ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಜಲದಿನ: ನೀರ ನೆಮ್ಮದಿಯ ನಾಳೆಗಳಿಗೆ ಬೇಕಿದೆ ಕಾಳಜಿ

ಇಂದು ವಿಶ್ವ ಜಲದಿನ: ಜಲಮೂಲಗಳ ರಕ್ಷಣೆ ಮಾಡದಿದ್ದರೆ ಗಂಡಾಂತರ
ಕಾಶೀನಾಥ ಬಿಳಿಮಗ್ಗದ
Published 22 ಮಾರ್ಚ್ 2024, 5:47 IST
Last Updated 22 ಮಾರ್ಚ್ 2024, 5:47 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹರಿದಿರುವ ತುಂಗಭದ್ರಾ ನದಿಯು ಮಲೆನಾಡು ಸೇರಿದಂತೆ ನಮ್ಮ ಜಿಲ್ಲೆಯ ಜೀವನಾಡಿಯಾಗಿದೆ. ಆದರೆ, ನದಿಯ ನೀರಿನ ನೈರ್ಮಲ್ಯ ತಡೆಗಟ್ಟುವಲ್ಲಿ, ನದಿಯ ರಕ್ಷಣೆ ಮತ್ತು ಅದನ್ನು ಸುಸ್ಥಿರ ಅಭಿವೃದ್ಧಿಪಡಿಸುವಲ್ಲಿ ಹಾಗೂ ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

2000ನೇ ಇಸವಿವರೆಗೆ ತುಂಗಭದ್ರಾ ನದಿಯಲ್ಲಿ ವರ್ಷಪೂರ್ತಿ ನೀರು ಹರಿಯುತ್ತಿತ್ತು. ಮಳೆಗಾಲದಲ್ಲಿ ತಿಂಗಳ ಪರ್ಯಂತ ಪ್ರವಾಹ ಸೃಷ್ಟಿಯಾಗುತ್ತಿತ್ತು. ನಂತರ ನದಿ ದಂಡೆಯಲ್ಲಿ ಆರಂಭವಾದ ಮರಳು ಗಣಿಗಾರಿಕೆ ಹಾಗೂ ಮತ್ತಿತರ ಕೈಗಾರಿಕೆಗಳ ಹಸ್ತಕ್ಷೇಪದಿಂದ ತುಂಗಭದ್ರೆಯ ಒಡಲು ಕ್ರಮೇಣ ಬರಿದಾಗತೊಡಗಿತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

2001ರ ನಂತರ ಪ್ರತಿ ಬೇಸಿಗೆಯಲ್ಲಿ ತುಂಗಭದ್ರೆಯ ಒಡಲು ಬರಿದಾಗತೊಡಗಿತು. ಮರಳು ಗಣಿಗಾರಿಕೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ತುಂಗಭದ್ರೆಯ ಒಡಲಿಗೆ ಕನ್ನ ಹಾಕತೊಡಗಿದರು. ಮರಳು ಗಣಿಗಾರಿಕೆಗೆ ಸರ್ಕಾರ ರಚಿಸಿದ್ದ ನಿಯಮಗಳನ್ನು ಧಿಕ್ಕರಿಸಿ ನದಿಯ ಪಾತ್ರವನ್ನು ಸಂಪೂರ್ಣವಾಗಿ ಬರಿದು ಮಾಡಲಾಯಿತು ಎಂದು ಮುಂಡರಗಿ ತಾಲ್ಲೂಕಿನ ನದಿಪಾತ್ರದ ಜನರು ಆಕ್ರೋಶ ಹೊರಹಾಕಿದರು.

2000ರ ಪೂರ್ವದಲ್ಲಿ ಬಹುತೇಕ ನದಿ ದಂಡೆಗಳ ಮೇಲಿರುವ ಗ್ರಾಮಸ್ಥರು ನದಿ ನೀರನ್ನು ಶುದ್ಧೀಕರಿಸದೇ ನೇರವಾಗಿ ಸೇವಿಸುತ್ತಿದ್ದರು. ಆದರೆ ಇತ್ತೀಚೆಗೆ ನದಿ ದಂಡೆಗಳ ಜಮೀನುಗಳಲ್ಲಿ ನಾಟಿ ಮಾಡಿದ ಭತ್ತದ ಪೈರಿಗೆ ಸಿಂಪಡಿಸುವ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳ ಅಂಶ, ಸಣ್ಣಪುಟ್ಟ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಮೊದಲಾದವುಗಳು ನದಿ ನೀರಿನಲ್ಲಿ ಬೆರೆಯತೊಡಗಿದ್ದು, ಶುದ್ಧೀಕರಿಸದೇ ನದಿ ನೀರನ್ನು ಕುಡಿಯದಂತಾಗಿದೆ.

ಮರಳು ಗಣಿಗಾರಿಕೆಯ ನೆಪದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನದಿಯ ಒಡಲನ್ನು ಬರಿದು ಮಾಡಲಾಗುತ್ತಿದ್ದು, ಮೀನು, ಮೊಸಳೆ ಸೇರಿದಂತೆ ಸಾವಿರಾರು ಜಲಚರಗಳು ನಾಶವಾಗುತ್ತಲಿವೆ. ಬೇಸಿಗೆಯಲ್ಲಿ ನದಿ ಪಾತ್ರದ ಉದ್ದಕ್ಕೂ ನಿರ್ಜೀವ ಕಪ್ಪೆಚಿಪ್ಪುಗಳು ಹಾಗೂ ಶಂಖಗಳ ರಾಶಿ ಕಂಡು ಬರುತ್ತವೆ. ನೀರು ಖಾಲಿಯಾಗಿ ಅಲ್ಲಲ್ಲಿ ಮೀನುಗಳು ಸಾಯುತ್ತಿವೆ.

ತೀರಾ ಇತ್ತೀಚೆಗೆ ಜಿಲ್ಲೆಯಲ್ಲಿ ಅನುಷ್ಟಾನಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಲ್.ಎನ್.ಟಿ. ಹಾಗೂ ಮತ್ತಿತರ ಯೋಜನೆಗಳ ಮೂಲಕ ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ಜನತೆಯ ನೀರಿನ ದಾಹವನ್ನು ತುಂಗಭದ್ರೆಯು ನೀಗಿಸುತ್ತಿದ್ದಾಳೆ. ಕೆಲವು ಭಾಗಗಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯ ಕಾಮಗಾರಿಯು ಅಪೂರ್ಣವಾಗಿದ್ದು, ಅಲ್ಲಿಯ ಜನತೆ ನೀರಿಗಾಗಿ ಪರಿತಪಿಸಬೇಕಾಗಿದೆ.

ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಮೂಲಕ ಜಿಲ್ಲೆಯ ಎಲ್ಲ ರೈತರ ಜಮೀನಿಗೆ ನೀರು ಹರಿದು ರೈತರ ಬದುಕು ಹಸನಾಗಬೇಕಿತ್ತು. ಆದರೆ ನೀರಾವರಿ ಯೋಜನೆಯು ಸಂಪೂರ್ಣ, ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಇರುವುದರಿಂದ ನೀರಾವರಿ ಇದ್ದೂ ಇಲ್ಲದಂತಾಗಿದೆ.

ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ 3 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ಆದರೆ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪುರ ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸದೇ ಇರುವುದರಿಂದ ನಾವು ಪ್ರತಿ ವರ್ಷ ಕೇವಲ 1 ಟಿಎಂಸಿ ಅಡಿ ನೀರನ್ನು ಮಾತ್ರ ಬ್ಯಾರೇಜಿನಲ್ಲಿ ಸಂಗ್ರಹಿಸಿಕೊಳ್ಳಬಹುದಾಗಿದೆ. ಮೂರು ಗ್ರಾಮಗಳನ್ನು ಸಮರ್ಪಕವಾಗಿ ಸ್ಥಳಾಂತರಿಸಿ 3 ಟಿಎಂಸಿ ಅಡಿ ನೀರನ್ನು ವರ್ಷದುದ್ದಕ್ಕೂ ಧಾರಾಳವಾಗಿ ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮುಂದೆ ಬರಿದಾಗಿರುವ ತುಂಗಭದ್ರಾ ನದಿಯಲ್ಲಿ ಕಂಡುಬಂದ ಕಪ್ಪೆ ಚಿಪ್ಪಿನ ರಾಶಿ
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಮುಂದೆ ಬರಿದಾಗಿರುವ ತುಂಗಭದ್ರಾ ನದಿಯಲ್ಲಿ ಕಂಡುಬಂದ ಕಪ್ಪೆ ಚಿಪ್ಪಿನ ರಾಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT