ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ರಾಮನಾಮ ಸ್ಮರಣೆಗೆ ಶತಮಾನದ ಇತಿಹಾಸ

ಸಂಪಿಗೆಮರದಕೊಪ್ಪಲಿನಲ್ಲಿದೆ ಆಕರ್ಷಕ ರಾಮಮಂದಿರ: ಗ್ರಾಮಸ್ಥರಿಂದ ನಿತ್ಯ ಭಜನೆ
Published 23 ಜನವರಿ 2024, 4:35 IST
Last Updated 23 ಜನವರಿ 2024, 4:35 IST
ಅಕ್ಷರ ಗಾತ್ರ

ಹಳೇಬೀಡು: ಪುಟ್ಟಗ್ರಾಮ ಅಡಗೂರಿನ ಸಂಪಿಗೆಮರದ ಕೊಪ್ಪಲು ಗ್ರಾಮದಲ್ಲಿ 25 ಕುಟುಂಬ ನೆಲೆಸಿದ್ದು, ಗ್ರಾಮದಲ್ಲಿ ಶ್ರದ್ಧಾ–ಭಕ್ತಿಯಿಂದ ನಡೆಯುತ್ತಿರುವ ರಾಮಭಜನೆಗೆ ಶತಮಾನದ ಇತಿಹಾಸವಿದೆ. ಪರಂಪರೆಯಿಂದ ಬಂದ ರಾಮನಾಮ ಸ್ಮರಣೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಕಳೆದ ವರ್ಷ ಏಪ್ರಿಲ್ 24 ರಂದು ಗ್ರಾಮದಲ್ಲಿ ₹ 30 ಲಕ್ಷ ವೆಚ್ಚದ ಆಕರ್ಷಕವಾದ ರಾಮಮಂದಿರ ಲೋಕಾರ್ಪಣೆ ಮಾಡಲಾಗಿದೆ.

100 ವರ್ಷದ ಹಿಂದೆ ರಾಮಭಜನೆ ಮಾಡುವುದಕ್ಕಾಗಿ ₹10 ರಿಂದ ₹ 40 ರವರೆಗೆ ದೇಣಿಗೆ ಸಂಗ್ರಹಿಸಿ, ಹೆಂಚಿನ ಮನೆ ನಿರ್ಮಾಣ ಮಾಡಲಾಗಿತ್ತು. ಮನೆಯಲ್ಲಿ ಶ್ರೀರಾಮನ ಪರಿವಾರದ ಚಿತ್ರ ಇಟ್ಟುಕೊಂಡು ಭಜನೆ ಮಾಡಲಾಗುತ್ತಿತ್ತು. ಭಜನೆಯ ಮನೆ ಶಿಥಿಲವಾಗಿದ್ದರಿಂದ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬುದು ಹಿರಿಯರ ಕನಸಾಗಿತ್ತು.

‘ರಾಮ ಮಂದಿರ ನಿರ್ಮಾಣ ಮಾಡುವುದಕ್ಕಾಗಿ ಹಿರಿಯರು 50 ವರ್ಷಗಳ ಹಿಂದೆ ಪ್ರಯತ್ನ ನಡೆಸಿದ್ದರೂ, ಕಾರ್ಯಗತವಾಗಿರಲಿಲ್ಲ. ಪ್ರಕೃತಿ ವಿಕೋಪ, ಬೆಲೆ ಕುಸಿತದಿಂದ ಆಗಾಗ್ಗೆ ರೈತರಿಗೆ ಬಿದ್ದ ಹೊಡೆತದಿಂದ ರಾಮ ಮಂದಿರ ನಿರ್ಮಾಣದ ಹಿರಿಯರ ಕನಸು ನನಸಾಗದೇ ಉಳಿದಿತ್ತು. ಗ್ರಾಮದ ಮಗಳು ಜಯಮ್ಮ ಅವರ ಪ್ರಸ್ತಾಪ ಮುಂದಿಟ್ಟುಕೊಂಡು, ಇಂದಿನ ಯುವಕರ ಪಡೆ ಮುನ್ನುಗಿತ್ತು. ಪರಿಣಾಮವಾಗಿ ಗ್ರಾಮದಲ್ಲಿ ₹ 30 ಲಕ್ಷ ವೆಚ್ಚದ ಆಕರ್ಷಕವಾದ ರಾಮಮಂದಿರ ತಲೆ ಎತ್ತಿ ನಿಂತಿದೆ. ಆಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠೆಗಿಂತ 8 ತಿಂಗಳ ಹಿಂದೆಯಷ್ಟೆ ಗ್ರಾಮದ ರಾಮಮಂದಿರ ಲೋಕಾರ್ಪಣೆ ಆಗಿದೆ’ ಎನ್ನುತ್ತಾರೆ ಗ್ರಾಮದ ಮೊಮ್ಮಗ ಸಾಣೇನಹಳ್ಳಿಯ ಎಸ್.ಎನ್.ಯೋಗೀಶಪ್ಪ.

ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಸಂಪಿಗೆಮರದ ಕೊಪ್ಪಲಿನ ರಾಮಮಂದಿರವನ್ನು ಸಹ ಕಳೆದ ವರ್ಷ ಏಪ್ರಿಲ್ 24 ರ ಸೋಮವಾರ ಲೋಕಾರ್ಪಣೆ ಮಾಡಿರುವುದು ವಿಶೇಷ.

ಸ್ಥಳೀಯ ವಾಸ್ತುಶೈಲಿಯನ್ನು ಉಳಿಸಿಕೊಂಡು, ಕೇರಳ ಹಾಗೂ ಕರ್ನಾಟಕದ ಕರಾವಳಿ ಶೈಲಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ರಾಮಮಂದಿರ ಪುಟ್ಟದಾದರೂ ಭಕ್ತರನ್ನು ತನ್ನತ್ತ ಸೆಳೆಯುವಂತಿದೆ. ರಾಮಮಂದಿರ ಪ್ರವೇಶಿಸಿದಾಕ್ಷಣ ಭಕ್ತಿಯ ಪರಾಕಾಷ್ಠತೆ ಹೆಚ್ಚುತ್ತದೆ ಎನ್ನುತ್ತಾರೆ ಶಿಕ್ಷಕ ಪ್ರಕಾಶ್.

ಗ್ರಾಮದಲ್ಲಿ ಹಾಲುಮತಸ್ತರು ನೆಲೆಸಿದ್ದಾರೆ. ಹಾಲುಮತಸ್ತರ ಕುಲ ದೇವರು ಬೀರಲಿಂಗೇಶ್ವರ. ಬೇರೆ ಊರಿನಲ್ಲಿರುವ ಬೀರಲಿಂಗೇಶ್ವರನಿಗೆ ಗ್ರಾಮಸ್ಥರು ನಡೆದುಕೊಳ್ಳುತ್ತಾರೆ. ಆದರೆ ಸ್ವಗ್ರಾಮದಲ್ಲಿ ಮಾತ್ರ ಶ್ರೀರಾಮ ಪರಿವಾರದ ಪೂಜೆ ಮಾಡಿಕೊಂಡು ಬಂದಿದ್ದಾರೆ. ಹಾಲು ಕೆಟ್ಟರೂ ಕೆಡಬಹುದು, ಆದರೆ ಹಾಲುಮತಸ್ತರು ಕೆಡುವುದಿಲ್ಲ ಎಂಬ ಮಾತಿನಂತೆ ಗ್ರಾಮಸ್ಥರು ನಡೆದುಕೊಂಡು ಬಂದಿದ್ದಾರೆ ಎಂಬ ಮಾತು ಗ್ರಾಮದ ಸುತ್ತಲಿನ ಜನರಿಂದ ಕೇಳಿಬರುತ್ತದೆ.

ಹಳೇಬೀಡು ಸಮೀಪದ ಅಡಗೂರು ಸಂಪಿಗೆಮರದಕೊಪ್ಪಲಿನ ಶ್ರೀರಾಮ ಮಂದಿರ
ಹಳೇಬೀಡು ಸಮೀಪದ ಅಡಗೂರು ಸಂಪಿಗೆಮರದಕೊಪ್ಪಲಿನ ಶ್ರೀರಾಮ ಮಂದಿರ

ಆಯೋಧ್ಯೆ ಮಂದಿರ ನಿರ್ಮಾಣ ಸಂದರ್ಭದಲ್ಲಿ ನಮ್ಮೂರಿನಲ್ಲಿಯೂ ಮಂದಿರ ಲೋಕಾರ್ಪಣೆ ಆಗಿರುವುದು ಹೆಮ್ಮೆಯ ವಿಚಾರ

– ಕರೀಬಸವೇಗೌಡ ಗ್ರಾಮದ ಮುಖಂಡ

ದಶಕಗಳ ಕಾಲ ಸಂಭವಿಸಿದ ಹಲವು ವಿಘ್ನಗಳನ್ನು ದಾಟಿ ನಮ್ಮೂರಿನಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಹಲವು ವರ್ಷ ರಾಮ ಪರಿವಾರ ಚಿತ್ರ ಪೂಜಿಸಿ ಭಜನೆ ಮಾಡಲಾಗಿತ್ತು

–ಚನ್ನಬಸವೇಗೌಡ, ನಿವೃತ್ತ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT