ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಅಕ್ರಮ ಮರಳು ಸಾಗಾಟ

Last Updated 29 ಮೇ 2011, 10:40 IST
ಅಕ್ಷರ ಗಾತ್ರ

ಗಜೇಂದ್ರಗಡ: ಬೇಸಿಗೆ ಕಳೆದು ಮಳೆಗಾಲ ಆರಂಭಗೊಂಡಿದೆ. ಆದರೆ, ಈ ಭಾಗದ ಹಳ್ಳದಲ್ಲಿ ಹವ್ಯಾಹತವಾಗಿ ನಡೆದಿರುವ ಅಕ್ರಮ ಉಸುಕು ಸಾಗಾಟಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಮರಳಿಗಾಗಿ ಹಳ್ಳವನ್ನು ಅಡ್ಡಾದಿಡ್ಡಿಯಾಗಿ ಕೊರೆಯುತ್ತಿರುವುದರಿಂದ ದಡದಲ್ಲಿರುವ ರೈತರ ಹೊಲಗಳಿಗೆ ಮಳೆಯ ನೀರು ನುಗ್ಗುವ ಅಪಾಯ ಎದುರಾಗಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿರುವ ಹಳ್ಳದಲ್ಲಿ ನಿತ್ಯ ನೂರಾರು ಟ್ರ್ಯಾಕ್ಟರ್ ಮತ್ತು ಲಾರಿಗಳ ಮುಖಾಂತರ ಹಗಲು ರಾತ್ರಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಆದರೆ ರೈತರು ತಾಲ್ಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಟ್ರ್ಯಾಕ್ಟರ್ ಮರಳಿಗೆ 100ರೂ. ವಸೂಲಿ: ಮೊದಲು ಹಳ್ಳದಲ್ಲಿ ಜನರು ಬಂಡಿಯ ಮೂಲಕ ಮರಳು ತುಂಬಿಕೊಂಡು ಹೋಗುತ್ತಿದ್ದರು. ರೈತರು ಅವರ ಕುರಿತಾಗಿ ವಿಚಾರಿಸುತ್ತಿರಲಿಲ್ಲ. ಅದಕ್ಕಾಗಿ ಜನರು ಹಳ್ಳದ ದಡದಲ್ಲಿ ಹೊಲ ಇರುವ ಕೆಲವರು ಟ್ರ್ಯಾಕ್ಟರ್ ಮಾಲೀಕರಿಂದ ದುಡ್ಡು ವಸೂಲಿ ಮಾಡಲು ಆರಂಭಿಸಿದರು.

ಆರಂಭದಲ್ಲಿ ಟ್ರಾಕ್ಟರ್‌ಗೆ 20ರೂಪಾಯಿ ಪಡೆಯುತ್ತಿದ್ದ ರೈತರು ಸದ್ಯ 100 ರೂಪಾಯಿ ಪಡೆಯುತ್ತಿದ್ದಾರೆ.ಕೆಲವು ರೈತರು ಹಣ ವಸೂಲಿ ಮಾಡುತ್ತಿರುವುದರಿಂದ ಪಕ್ಕದ ಹೊಲದ ರೈತರು ದಂಡ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಆಡಳಿತ ಮೌನ: ಹಳ್ಳದಲ್ಲಿ ಅಕ್ರಮ ಮರಳು ಮಾರಾಟ ಮತ್ತು ಸಾಗಾಣಿಕೆಯಿಂದ ರೈತರಿಗೆ ತೊಂದರೆ ಆಗುತ್ತಿರುವುದು ತಾಲ್ಲೂಕು ಆಡಳಿತಕ್ಕೆ ವಿಷಯ ಗೊತ್ತಿದ್ದರೂ ಅವರು ಮೌನಕ್ಕೆ ಶರಣಾಗಿರುವುದು ಸಮಸ್ಯೆಗೆ ಮುಖ್ಯ ಕಾರಣ.

ಟ್ರ್ಯಾಕ್ಟರ್ ಮರಳಿಗೆ 800 ರೂಪಾಯಿ ಇದೆ. ಆದರೆ ಅಕ್ಕಪಕ್ಕದ ಹಳ್ಳದಿಂದ ತರುತ್ತಿದ್ದ ಟ್ರ್ಯಾಕ್ಟರ್ ಮರಳಿಗೆ 250 ರಿಂದ 300 ರೂಪಾಯಿ ಇತ್ತು. ಆರೇಳು ತಿಂಗಳ ಹಿಂದೆ ಅದು 400 ರಿಂದ 500 ರೂಪಾಯಿಗೆ ಹೆಚ್ಚಿಸಿದ್ದಾರೆ.
 
ಸದ್ಯ ಹಳ್ಳದ ದಡದಲ್ಲಿ ಮೂರರಿಂದ ನಾಲ್ಕು ಜನರು ಸರದಿಯಲ್ಲಿ ಅಕ್ರಮವಾಗಿ ದುಡ್ಡು ವಸೂಲಿ ಮಾಡುತ್ತಿರುವುದರಿಂದ ಸದ್ಯ ಟ್ರ್ಯಾಕ್ಟರ್ ಮರಳಿಗೆ 800 ರಿಂದ 850 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರಿಗೆ ಮತ್ತಷ್ಟು ಹೊರೆಯಾಗಿದೆ.

ನಿತ್ಯ ಕಾದಾಟ: ಹಳ್ಳದಲ್ಲಿ ಅಕ್ರಮವಾಗಿ ಮರಳು ತುಂಬುವುದನ್ನು ರೈತರು ವಿರೋಧಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕರು ಮತ್ತು ರೈತರ ಮಧ್ಯ ವಾಗ್ವಾದವು ನಡೆಯುತ್ತದೆ. ಜೊತೆಗೆ ಕೆಲವೊಮ್ಮೆ ದುಡ್ಡು ವಸೂಲಿ ಮಾಡುವವರೊಂದಿಗೆ ಚಾಲಕರು ಜಗಳ ಮಾಡುವುದು ಇದೆ. ತಾಲ್ಲೂಕು ಆಡಳಿತ ಇನ್ನಾದರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT