ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆಗೆ ರೋಗ: ರೈತರಿಗೆ ಸಂಕಷ್ಟ...

Last Updated 7 ಸೆಪ್ಟೆಂಬರ್ 2011, 9:35 IST
ಅಕ್ಷರ ಗಾತ್ರ

ಗಜೇಂದ್ರಗಡ: `ಇಂದು ನಮ್ಮ ರೋಣ ತಾಲ್ಲೂಕಿಗೆ ಆಗಮಿಸುತ್ತಿರುವ ನಾಡಿನ ದೊರೆ (ಮುಖ್ಯಮಂತ್ರಿ ಸದಾನಂದಗೌಡರು) ದಯಮಾಡಿ ನಮ್ಮ ಮೊರೆಯಾ ಕೇಳುವಿರಾ? ಕಟ್ಟಿದ ಕನಸು ನುಚ್ಚುನೂರಾಗಿದೆ. ಸಾಲದ ಬಾಧೆ ಹೆಗಲೇರಿ ಕುಣಿಯುತ್ತಿದೆ. ಸಾಲಕೊಟ್ಟವರು ವಸೂಲಿಗಾಗಿ ಮನೆ ಮುಂದೆ ಹಾಸಿ ಮಲಗಿದ್ದಾರೆ. ಮುಂದೇನು?~

`ಸಾಕಷ್ಟು ಹೇಳಿದ್ದಾಗಿದೆ, ಕೇಳಿದ್ದೂ ಆಗಿದೆ. ಪರಿಹಾರ ಮಾತ್ರ ಸಿಕ್ಕಿಲ್ಲ. ಮೂರಂಕಿ, ನಾಲ್ಕಂಕಿಯ ಸಾಲ ವಾಗಿದ್ದರೆ ಹೇಗೋ ಏನೋ ಮಾಡಿ ತೀರಿಸಿ ಋಣಮುಕ್ತರಾಗ್ತಿದ್ವೀ. ಆದರೆ, ಸಾಲದ ಮೊತ್ತ ಐದಂಕಿ, ಆರಂಕಿ ದಾಟಿದೆ. ಇದ್ದ ಹೊಲಮನೀ ಮಾರಿದ್ರೂ ಸಾಲ ಮಾತ್ರ ತೀರಲ್ಲ. ದಿನದಿನವೂ ಭಯದ ನೆರಳಲ್ಲಿ ಜೀವನ ಸವಿಸ್ತಿದ್ದೇವೆ.

ಇಂಥ ಸಂಕಷ್ಟದ ಜೀವ್ನ್ ನಡೆಸ್ತಿರೋ ರೈತರೆಂದರೆ ನಾವೇ ದೊರೆ, ಇದೇ ರೋಣ ತಾಲ್ಲೂಕಿನ ನೂರಾರು ದಾಳಿಂಬೆ ಬೆಳೆಗಾರರು. ತೋಟಗಾರಿಕೆ ಇಲಾಖೆ, ರಾಷ್ಟ್ರೀಕೃತ ಬ್ಯಾಂಕುಗಳು ಮನೆ ಮನೆಗೆ ಬಂದ್ರು. ವಾಣಿಜ್ಯ ಬೆಳೆ ಬೆಳೀರಿ, ಬದುಕು ಬಂಗಾರ ಮಾಡ್ಕೊಳ್ರೀ. ಸಹಾಯ ನಾವ್ ಮಾಡ್ತೇವಿ ಅಂಥ ಹೇಳಿದ್ರು.
ಲಾಭನೋ, ನಷ್ಟನೋ ನಮ್ಮ ಇತಿಮಿತಿಯೊಳಗೆ ತರಕಾರಿ, ಮೆಕ್ಕಜೋಳ, ಶೇಂಗಾ, ಜೋಳ ಏನೋ ಒಂದು ಬೆಳೆದ್ ಬದ್ಕು ಸಾಗಿಸ್ತೀದ್ವಿ.

ಅವ್ರ, ಇವ್ರ ಹೇಳಿದ್ರಲ್ಲಂಥ ಏಳೆಂಟು ವರ್ಷಗಳ ಹಿಂದೆ ಒಮ್ಮೀನೂ ಕಂಡೀರಿಯದ, ಕೇಳರೀಯದ ಲಕ್ಷ..ಲಕ್ಷ... ರೂ. ಬ್ಯಾಂಕಿನಿಂದ ಸಾಲ ಪಡೆದು ಒಂದು ಎಕ್ರೆದಿಂದ ಹತ್ತಾರು ಎಕ್ರೆವರೆಗೆ ದಾಳಿಂಬೆ ಗಿಡ ಹಚ್ಚಿದ್ವಿ. ಚಾಲೂಕಾ ಗಿಡಾನೂ ಚೊಲೋ ಬೆಳೆದ್ವು. ಹೂ, ಹಣ್ಣು ತುಂಬ್ಕೊಂಡು ನಿಂತ್ವು. ಇನ್ನೇನು ಹಣ್ಣು ಬಿಡ್ಸೀ ಮಾರಾಟ ಮಾಡಿ ಮಾಡಿದ್ದ ಸಾಲ ತೀರಿಸ್ಬೇಕು ಅನ್ನೊವಷ್ಟರಲ್ಲಿ ಬಂದೇ ಬಿಡ್ತು ಮಹಾಮಾರಿ!

ಅದೇ ದುಂಡಾಣು ಅಂಗಮಾರಿ ರೋಗ. ಎಲೆಯಲ್ಲ ಕಪ್ಪಾಗಿ, ಹಣ್ಣೆಲ್ಲ ಸೀಳಿಕೊಂಡು ರಾಶಿ ರಾಶಿಗಟ್ಟಲೆ ಹಣ್ಣು ನೆಲಕ್ಕೆ ಬಿತ್ತು. ವಿಜ್ಞಾನಿಗಳು ಬಂದ್ರು, ನೋಡಿದ್ರು, ಆರಾಮ್ ಆಗ್ಲಾರ್ದ್‌ ರೋಗ ಬಂದೇತಿ. ರೋಗಿದ್ದ ಗಿಡ, ಹಣ್ಣು ಕಿತ್ತು ಸುಟ್ಟಾಕ್ರೀ ಅಂದ್ರು, ಕಿತ್ತಿದ್ವಿ, ಸುಟ್ಟಾಕಿದ್ವಿ. ಹಿಂಗ್ ಮಾಡಿ ಮಾಡಿ ಹೋಲ ಸ್ವಚ್ಛಾತು. ಬ್ಯಾಂಕಿನ್ಯಾಗ ಸಾಲ ಹೆಚ್ಚಾತು.

ಸಾಲದ ಮೊತ್ತು ಗಗನಕ್ಕೇರಿದೆ. ಸಾಲ ಮನ್ನಾ ಮಾಡಿ ಸಾವಿನ ಮನೆಯಿಂದ ರೈತರನ್ನು ಹೊರತನ್ನಿ ಎಂದು ಬೆಳೆಗಾರರೆಲ್ಲ ಸೇರಿ ಸರ್ಕಾರಕ್ಕೆ ಕೊಟ್ಟ ಮನವಿಗೆ ಲೆಕ್ಕವಿಲ್ಲ. ಆದರೆ, ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.. ದಯಮಾಡಿ ಮುಖ್ಯಮಂತ್ರಿಯಗಳು ರೈತರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ದಾಳಿಂಬೆ ಬೆಳೆದು ಬದುಕು ಝಳಝಳ ಮಾಡಿಕೊಂಡಿರುವ ತಾಲ್ಲೂಕಿನ ದಾಳಿಂಬೆ ಬೆಳೆಗಾರರಾದ ವೀರನಗೌಡ ಗೌಡರ, ಯಲ್ಲಪ್ಪ ಹಾದಿಮನಿ, ಶಶಿಧರ ಹೂಗಾರ, ಲೋಕಪ್ಪ ರಾಠೋಡ, ಮೀರಾಸಾಬ ಸೌದಾಗರ, ಮಲ್ಲಿಕಾರ್ಜುನ ಅವಾರಿ, ಅಂಬಾಸಾ ರಾಯಬಾಗಿ, ಕುಬೇರ ಹೂಗಾರ ಹಾಗೂ ತಾಲ್ಲೂಕಿನ ಎಲ್ಲ ದಾಳಿಂಬೆ ಹಣ್ಣು ಬೆಳೆಗಾರರು ನಿಮ್ಮಲ್ಲಿ ಪರಪರಿಯಾಗಿ ಕೇಳ್ತೀದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT