ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ಆಶ್ರಯ ಮನೆ: ನನಸಾಗದ ಬಡಜನರ ಕನಸು

Published 29 ಜನವರಿ 2024, 7:56 IST
Last Updated 29 ಜನವರಿ 2024, 7:56 IST
ಅಕ್ಷರ ಗಾತ್ರ

ಮುಂಡರಗಿ: ಎರಡು ದಶಕಗಳಿಂದ ವಾಸಿಸಲು ಆಶ್ರಯ ಮನೆಗಳಲ್ಲಿದೇ ಪುರಸಭೆ ವ್ಯಾಪ್ತಿಯ ಮುಂಡರಗಿ, ಶಿರೂಳ, ಬ್ಯಾಲವಾಡಗಿ, ರಾಮೇನಹಳ್ಳಿ ಗ್ರಾಮಗಳ ಸಾವಿರಾರು ಬಡ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅನ್ಯದಾರಿ ಕಾಣದೆ ಇಕ್ಕಟ್ಟಾದ ಗುಡಿಸಲು, ತಗಡಿನ ಶೆಡ್, ಮುರುಕು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆ ಅಥವಾ ನಿವೇಶನ ನೀಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಶಾಪ ಹಾಕುತ್ತಲಿದ್ದಾರೆ.

2003ರಲ್ಲಿ ಅಂದಿನ ಸಹಕಾರ ಸಚಿವ ಎಸ್.ಎಸ್.ಪಾಟೀಲ ಅವರ ಅವಧಿಯಲ್ಲಿ ಅಂಬೇಡ್ಕರ್, ಕೊಳಚೆ ನಿರ್ಮೂಲನೆ ಹಾಗೂ ವಾಂಬೆ ಯೋಜನೆಗಳ ಅಡಿಯಲ್ಲಿ ಮುಂಡರಗಿ ಸೇರಿದಂತೆ ಪುರಸಭೆ ವ್ಯಾಪ್ತಿಯ ಗ್ರಾಮಗಳ ಬಡಜನತೆಗೆ ಒಟ್ಟು 1,150 ಮನೆಗಳನ್ನು ನಿರ್ಮಿಸಲಾಗಿತ್ತು. (ಅದರ ನೆನಪಿಗಾಗಿ ಗದಗ ರಸ್ತೆ ಬಳಿ ನಿರ್ಮಿಸಲಾಗಿದ್ದ ಆಶ್ರಯ ಮನೆಗಳ ಕಾಲೊನಿಗೆ ಎಸ್.ಎಸ್.ಪಾಟೀಲ ನಗರ ಎಂದು ನಾಮಕರಣ ಮಾಡಲಾಯಿತು). ಅಂದಿನಿಂದ ಈವರೆಗೂ ಪಟ್ಟಣದ ಬಡಜನತೆಗೆ ಒಂದೂ ಆಶ್ರಯ ಮನೆ ವಿತರಣೆಯಾಗಿಲ್ಲ ಎನ್ನುವುದು ಬಡ ಜನತೆಯ ಕೊರಗಾಗಿದೆ.

2013ರಲ್ಲಿ ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಬಡಜನತೆಗೆ ಆಶ್ರಯ ಮನೆ ನಿರ್ಮಿಸಿ ಕೊಡುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯ ಶಿರೂಳ ಗ್ರಾಮದ ಹೊರವಲಯದಲ್ಲಿ ಪುರಸಭೆ ವತಿಯಿಂದ 25 ಎಕರೆ ಜಮೀನು ಖರೀದಿಸಿದರು. ಅವರ ಅವಧಿಯಲ್ಲಿ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಿ ನಿವೇಶನಗಳನ್ನು ಮಾಡಲಾಯಿತು.

ನಿವೇಶನಗಳು ಸಿದ್ಧವಾದ ತಕ್ಷಣ ಬಡಜನತೆಯಿಂದ ಆಶ್ರಯ ಮನೆಗಳಿಗಾಗಿ ಅರ್ಜಿ ಆಹ್ವಾನಿಸಲಾಯಿತು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬಡವರು ಅಗತ್ಯ ದಾಖಲೆಗಳೊಂದಿಗೆ ಮನೆಗಳಿಗಾಗಿ ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕಾರ, ಅರ್ಜಿ ಪರಿಶೀಲನೆ ಮೊದಲಾದ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡು ಫಲಾನುಭವಿಗಳ ಯಾದಿಯನ್ನು ಪ್ರಕಟಿಸಬೇಕು ಎನ್ನುವ ಸಂದರ್ಭದಲ್ಲಿ ಅದಕ್ಕೆ ತಕರಾರುಗಳು ಬಂದವು. ಈ ಕಾರಣದಿಂದ ಮನೆ ವಿತರಣೆಯ ಕಾರ್ಯ ನನೆಗುದಿಗೆ ಬಿದ್ದಿತು.

ಮುಂದೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಮಣ್ಣ ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರ ಅವಧಿಯಲ್ಲಾದರೂ ಮನೆಗಳು ದೊರೆಯಬಹುದು ಎಂದು ನಂಬಿದ್ದ ಬಡಜನತೆಯ ಆಸೆ ಈಡೇರಲೇ ಇಲ್ಲ. ಅನರ್ಹ ಫಲಾನುಭವಿಗಳ ಹೆಸರನ್ನು ಯಾದಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿ ಪುನಃ ಬಡವರಿಂದ ಅರ್ಜಿ ಕರೆಯಲಾಯಿತು. ರಾಜಕೀಯ ಕಾರಣಗಳಿಂದಾಗಿ ಮನೆ ವಿತರಣೆ ನನೆಗುದಿಗೆ ಬೀಳುತ್ತಾ ಹೋಯಿತು. ಈ ನಡುವೆ ಬಡವರು ಹಲವಾರು ಬಾರಿ ಪದೇ ಪದೇ ಅರ್ಜಿ ಸಲ್ಲಿಸಿ ಸುಸ್ತಾದರು.
ಮನೆಗಳನ್ನು ವಿತರಿಸುವಂತೆ ಆಗ್ರಹಿಸಿ ಪುರಸಭೆ, ತಹಶೀಲ್ದಾರ್‌ ಕಚೇರಿಗಳ ಮುಂದೆ ಜನರು ಧರಣಿ ಕೈಗೊಂಡರು. ಮನೆಗಾಗಿ ಒತ್ತಾಯಿಸಿ ಸಾವಿರಾರು ಬಡವರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮುಂಡರಗಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿನಾಕಾರಣ ಕಾಲಹರಣ ಮಾಡಿದರೆ ಹೊರತು ಬಡಜನತೆಗೆ ಮನೆಗಳ ವಿತರಣೆಗೆ ಕ್ರಮ ಕೈಗೊಳ್ಳಲಿಲ್ಲ.

ಆಶ್ರಯ ಮನೆ ಹಂಚಿಕೆ, ಫಲಾನುಭವಿಗಳ ಆಯ್ಕೆ, ವಿತರಣೆ ಮೊದಲಾದವುಗಳಿಗೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಕಮಿಟಿಯೊಂದನ್ನು ರಚಿಸಲಾಗಿರುತ್ತದೆ. ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಅವರ ಅವಧಿ ಮುಗಿದು ಈಗ ಡಾ.ಚಂದ್ರು ಲಮಾಣಿ ಅವರು ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಾದರೂ ಬಡಜನತೆಗೆ ಆಶ್ರಯ ಮನೆಗಳನ್ನು ವಿತರಿಸುತ್ತಾರೆಯೋ ಎನ್ನುವ ಅನುಮಾನ ಬಡಜನತೆಯನ್ನು ಕಾಡುತ್ತಲಿದೆ.

ಮನೆಗಳಿಲ್ಲದೆ ಶಾಲಾ ಕಟ್ಟಡದಲ್ಲಿ ಆಶ್ರಯ ಪಡೆದಿರುವ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಬಡ ಜನತೆ
ಮನೆಗಳಿಲ್ಲದೆ ಶಾಲಾ ಕಟ್ಟಡದಲ್ಲಿ ಆಶ್ರಯ ಪಡೆದಿರುವ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಬಡ ಜನತೆ
ಆಶ್ರಯ ಮನೆಗೆ ಚಾತಕ ಪಕ್ಷಿಯಂತೆ ಕಾಯ್ದಿರುವ ಮುಂಡರಗಿ ಪಟ್ಟಣದ ಬಡ ಮಹಿಳೆ ರಾಜಬಿ ರಾಟಿ
ಆಶ್ರಯ ಮನೆಗೆ ಚಾತಕ ಪಕ್ಷಿಯಂತೆ ಕಾಯ್ದಿರುವ ಮುಂಡರಗಿ ಪಟ್ಟಣದ ಬಡ ಮಹಿಳೆ ರಾಜಬಿ ರಾಟಿ
ಈ ಮೊದಲು ತಯಾರಿಸಿದ ಆಯ್ಕೆ ಪಟ್ಟಿಯಲ್ಲಿ ಅನರ್ಹ ಫನಾನುಭವಿಗಳ ಹೆಸರುಗಳಿವೆ ಎಂಬ ದೂರು ಬಂದಿವೆ. ಈ ಕಾರಣದಿಂದ ಆಶ್ರಯ ಮನೆಗಳ ಫಲಾನುಭವಿಗಳ ಯಾದಿಯನ್ನು ಪುನರ್ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಶೀಘ್ರ ಮನೆಗಳನ್ನು ನಿರ್ಮಿಸಿ ವಿತರಿಸಲಾಗುವುದು
ಡಾ.ಚಂದ್ರು ಲಮಾಣಿ ಶಾಸಕ ಮತ್ತು ಆಶ್ರಯ ಸಮಿತಿ ಅಧ್ಯಕ್ಷ
ಆಶ್ರಯ ಮನೆ ವಿತರಣೆಯ ಕಾರ್ಯ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದು ಆಶ್ರಯ ಕಮಿಟಿಯ ನಿರ್ದೇಶನದಂತೆ ಶೀಘ್ರದಲ್ಲಿಯೇ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದು
ಡಿ.ಎಚ್.ನದಾಫ್ ಪುರಸಭೆ ಮುಖ್ಯಾಧಿಕಾರಿ
ದಶಕದ ಹಿಂದೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೀಡಿದ ಅಲ್ಪಸ್ವಲ್ಪ ಹಣ ಖರ್ಚಾಗಿ ಹೋಗಿದ್ದು ಈಗ ಮನೆಗಳಿಲ್ಲದೆ ಶಾಲಾ ಕಟ್ಟಡದಲ್ಲಿ ವಾಸಿಸುತ್ತಿದ್ದೇವೆ. ಸರ್ಕಾರ ಎಲ್ಲ ನಿರಾಶ್ರಿತರಿಗೂ ಶೀಘ್ರ ಮನೆಗಳನ್ನು ನಿರ್ಮಿಸಿಕೊಡಬೇಕು
ಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮದ ನಿರಾಶ್ರಿತ
ಆಶ್ರಯ ಮನೆಗಳಿಲ್ಲದೆ ಸಾವಿರಾರು ಬಡವರು ಬೀದಿಯಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಯಾಗಿದ್ದು ಪುರಸಭೆಯವರು ತಕ್ಷಣ ಅರ್ಜಿ ಸಲ್ಲಿಸಿದ ಎಲ್ಲ ಬಡವರಿಗೆ ಆಶ್ರಯ ಮನೆಗಳನ್ನು ವಿತರಿಸಬೇಕು
ಅಡಿವೆಪ್ಪ ಚಲವಾದಿ ಅಧ್ಯಕ್ಷ ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಸಂಘ
ಅನರ್ಹರಿಗೆ ಮನೆ ವಿತರಣೆ: ಆರೋಪ
ಪುರಸಭೆಯು ಖರೀದಿಸಿರುವ 25 ಎಕರೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಶ್ರಯ ಮನೆಗಳ ವಿತರಣೆಯಲ್ಲಿ ತಾರತಮ್ಯವಾಗುವ ಸಂಭವವಿದೆ. ಈಗಾಗಲೇ ವಿವಿಧ ಯೋಜನೆಗಳಲ್ಲಿ ಮನೆಗಳನ್ನು ಪಡೆದುಕೊಂಡಿರುವವರು ಹಾಗೂ ಶ್ರೀಮಂತರು ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸಿದ್ದು ಅವರು ತಮ್ಮ ಪ್ರಭಾವ ಬಳಸಿ ಪುನಃ ಬಡವರ ಮನೆಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಆರೋಪಿಸಿದ್ದಾರೆ. ಪುರಸಭೆ ಅಧಿಕಾರಿಗಳು ಈಗಾಗಲೇ ಮನೆಗಳನ್ನು ಹೊಂದಿರುವವರಿಗೆ ಮನೆಗಳನ್ನು ನೀಡುವ ಸಾಧ್ಯತೆ ಇದೆ. ಕಂದಾಯ ಇಲಾಖೆಯವರು ಬಡವರೆಂದು ಗುರುತಿಸುವವರಿಗೆ ಮನೆಗಳನ್ನು ನೀಡಬೇಕು. ಇದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಮನೆಗಳು ದೊರೆಯುತ್ತವೆ. ಈ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ವಿತರಿಸಬೇಕು ಎಂದು ಹಿಂದಿನ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಹಾಗೂ ಈಗಿನ ವಸತಿ ಸಚಿವ ಜಮೀರ್ ಅಹಮ್ಮದ ಖಾನ್ ಅವರಿಗೆ ಮನವಿ ಸಲಿಸಿದ್ದೇವೆ ಎಂದು ತಿಳಿಸಿದರು. ಮನೆಗಳ ವಿತರಣೆಯಲ್ಲಿ ಪುರಸಭೆಯು ವಿನಾಕಾರಣ ವಿಳಂಬ ಮಾಡುತ್ತಲಿದೆ. ಮನೆಗಳನ್ನು ನಿರ್ಮಿಸಿಕೊಡುವುದರ ಬದಲಾಗಿ ಬಡ ಜನತೆಗೆ ನಿವೇಶನದ ಹಕ್ಕುಪತ್ರಗಳನ್ನಾದರೂ ನೀಡಿದರೆ ಅವರು ವಿವಿಧ ಯೋಜನೆಗಳ ಸಹಾಯಧನದ ನೆರವಿನಿಂದ ಮನೆಗಳನ್ನು ನಿರ್ಮಿಸಿಕೊಳ್ಳುತ್ತಾರೆ ಎಂದು ಆಗ್ರಹಿಸಿದ್ದಾರೆ.
ನಿರಾಶ್ರಿತರಿಗೂ ದೊರೆಯದ ಮನೆಗಳು
ತಾಲ್ಲೂಕಿನ ಶಿಂಗಟಾಲೂರ ಏತ ನೀರಾವರಿ ಯೋಜನೆ ಅಡಿಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಬಿದರಳ್ಳಿ ಗುಮ್ಮಗೋಳ ಹಾಗೂ ವಿಠಲಾಪುರ ಗ್ರಾಮಗಳ ಜನರು ಮನೆಗಳಿಲ್ಲದೇ ಪರದಾಡುವಂತಾಗಿದೆ. ಮುಳುಗಡೆ ಗ್ರಾಮಗಳ ಜನತೆಗೆ ಮನೆ ನಿರ್ಮಿಸಿಕೊಳ್ಳಲು ಅವರವರ ಮನೆಗಳ ಗಾತ್ರಕ್ಕೆ ಅನುಗುಣವಾಗಿ ಅಂದು ಸರ್ಕಾರ ಪರಿಹಾರ ರೂಪದಲ್ಲಿ ಹಣ ನೀಡಿತ್ತು. ನೂತನ ಗ್ರಾಮದ ಸ್ಥಳ ಗುರುತಿಸುವಿಕೆ ನಿವೇಶನ ನಿರ್ಮಾಣ ಮೂಲ ಸೌಲಭ್ಯ ಕಲ್ಪಿಸುವುದು ತುಂಬಾ ವಿಳಂಬವಾಯಿತು. ಸಕಾಲದಲ್ಲಿ ಸರ್ಕಾರ ನಿವೇಶನ ನೀಡದೆ ಇದ್ದುದ್ದರಿಂದ ಸರ್ಕಾರ ನೀಡಿದ್ದ ಪರಿಹಾರದ ಹಣವನ್ನು ಬಹುತೇಕ ಬಡ ಗ್ರಾಮಸ್ಥರು ಅನ್ಯ ಕಾರ್ಯಗಳಿಗೆ ಬಳಸಿಕೊಂಡರು. ಹೀಗಾಗಿ ಅವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ. ಮನೆಗಳಿಲ್ಲದ್ದರಿಂದ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಸುಮಾರು 30 ಬಡ ಕುಟುಂಬಗಳು ಕಳೆದ ಎರಡು ವರ್ಷಗಳಿಂದ ಹೊಸಗುಮ್ಮಗೋಳ ಗ್ರಾಮದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ಸಾಮೂಹಿಕವಾಗಿ ವಾಸಿಸುತ್ತಿದ್ದಾರೆ. ಹಳೆಶಿಂಗಟಾಲೂರ ಗ್ರಾಮದ ಹಲವು ಬಡ ಕುಟುಂಬಗಳು ಆಶ್ರಯ ಮನೆಗಳಿಲ್ಲದ ಕಾರಣದಿಂದ ಕಳೆದ ಹಲವು ವರ್ಷಗಳಿಂದ ಗ್ರಾಮದ ಹೊರವಲಯದಲ್ಲಿರುವ ನೀರಾವರಿ ಕಚೇರಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.
ಗ್ರಾಮೀಣರಿಗೂ ತಪ್ಪದ ಗೋಳು
ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಪ್ರತಿವರ್ಷ ಸಾಕಷ್ಟು ಬಡಜನರು ಆಶ್ರಯ ಮನೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಸರ್ಕಾರದಿಂದ ಮಂಜೂರಾಗುವ ಮನೆಗಳ ಸಂಖ್ಯೆಗೂ ಜನರು ಸಲ್ಲಿಸುವ ಅರ್ಜಿಗಳಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಹೀಗಾಗಿ ಆಶ್ರಯ ಮನೆ ವಿತರಣೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿದೆ. ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಅಡಿಯಲ್ಲಿ ಅಂಬೇಡ್ಕರ್ ಆವಾಸ್ ಬಸವಾ ಆಶ್ರಯ ಮನೆ ವಿತರಿಸುವ ಕುರಿತಂತೆ ಗ್ರಾಮ ಪಂಚಾಯ್ತಿಗಳನ್ನು ಎ ಬಿ ಹಾಗೂ ಸಿ ಎಂದು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿಗೆ 50 ಬಿ ಗುಂಪಿಗೆ 40 ಹಾಗೂ ಸಿ ಗುಂಪಿಗೆ 30 ಮನೆಗಳನ್ನು ಮಂಜೂರು ಮಾಡಲಾಗಿದೆ. ಮೀಸಲಾತಿಗೆ ಅನುಗುಣವಾಗಿ ಎಲ್ಲ ವರ್ಗಗಳ ಜನತೆಗೂ ಮನೆಗಳನ್ನು ವಿತರಿಸಲಾಗುತ್ತದೆ. 2024 ಜನವರಿವರೆಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಅಂಬೇಡ್ಕರ್ ವಸತಿ ಯೋಜನೆಯ ಅಡಿಯಲ್ಲಿ ಒಟ್ಟು 151 ಆಶ್ರಯ ಮನೆಗಳು ಮಂಜೂರಾಗಿವೆ. ಅವುಗಳಲ್ಲಿ 67ಮನೆಗಳು ಪೂರ್ಣಗೊಂಡಿದ್ದು 59ಮನೆಗಳ ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ. 25ಜನರು ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ತಿಳಿದು ಬಂದಿದೆ. ‌ ಬಸವಾ ಯೋಜನೆಯ ಅಡಿಯಲ್ಲಿ ತಾಲ್ಲೂಕಿನಾದ್ಯಂತ ಒಟ್ಟು 482 ಮನೆಗಳು ಮಂಜೂರಾಗಿವೆ. ಅವುಗಳಲ್ಲಿ 226 ಮನೆಗಳು ಪೂರ್ಣಗೊಂಡಿದ್ದು 177 ಮನೆಗಳ ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ. 79 ಜನರು ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT