ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಕ್ಕೆ ಜೀವ ತುಂಬುವ ಕಲಾವಿದ ರಮೇಶ

Last Updated 6 ಮಾರ್ಚ್ 2011, 8:45 IST
ಅಕ್ಷರ ಗಾತ್ರ

ಗಜೇಂದ್ರಗಡ: ಜಾತ್ರೆ ಎಂದರೆ ಹಣ್ಣು ಉತ್ತತ್ತಿ ಎಸೆದು ದೇವರಿಗೆ ಕಾಯಿ ಒಡೆದು ಕರ್ಪೂರ ಬೆಳಗುವ ಸಂಪ್ರದಾಯ ಎಲ್ಲೆಡೆ ಕಂಡು ಬರುತ್ತದೆ. ಆದರೆ. ಜಾತ್ರೆಯು ವಿವಿಧ ಕಲೆಗಳನ್ನು ಅನಾವರಣಗೊಳಿಸಲು ಇರುವ ಒಂದು ಉತ್ತಮ ವೇದಿಕೆ ಎನ್ನುವಂತೆ ಕಾಣಿಸಿವುದು ಉತ್ತರ ಕರ್ನಾಟಕದ ಪ್ರಸಿದ್ಧ ಬನಶಂಕರಿ ದೇವಿ ಜಾತ್ರೆ.

ಪ್ರಸಕ್ತ ವರ್ಷ ಬನಶಂಕರಿ ದೇವಿ ಜಾತ್ರೆಯಲ್ಲಿ ಜನರನ್ನು ಮನರಂಜಿಸಲು ಒಂಬತ್ತು ನಾಟಕ ಕಂಪನಿಗಳು ಇದ್ದವು. ಆದರೆ, ಅವುಗಳಲ್ಲಿ ಯಲುಬುರ್ಗಾ ತಾಲ್ಲೂಕಿನ ಮಂಡಲಗೇರಿ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ನಾಟ್ಯ ಸಂಘವು ಒಂದು.

ಈ ನಾಟಕ ಕಂಪನಿಯ ಯುವಸಾಹಿತಿ ಮಹೇಶ ಕಲ್ಲೊಳ್ಳಿ ವಿರಚಿತ ‘ಹೊತ್ತು ನೋಡಿ ಹೊಡ್ತ ಹಾಕು’ ಎನ್ನುವ ಸಾಮಾಜಿಕ ನಾಟಕ ಭರ್ತಿ 90ಪ್ರದರ್ಶನಗಳನ್ನು ಕಾಣುವ ಮೂಲಕ ಹಣಗಳಿಕೆಯಲ್ಲೂ ಜಾತ್ರೆಯಲ್ಲಿ ದಾಖಲೆಯನ್ನು ಸೃಷ್ಟಿಸಿ ಸಂಘಕ್ಕೆ ಮತ್ತು ಕಲಾವಿದರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತು.

ಈ ನಾಟಕದಲ್ಲಿ ಖಳನಾಯಕನ ಪಾತ್ರ ಮಾಡಿ ಈ ಭಾಗದ ನಾಟಕ ಪ್ರಿಯರ ಮನದಾಳದಲ್ಲಿ ಅಚ್ಚಳಿಯದ ಹೆಸರು ಮಾಡಿದ್ದು, ಉರಗಪ್ಪ ಪಾತ್ರಧಾರಿಯ ಕಲಾವಿದ ಸಿ.ರಮೇಶ.

ಮೂಲತಃ ದಾವಣಗೇರಿ ನಗರದ ಸಿ.ರಮೇಶ ಎನ್ನುವ ಕಲಾವಿದ ಖಳನಾಯಕನ ಪಾತ್ರಕ್ಕೆ ಜೀವ ತುಂಬಿ ಮೂರು ಗಂಟೆಗಳ ಕಾಲ ಜನರನ್ನು ಹಿಡಿದಿಟ್ಟುಕೊಂಡ ಪರಿ ಮಾತ್ರ ಅನನ್ಯವಾದದ್ದು. ಮುಖದ ತುಂಬ ಒರಟು  ಗಡ್ಡವನ್ನು ಬೆಳೆಸಿಕೊಂಡು ಮೈಯಲ್ಲಿ ಜಾಕೆಟ್ ಧರಿಸಿ ವೇದಿಕೆಯತ್ತ ಬಂದರೆ ಸಾಕು ಸಾವಿರಾರು ಸಂಖ್ಯೆಯ ಪ್ರೇಕ್ಷಕರ ಕೇಕೆಗೆ, ಚಪ್ಪಾಳೆಗೆ ಮಿತಿಯೇ ಇರಲಿಲ್ಲ.

ಸಾಮಾನ್ಯವಾಗಿ ಸಿನೆಮಾ ಮತ್ತು ನಾಟಕಗಳಲ್ಲಿ ನಾಯಕ ಪಾತ್ರ ಮಾಡಿದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದು ಸಹಜ. ಆದರೆ, ಈ ನಾಟಕದಲ್ಲಿ ಮಾತ್ರ ಖನನಾಯಕನ ಪಾತ್ರ ಜನಸಾಮಾನ್ಯರ ಮನದಾಳದಲ್ಲಿ ಉಳಿದಿದೆ ಎಂದರೆ ಆ ಪಾತ್ರಕ್ಕೆ ಕಲಾವಿದ ತುಂಬಿದ ಪೂರ್ಣ ಪ್ರಮಾಣ ನಟನೆಯೇ ಕಾರಣ.

‘ಉರುಗ, ಉರುಜಗಪ್ಪ, ಉಂಡಾಡಿ ಉರುಗಪ್ಪ ಈ ಅಪ್ಪ, ಹಾರಾಡಿದರೆ ಹದ್ದು ಹರಿದಾಡಿದರೆ ಹಾವು. ಎದೆಯಲ್ಲಿ ಛಲ.. ತೋಳಲ್ಲಿ ಬಲ.. ನಾ ನಡೆದರೆ ನಡುಗುವುದು ಗಡಗಡ ಈ ನೆಲ, ನಾ ಆಡಿದ್ದೇ ಮಾತು ಹೋದದ್ದೆ ದಾರಿ, ಕೊಟ್ರೆ ವರ ಇಟ್ಟರೆ ಶಾಪ’ ಎಂದು ಪಾತ್ರದಾರಿ ರಮೇಶ ಹೇಳುತ್ತಿದ್ದಂತೆ ಹುಚ್ಚದ್ದು ಕುಣಿಯುತ್ತಿದ್ದ ಪ್ರೇಕ್ಷಕರು ನೋಟಿನ ಮಾಲೆಯನ್ನು ಹಾಕಿ ಸಂಭ್ರಮಿಸುತ್ತಿದ್ದರು.

ಅಂದಾಜು 40ವರ್ಷ ವಯಸ್ಸಿನ ರಮೇಶ ಬಾಲ್ಯದಿಂದಲೂ ಈ ವರೆಗೆ ನಾಡಿನ ವಿವಿಧ ಕಂಪನಿಗಳಲ್ಲಿ 30ರಿಂದ35 ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿರುವ  ಅವರಿಗೆ  ‘ಹೊತ್ತು ನೋಡಿ ಹೊಡ್ತ ಹಾಕು’ ನಾಟಕದ ಖಳನ ಪಾತ್ರಕ್ಕೆ ಸಿಕ್ಕಟ್ಟು ಹೆಸರು ಬೇರಾವ ನಾಟಕದಲ್ಲಿ ಸಿಕ್ಕಿಲ್ಲ ಎಂದು ಹೇಳುವ ಅವರು, ಈ ಮಂಡಲಗೇರಿ ನಾಟಕ ಕಂಪನಿಯ ಮಾಲೀಕರು ಮತ್ತು ಸಹ ಕಲಾವಿದರು ಕೊಟ್ಟ ಪ್ರೋತ್ಸಾಹವೇ ಜನರ ಮನದಾಳದಲ್ಲಿ ಉಳಿಯುವಂಥ ಅಭಿನಯ ಕೊಡಲು ಸಾಧ್ಯವಾದದ್ದು ಎನ್ನುತ್ತಾರೆ.

ಜಾತ್ರೆಯಲ್ಲಿ ಇವರ ಅಭಿನಯ ಕಂಡು ಮಾರು ಹೋದ ಅನೇಕ ಗ್ರಾಮಗಳ ಜನರು ನಾಟಕದ ಬಿಡುವಿನ ವೇಳೆ ಇವರನ್ನು ಖುದ್ದು ಭೇಟಿ ಮಾಡಿ ಯೋಗಕ್ಷೇಮ ವಿಚಾರಣೆ, ಪಾತ್ರದ ಕುರಿತು ಅಭಿನಂದನೆಯ ಸುರಿಸಿದ್ದು ಇವರ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಅಂಥದ್ದೇ ಒಂದು ಕಾರಣಕ್ಕಾಗಿ ಕಲಾವಿದ ಉರುಗಪ್ಪ ಅವರನ್ನು ಇತ್ತೀಚೆಗೆ ಗಜೇಂದ್ರಗಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಗಜೇಂದ್ರಗಡಕ್ಕೆ ಕರೆತಂದು ಅವರನ್ನು ಆತ್ಮೀಯವಾಗಿ ಸನ್ಮಾಸಿದರು.

ಆ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕಲಾವಿದ ರಮೇಶ ಅವರು, ಬನಶಂಕರಿ ಜಾತ್ರೆಯಲ್ಲಿ 90ಪ್ರಯೋಗ ಕಂಡ ಹೊತ್ತು ನೋಡಿ ಹೊಡ್ತ ಹಾಕು ನಾಟಕದಲ್ಲಿ ನಾನು 82 ಪ್ರಯೋಗಗಳಲ್ಲಿ ಉರುಗಪ್ಪನ ಪಾತ್ರವನ್ನು ಮಾಡಿದ್ದೇನೆ. ನನ್ನ ಜೀವ ಮಾನದಲ್ಲಿಯೇ ನಾಟಕ ನಡೆಯುತ್ತಿದ್ದ ಸಂದರ್ಭದಲ್ಲಿ ಜನರು ವೇದಿಕೆಗೆ ಬಂದು ನೋಟಿನ ಮಾಲೆಯನ್ನು ಕೊರಳಿಗೆ ಹಾಕಿದ್ದು, ಇದೇ ನಾಟಕದಲ್ಲಿ ಎಂದು ಆ ಸವಿನೆನಪನ್ನು ಸ್ಮರಸಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT