ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿಗೆ ₹25 ಸಾವಿರ ಬೆಲೆ ನಿಗದಿಗೆ ಆಗ್ರಹ

ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
Published 9 ಫೆಬ್ರುವರಿ 2024, 12:47 IST
Last Updated 9 ಫೆಬ್ರುವರಿ 2024, 12:47 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನಲ್ಲಿ ಬರಗಾಲ ಪರಿಸ್ಥಿತಿ ಆವರಿಸಿದ್ದು, ತಾಲ್ಲೂಕಿನ ರೈತರು ಹಾಗೂ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಶೀಘ್ರವೇ ಕೊಬ್ಬರಿಗೆ ಕನಿಷ್ಠ ₹ 25 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ನಾಫೆಡ್ ಮೂಲಕ ಖರೀದಿ ಮಾಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ವತಿಯಿಂದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ನಗರದ ತಾಲ್ಲೂಕು ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಲಾಯಿತು. ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಘಟಕದ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಎರಡು ವರ್ಷಗಳಿಂದ ಕೊಬ್ಬರಿ ದರ ಸುಮಾರು ₹ 7ಸಾವಿರದಿಂದ ₹ 8 ಸಾವಿರಕ್ಕೆ ಕುಸಿದಿದೆ. ಕೊಬ್ಬರಿ ದರವನ್ನು ಕನಿಷ್ಠ ₹ 25 ಸಾವಿರ ನಿಗದಿ ಮಾಡಬೇಕು ಎಂದು ಇತ್ತೀಚೆಗೆ ಅರಸೀಕೆರೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಹಾಗೂ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು ದುರದೃಷ್ಟಕರ. ರೋಗ ಬಾಧೆಯಿಂದ ತೆಂಗಿನ ಮರಗಳು ಹಾನಿಯಾಗಿ ತೆಂಗು ಬೆಳೆ ಅವನತಿಯತ್ತ ಸಾಗಿದೆ. ತೆಂಗು ಬೆಳೆಗಾರರು ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದು, ಜೀವನ ದುಸ್ತರವಾಗಿದೆ. ಕೂಡಲೇ ಸರ್ಕಾರ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಔದಾರ್ಯವನ್ನು ತೋರಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಬೋರನಕೊಪ್ಪಲು ಜಯರಾಮ್ ಮಾತನಾಡಿ, ಸರ್ಕಾರಗಳು ರೈತರ ಪರಿಸ್ಥಿತಿ ಅರ್ಥ ಮಾಡಿಕೊಂಡು ತೆಂಗು ಮತ್ತು ಕೊಬ್ಬರಿಗೆ ಕನಿಷ್ಠ ₹ 25 ಸಾವಿರ ಬೆಂಬಲ ಬೆಲೆ ನಿಗದಿ ಮಾಡಬೇಕು. 65 ವರ್ಷ ಮೀರಿದ ರೈತರಿಗೆ ನೀಡುವ ₹ 600 ವೇತನವನ್ನು ₹ 1500 ಕ್ಕೆ ಏರಿಸಬೇಕು. ಕೂಡಲೇ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಬಾಬು, ಮುಖಂಡರಾದ ಚಿಕ್ಕೂರು ಗಂಗಾಧರ ಮೂರ್ತಿ, ಹಂದ್ರಾಳು ಸಿದ್ದಪ್ಪ, ರಮೇಶ್, ಪ್ರಭಾಕರ್, ಹಲವು ಮುಖಂಡರು, ರೈತರು ಭಾಗವಹಿಸಿದ್ದರು.

ಬೆಂಬಲ ಬೆಲೆ: ಕೇಂದ್ರಕ್ಕೆ ಸೇರಿದ್ದು

ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಕುಸಿತ ಕಂಡು ಬಂದ ಸಂದರ್ಭದಲ್ಲಿ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದೇ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ಹೇಳಿದರು. ಪ್ರತಿಭಟನಕಾರರ ಜೊತೆಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದ ನಂತರ ರಾಜ್ಯ ಸರ್ಕಾರ ಸಹಾಯಧನವನ್ನಷ್ಟೇ ನೀಡಬಹುದು. ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ ಎಂದರು. ನಾಫೆಡ್ ಮೂಲಕ ಖರೀದಿ ಮಾಡುವ ಕ್ವಿಂಟಲ್ ಕೊಬ್ಬರಿಗೆ ಈಗಾಗಲೇ ರಾಜ್ಯ ಸರ್ಕಾರ ₹ 1500 ಸಹಾಯಧನ ಘೋಷಣೆ ಮಾಡಿದೆ. ತಾಲ್ಲೂಕಿನ ಕೊಬ್ಬರಿ ಬೆಳೆಗಾರರ ಹಿತದೃಷ್ಟಿಯಿಂದ ಶೀಘ್ರವೇ ನಾಫೆಡ್ ಖರೀದಿ ಕೇಂದ್ರ ತೆರೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದು ರೈತರೊಂದಿಗೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಪರಿಣಾಮ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ಸಾಧ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT