ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು | ಮಳೆಗಾಗಿ ಕಾಯುತ್ತಿರುವ ಬೆಳೆಗಾರರು

ಹೊಗೆಸೊಪ್ಪು ಸಸಿ ರಕ್ಷಿಸಿಕೊಳ್ಳಲು ಟ್ರೇ ಮೊರೆ ಹೋದ ಬೆಳೆಗಾರರು
Published 21 ಏಪ್ರಿಲ್ 2024, 6:50 IST
Last Updated 21 ಏಪ್ರಿಲ್ 2024, 6:50 IST
ಅಕ್ಷರ ಗಾತ್ರ

ಕೊಣನೂರು: ಕಳೆದ ವರ್ಷ ಹೊಗೆಸೊಪ್ಪಿಗೆ ದಾಖಲೆಯ ಬೆಲೆ ದೊರೆತದ್ದರಿಂದ ಈ ವರ್ಷ ಹೆಚ್ಚಿನ ಸಂಖ್ಯೆಯ ಬೆಳೆಗಾರರು ತಂಬಾಕು ಬೆಳೆಯಲು ಮುಂದಾಗಿದ್ದರೂ, ಮಳೆಯಿಲ್ಲದೆ ನಿರಾಸೆಗೊಂಡಿದ್ದಾರೆ.

ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಬೆಲೆ ಕಡಿಮೆ. ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಹೊಗೆಸೊಪ್ಪು ಬೆಳೆಯಲು ಅನೇಕ ತಂಬಾಕು ಬೆಳೆಗಾರರು ಹಿಂದೇಟು ಹಾಕುತ್ತಿದ್ದರು. 2022 ರಿಂದ ಈಚೆಗೆ ವರ್ಷದಿಂದ ವರ್ಷಕ್ಕೆ ತಂಬಾಕು ಬೆಲೆ ಏರಿಕೆ ಆಗುತ್ತಿದ್ದು, ಪರವಾನಗಿ ಇದ್ದರೂ ಹೊಗೆಸೊಪ್ಪಿನ ಸಹವಾಸ ಬೇಡ ಎಂದು ಕೈ ಚೆಲ್ಲಿದ್ದ ಬೆಳೆಗಾರರೂ ಈ ಬಾರಿ ಹೊಗೆಸೊಪ್ಪು ಬೆಳೆಯಲು ಉತ್ಸುಕರಾಗಿದ್ದಾರೆ.

ವಿಶೇಷವಾಗಿ ಕಾಳಜಿ ವಹಿಸಿ, ಒಂದೂವರೆ ತಿಂಗಳಿಂದಲೂ ಸಸಿಮಡಿಗಳನ್ನು ಬೆಳೆಸಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಇದುವರೆಗೂ ಕೃಪೆ ತೋರದ ವರುಣ, ಹೊಗೆಸೊಪ್ಪು ಬೆಳೆಗಾರರನ್ನು ಆಕಾಶದತ್ತ ನೋಡುವಂತೆ ಮಾಡಿದ್ದಾನೆ.

ಪ್ರತಿವರ್ಷವೂ ಏಪ್ರಿಲ್‌ನಲ್ಲಿ ಬಹುತೇಕ ರೈತರು ಹೊಗೆಸೊಪ್ಪು ನಾಟಿ ಮಾಡುತ್ತಿದ್ದರು. ಈ ವರ್ಷ ಮಳೆಯಿಲ್ಲದೆ ಇನ್ನೂ ಹೊಲಗಳನ್ನು ಸಹ ಹಸನು ಮಾಡಿಕೊಳ್ಳಲು ಆಗಿಲ್ಲ. ಪ್ರತಿವರ್ಷ ಸಾಮಾನ್ಯವಾಗಿ ಯುಗಾದಿಯ ನಂತರ ಮುಂಗಾರು ಮಳೆ ಸುರಿಯುತ್ತಿದ್ದು, ಈ ವರ್ಷ ಯುಗಾದಿ ಕಳೆದು 10 ದಿನವಾದರೂ ಹದ ಮಳೆಯಾಗಿಲ್ಲ.

ಮಡಿಯಲ್ಲೇ ಬಿಟ್ಟರೆ ಸಸಿಗಳು ಮಳೆ, ಆಲಿಕಲ್ಲು ಅಥವಾ ಅತಿಯಾದ ಧಗೆಯಿಂದ ಹಾಳಾಗುವುದನ್ನು ತಪ್ಪಿಸಲು, ಮಡಿಯಿಂದ ಕಿತ್ತು ಟ್ರೇನಲ್ಲಿ ಹಾಕಿ ಪೋಷಿಸುತ್ತಿದ್ದಾರೆ. ಬಹುತೇಕ ತಂಬಾಕು ಬೆಳೆಗಾರರು ಮಳೆ ಬೀಳುವವರೆಗೆ ಸಸಿಗಳನ್ನು ಉಳಿಸಿಕೊಳ್ಳಲು ಕೋಕೋಪಿಟ್ ಸಹಿತ ಟ್ರೇನಲ್ಲಿ ಸಸಿಗಳನ್ನು ಹಾಕಿ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮಡಿಯಲ್ಲಿರುವ ಸಸಿಗಳು ಹೆಚ್ಚು ಉದ್ದವಾಗಿ ಬೆಳೆದಲ್ಲಿ ನಾಟಿ ಮಾಡಲು ಯೋಗ್ಯ ಇಲ್ಲದಂತಾಗುತ್ತವೆ ಎಂದು ಸಸಿಗಳ ಎಲೆಗಳನ್ನು ಮುರಿದು ನಿಧಾನವಾಗಿ ಬೆಳವಣಿಗೆ ಆಗುವಂತೆ ಮಾಡುತ್ತಿದ್ದಾರೆ.

ರಾಮನಾಥಪುರ ತಂಬಾಕು ಮಾರುಕಟ್ಟೆಯ ವ್ಯಾಪ್ತಿಯ ಅತಿ ಹೆಚ್ಚು ತಂಬಾಕು ಬೆಳೆಯುವ ಕೊಣನೂರು, ರಾಮನಾಥಪುರ ಭಾಗದಲ್ಲಿ ನೀರಾವರಿ ವ್ಯವಸ್ಥೆಯಿರುವ ಕೆಲವೇ ಕೆಲವು ಬೆಳೆಗಾರರು ಈಗಾಗಲೇ ಹೊಗೆಸೊಪ್ಪು ಸಸಿಗಳನ್ನು ನಾಟಿ ಮಾಡಿದ್ದು, ಹೊಲದಲ್ಲಿ ಸಸಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಹೊಗೆಸೊಪ್ಪನ್ನೇ ಮುಖ್ಯ ಬೆಳೆಯಾಗಿ ಅವಲಂಬಿಸಿರುವ ಸುಮಾರು 7 ಸಾವಿರ ತಂಬಾಕು ಬೆಳೆಗಾರರನ್ನು ಮಳೆಯ ಕೊರತೆಯು ದೊಡ್ಡಮಟ್ಟದಲ್ಲಿ ಕಾಡುತ್ತಿದೆ.

ಕಳೆದ ಒಂದು ವಾರದಂದ ಈಚೆಗೆ 3 ದಿನ ಬಂದ ತುಂತುರು ಮಳೆ ನಿರಾಸೆಗೊಳಿಸುತ್ತಿದ್ದು, ತಂಬಾಕು ಬೆಳೆಗಾರರ ಆಸೆಗೆ ತಣ್ಣೀರೆರೆಚಿದೆ.

ಮಡಿಯಲ್ಲಿ ಹುಲುಸಾಗಿ ಬೆಳೆದು ನಾಟಿಗೆ ಸಿದ್ಧವಿರುವ ಹೊಗೆಸೊಪ್ಪು ಸಸಿಗಳು.
ಮಡಿಯಲ್ಲಿ ಹುಲುಸಾಗಿ ಬೆಳೆದು ನಾಟಿಗೆ ಸಿದ್ಧವಿರುವ ಹೊಗೆಸೊಪ್ಪು ಸಸಿಗಳು.
ಯುಗಾದಿಯ ನಂತರ ಮಳೆ ಬಿದ್ದು ಏಪ್ರಿಲ್ ಕೊನೆಯ ವಾರಕ್ಕೆ ಹೊಗೆಸೊಪ್ಪು ನಾಟಿಗೆ ಸಮಯ ಸರಿ ಹೋಗುತ್ತಿತ್ತು. ಈ ವರ್ಷ ಇದುವರೆಗೂ ಮಳೆಯಾಗದೇ ಸಿದ್ಧತೆ ಮಾಡಲು ಆಗಿಲ್ಲ.
ಸತೀಶ್ ಎಸ್.ಡಿ.ಸರಗೂರು ತಂಬಾಕು ಬೆಳೆಗಾರ

‘ಪರವಾನಗಿ ನವೀಕರಿಸಿ’ ‘ಏಪ್ರಿಲ್ ಕೊನೆಯ ವಾರದಿಂದ ಮೇ 10ರೊಳಗೆ ತಂಬಾಕು ನಾಟಿ ಮಾಡಲು ಸಕಾಲ ಮಂಡಳಿ ಶಿಫಾರಸು ಮಾಡಿದೆ.  ಕಳೆದ ವರ್ಷ ಹೆಚ್ಚಿದ ಬೆಲೆಯಿಂದ ಸ್ವಯಂ ಪ್ರೇರಿತರಾಗಿ ತಂಬಾಕು ಬೆಳೆಗಾರರು ಈ ಬಾರಿ ಹೆಚ್ಚು ಉತ್ಸಾಹ ತೋರುತ್ತಿದ್ದು ಸಿದ್ಧತೆ ನಡೆಸಿದ್ದಾರೆ. ತಂಬಾಕು ಬೆಳೆಯುವ ಪರವಾನಗಿ ನವೀಕರಣ ಪ್ರಕ್ರಿಯೆಯು ಮಾರ್ಚ್‌ 27 ರಿಂದ ಪ್ರಾರಂಭವಾಗಿದೆ. ಪರವಾನಗಿದಾರರೂ 2024-25ನೇ ಸಾಲಿಗೆ ನವೀಕರಿಸಿಕೊಳ್ಳಬೇಕು’ ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕಿ ಸವಿತಾ ತಿಳಿಸಿದ್ದಾರೆ.

ರಾಮನಾಥಪುರ ಮಾರುಕಟ್ಟೆಯಲ್ಲಿ ದರ (ಕೆ.ಜಿ.ಗೆ) ವರ್ಷ; ಗರಿಷ್ಠ; ಸರಾಸರಿ 2021–22; ₹ 206; ₹ 160.79 2022-23; ₹270; ₹ 229.75 2023-24; ₹ 290; ₹ 255 ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದರ (ಕೆ.ಜಿ.ಗೆ) 2014-15; ₹107.49 2015-16; ₹ 135.24 2016-17; ₹ 134.58 2017-18; ₹ 139.30 2018-19; ₹ 142.28 2019-20; 124.06 2020-21; ₹ 119.87 2021-22; ₹ 163.11 2022-23; 228.01 2023-24; 257.46

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT