭೆಯ ಅಚ್ಚುಕಟ್ಟು ಪ್ರದೇಶಗಳು ಮತ್ತು ಬೆಟ್ಟಗಳಲ್ಲಿ ಈ ಹಿಂದೆ ಸಿಗುತ್ತಿದ್ದ ಕಚ್ಚಾ ಕಟ್ಟಿಗೆಗಳು, ನುಣುಪು ಶಿಲೆಗಳು ಇವರ ವೃತ್ತಿಗೆ ಪೂರಕವಾಗಿದ್ದವು.

ಮೂರ್ನಾಲ್ಕು ತಲೆಮಾರುಗಳಿಂದ ರೋಣ ನಗರದಲ್ಲಿ ವೃತ್ತಿನಿರತವಾದ ಹಲವು ವಿಶ್ವಕರ್ಮ ಸಮಾಜದ ಕುಟುಂಬಗಳು ಕೃಷಿ ಪ್ರಧಾನವಾದ ಈ ಭಾಗದಲ್ಲಿ ಬಿತ್ತನೆ ಕೂರಿಗೆ ಹರಗುವ ಕುಂಟೆ, ಮಡೆಕುಂಟೆ, ಚಕ್ಕಡಿ, ಟಾಂಗಾ, ರಥಗಳು, ಪಲ್ಲಕ್ಕಿಗಳು, ದೇವರ ವಿಗ್ರಹಗಳು, ಚಿಕ್ಕಮಕ್ಕಳ ಆಟಿಕೆಗಳು, ಅಡುಗೆ ಮನೆಯ ಸಾಮಗ್ರಿಗಳಾದ ಕೊಮನಗಿ, ಲತ್ತಿಮನಿಯವರೆಗೆ ಎಲ್ಲವನ್ನೂ ಯಂತ್ರಗಳಿಲ್ಲದ ಕಾಲದಲ್ಲಿ ದೈಹಿಕ ಶ್ರಮ ಹಾಕಿ ತಯಾರಿಸುತ್ತಿದ್ದರು. ಸಿಗುತ್ತಿದ್ದ ಲಾಭ ಮಾತ್ರ ಅಲ್ಪ.

ರಥ ನಿರ್ಮಾಣ ಮತ್ತು ಶಿಲ್ಪಕಲೆಯಲ್ಲಿ ಕರ್ನಾಟಕದಲ್ಲಿಯೇ ಖ್ಯಾತಿ ಪಡೆದ ಶಿಲ್ಪಿ ಮಾನಪ್ಪಜ್ಜ ಬಡಿಗೇರ ಅವರ ಮನೆತನದ ಮೂರನೇ ತಲೆಮಾರು ಇಂದಿಗೂ ವೃತ್ತಿಯನ್ನು ಮುಂದುವರಿಸಿದೆ. ನಗರದಲ್ಲಿ ಭುವನೇಶ್ವರಿ ಶಿಲ್ಪಕಲಾ ಮತ್ತು ರಥಶಿಲ್ಪ ಕಲಾಕೇಂದ್ರವನ್ನು ತೆರೆದು ಮಾನಪ್ಪನವರ ಮಗನಾದ ವಿರೂಪಾಕ್ಷಪ್ಪ ಅವರ ಮೊಮ್ಮಕ್ಕಳಾದ ಶಂಕರ್ ಬಡಿಗೇರ, ಈರಣ್ಣ ಬಡಿಗೇರ ಪ್ರವೀಣ, ಅನೀಲ ವೃತ್ತಿಯಲ್ಲಿ ಮುಂದುವರಿದಿದ್ದಾರೆ. ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲದೇ ಪಕ್ಕದ ಆಂಧ್ರಪ್ರದೇಶದ ದೇಗುಲಗಳಿಗೂ ರಥಗಳನ್ನು, ದೇವರ ಶಿಲ್ಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರ ಈ ಸೇವೆ ಗುರುತಿಸಿ ಸರ್ಕಾರ ಮತ್ತು ಹಲವು ಸಂಘ–ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಅಲ್ಪ ಮಟ್ಟಿಗೆ ಯಂತ್ರೋಪಕರಣಗಳು ವೃತ್ತಿಯಲ್ಲಿ ಬಳಕೆಯಾಗುತ್ತಿದ್ದರೂ, ಹೆಚ್ಚಾಗಿ ದೈಹಿಕ ಶ್ರಮವೇ ಸಮುದಾಯದ ವೃತ್ತಿಯಲ್ಲಿ ಪ್ರಾಮುಖ್ಯತೆ ಹೊಂದಿದೆ. ಮೊದಲೆಲ್ಲ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಒಂದು ರಥ ನಿರ್ಮಿಸಲು ತೆಗೆದುಕೊಳ್ಳುತ್ತಿದ್ದ ಇವರು ಇಂದು ಯಂತ್ರಗಳ ಅಲ್ಪ ಬಳಕೆಯಿಂದ ಎಂಟರಿಂದ ಒಂಭತ್ತು ತಿಂಗಳಲ್ಲಿ ತಯಾರಿಸುತ್ತಿದ್ದಾರೆ. ಸಾಗವಾನಿ, ಕರಿಮತ್ತಿಯಂತಹ ಕಟ್ಟಿಗೆಗಳ ಲಭ್ಯತೆ ಕಡಿಮೆಯಾಗಿದ್ದು ಬೆಲೆಯೂ ಗಗನಮುಖಿಯಾಗಿದೆ. ಸಿಗುವ ಲಾಭ ಅತ್ಯಲ್ಪವಾಗುತ್ತ ಸಾಗಿದ್ದು ಸಮುದಾಯದ ಯುವಕರು ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ತಲೆಮಾರುಗಳಿಗೆ ವೃತ್ತಿಯನ್ನು ಉಳಿಸಿ–ಬೆಳಸುವುದಕ್ಕಾಗಿ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದು ಸಮುದಾಯದ ಹಿರಿಯರ ಆರೋಪವಾಗಿದೆ.

‘ನಮ್ಮ ಮನೆತನದ ಮೂರು ತಲೆಮಾರುಗಳು ಶಿಲ್ಪಕಲೆ ಮತ್ತು ರಥನಿರ್ಮಾಣ ವೃತ್ತಿಯಲ್ಲಿ ತೊಡಗಿವೆ. ನಮ್ಮಲ್ಲಿ ತಯಾರಿಸುವ ರಥಗಳಿಗೆ ಪರ ರಾಜ್ಯದ ದೇಗುಲಗಳಿಂದಲೂ ಬೇಡಿಕೆಯಿದೆ. ಆದರೆ ವೃತ್ತಿಗೆ ಬೇಕಾದ ಮೂಲಸೌಲಭ್ಯಗಳು ಸರ್ಕಾರದಿಂದ ಸಿಗುತ್ತಿಲ್ಲ ಈಚೆಗೆ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಘೋಷಿಸಿದ್ದು ಅದು ವೃತ್ತಿ ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಸಹಾಯವಾಗಬಹುದೆಂದು ಕಾಯ್ದು ನೋಡಬೇಕಿದೆ’ ಎಂದು ಶಂಕರ ಬಡಿಗೇರ ತಿಳಿಸಿದರು.

ಸಾಂಪ್ರದಾಯಿಕ ವೃತ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಿ

ರೋಣ ನಗರ ಬಡಿಗ ವೃತ್ತಿಯ ಅನೇಕ ಕುಟುಂಬಗಳನ್ನು ಬಹು ಹಿಂದಿನಿಂದಲೂ ಹೊಂದಿದೆ. ಆ ಸಮುದಾಯದ ಕುಂದುಕೊರತೆಗಳ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಅವರ ವೃತ್ತಿಗೆ ಬೇಕಾದ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಾಬ್ ಹೊಸಮನಿ ವಿವರಿಸಿದರು. ಸರ್ಕಾರ ನಮ್ಮ ದೇಸಿ ವೃತ್ತಿಗಳಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಜಾಗತೀಕರಣದ ನಂತರದ ದಿನಗಳಲ್ಲಿ ಸಾಂಪ್ರದಾಯಿಕ ವೃತ್ತಿಗಳು ಅವನತಿಯತ್ತ ಸಾಗುತ್ತಿವೆ. ಇದು ಆರ್ಥಿಕ ವ್ಯವಸ್ಥೆಗೆ ಪ್ರತಿಕೂಲ ವಾತಾವರಣ ಸೃಷ್ಟಿಸುವ ಸಾಧ್ಯತೆಯಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಸಾಂಪ್ರದಾಯಿಕ ವೃತ್ತಿಗಳನ್ನು ರಕ್ಷಿಸಬೇಕಿದೆ ಎಂದು  ರಾಜೀವಗಾಂಧಿ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಸದ್ದಾಂ ತಹಶೀಲ್ದಾರ್‌ ಅಭಿಪ್ರಾಯಪಟ್ಟರು.

ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಶಂಕರ ಬಡಿಗೇರ
ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಶಂಕರ ಬಡಿಗೇರ
ಶಿಲ್ಪಕಲೆಯಲ್ಲಿ ನಿರತರಾಗಿರುವ ಬಡಿಗೇರ ಕುಟುಂಬ
ಶಿಲ್ಪಕಲೆಯಲ್ಲಿ ನಿರತರಾಗಿರುವ ಬಡಿಗೇರ ಕುಟುಂಬ
ಕಟ್ಟಿಗೆಗಳಿಂದ ನಿರ್ಮಿಸಿರುವ ವಿಗ್ರಹಗಳೊಂದಿಗೆ ಶಂಕರ್ ಬಡಿಗೇರ ಮತ್ತಿತರರು
ಕಟ್ಟಿಗೆಗಳಿಂದ ನಿರ್ಮಿಸಿರುವ ವಿಗ್ರಹಗಳೊಂದಿಗೆ ಶಂಕರ್ ಬಡಿಗೇರ ಮತ್ತಿತರರು
ಶಿಲ್ಪ ಕೆತ್ತನೆಯಲ್ಲಿ ನಿರತ ಶಂಕರ್ ಬಡಿಗೇರ
ಶಿಲ್ಪ ಕೆತ್ತನೆಯಲ್ಲಿ ನಿರತ ಶಂಕರ್ ಬಡಿಗೇರ
ದೇವಿಯ ಸುಂದರ ವಿಗ್ರಹ
ದೇವಿಯ ಸುಂದರ ವಿಗ್ರಹ
ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಬಡಿಗೇರ ಸಹೋದರರು
ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವ ಬಡಿಗೇರ ಸಹೋದರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT