ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ಪ್ರದರ್ಶನದ ಮೂಲಕ ಇತಿಹಾಸದ ಜಾಗೃತಿ

ಅಪರೂಪದ ನಾಣ್ಯ, ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸಿ ಸತೀಶ್
ಸಿದ್ದರಾಜು
Published 4 ಫೆಬ್ರುವರಿ 2024, 7:30 IST
Last Updated 4 ಫೆಬ್ರುವರಿ 2024, 7:30 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಅಮೂಲ್ಯವಾದ ಅಂಚೆ ಚೀಟಿ, ಲಕೋಟೆ, ನಾಣ್ಯಗಳ ಸಂಗ್ರಹ ಮಾಡಿರುವ ಇಲ್ಲಿನ ಎಚ್‌.ಕೆ. ಸತೀಶ್‌, ಪ್ರದರ್ಶನದ ಏರ್ಪಡಿಸುವ ಮೂಲಕ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ, ವಿಶೇಷವಾದ ನಾಣ್ಯಗಳು, ಅಂಚೆ ಚೀಟಿಗಳು, ಅಂಚೆ ಲಕೋಟೆ ಸಂಗ್ರಹಿಸಿರುವ ಹೆಗ್ಗಳಿಕೆ ಎಚ್.ಕೆ. ಸತೀಶ್ ಅವರದ್ದು. ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದವರಾದ ಸತೀಶ್‌, ಸದ್ಯ ಚನ್ನರಾಯಪಟ್ಟಣದ ನಿವಾಸಿ. ಹಾಸನದ ಕೋರ್ಟ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂಚೆ ಚೀಟಿ, ಲಕೋಟೆಗಳ ಸಂಗ್ರಹ ಅಷ್ಟು ಸುಲಭದ ಕೆಲಸವಲ್ಲ. 20 ವರ್ಷಗಳಿಂದ ಮುಂಬೈ, ಚೆನ್ನೈ, ಕೇರಳ, ಕೊಲ್ಕತ್ತಾ ಸೇರಿ ದೇಶದ ಅನೇಕ ಭಾಗಗಳಲ್ಲಿ ಸಂಚರಿಸಿ ನಾಣ್ಯಗಳು, ಅಂಚೆ ಚೀಟಿಗಳು, ಲಕೋಟೆಗಳು ಮತ್ತು ಸ್ವಾತಂತ್ರ್ಯ ಪೂರ್ವದ ಪುಸ್ತಕಗಳನ್ನು ಸಂಗ್ರಹಿಸಿ ಮಾದರಿಯಾಗಿದ್ದಾರೆ.

ಇವುಗಳ ಸಂಗ್ರಹಕ್ಕೆ ತಮ್ಮ ವೇತನದಲ್ಲಿ ಇಂತಿಷ್ಟು ಹಣ ಮೀಸಲಿಟಿದ್ದಾರೆ. ಹಲವಾರು ಶಾಲಾ-ಕಾಲೇಜು, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವ ಸೇರಿ ಇದುವರೆಗೆ 60 ಕಡೆ ಪ್ರದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಮಹಾತ್ಮ ಗಾಂಧೀಜಿ, ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಚಂದ್ರಶೇಖರ ಅಜಾದ್, ಭಗತ್‍ಸಿಂಗ್, ರಾಜಗುರು, ಸುಖದೇವ್, ಕಸ್ತೂರಬಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ ಸೇರಿ 500ಕ್ಕೂ ಸ್ವಾತಂತ್ರ್ಯ ಹೋರಾಟಗಾರ ವಿಶೇಷವಾದ ಅಂಚೆ ಲಕೋಟೆ ಸಂಗ್ರಹಿಸಿದ ಮೊದಲ ಭಾರತೀಯ ಎಂಬ ಹಿರಿಮೆ ಇವರದ್ದು. ಇವರ ಸಾಧನೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಯಾಗಿದೆ.

ಲಂಡನ್‍ನಲ್ಲಿ ಮುದ್ರಣವಾದ ಗಾಂಧೀಜಿಯವರ ಪೋಸ್ಟ್‌ಕಾರ್ಡ್, ಕರ್ನಾಟಕದ ನೆಲ, ಜಲ, ಭಾಷೆ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸಾವಿರ ಅಂಚೆ ಲಕೋಟೆಗಳು, 200 ವಿಶೇಷ ಅಂಚೆ ಲಕೋಟೆಗಳು ಇವರ ಸಂಗ್ರಹದಲ್ಲಿವೆ.

ಸತೀಶ್ ಸಾಧನೆಯನ್ನು ಗುರುತಿಸಿ ಉತ್ತರ ಕರ್ನಾಟಕ ಮಖಾಂದರ್ ಪ್ರತಿಷ್ಠಾನದಿಂದ ನಿರಂತರ ಪುರಸ್ಕಾರ, ಹಾಸನದಲ್ಲಿ ಕನ್ನಡ ರಾಜ್ಯೋತ್ಸವ, ಮುಳಬಾಗಿಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಅಂಚೆ ಚೀಟಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸೇರಿ ಹಲವಾರು ಸಂಘ, ಸಂಸ್ಥೆಗಳು ಗೌರವಿಸಿವೆ.

ಚನ್ನರಾಯಪಟ್ಟಣದಲ್ಲಿ ಅಂಚೆ ಚೀಟಿ ಮತ್ತು ಲಕೋಟೆಗಳ ಪ್ರದರ್ಶನ ಏರ್ಪಡಿಸಿದ್ದ ಎಚ್.ಕೆ. ಸತೀಶ್ ಮಾಹಿತಿ ನೀಡಿದರು
ಚನ್ನರಾಯಪಟ್ಟಣದಲ್ಲಿ ಅಂಚೆ ಚೀಟಿ ಮತ್ತು ಲಕೋಟೆಗಳ ಪ್ರದರ್ಶನ ಏರ್ಪಡಿಸಿದ್ದ ಎಚ್.ಕೆ. ಸತೀಶ್ ಮಾಹಿತಿ ನೀಡಿದರು
ದೇಶದ ಇತಿಹಾಸ ಪರಂಪರೆ ಬಿಂಬಿಸುವ ಅಂಚೆ ಚೀಟಿಗಳು ಲಕೋಟೆಗಳು ನಾಣ್ಯ ಸಂಗ್ರಹಿಸಿದ್ದು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗುತ್ತಿದೆ.
-ಸತೀಶ್ ಅಂಚೇ ಚೀಟಿ ಸಂಗ್ರಾಹಕ
ಅಪರೂಪದ ನಾಣ್ಯ ಸಂಗ್ರಹ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರುವ ₹ 1 ಮುಖ ಬೆಲೆಯ 10ಸಾವಿರ ನಾಣ್ಯಗಳು ಗಾಂಧೀಜಿಯವರ ನಾಣ್ಯಗಳು ಸುಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಒಂದು ಸಾವಿರ ನಾಣ್ಯಗಳನ್ನು ಸತೀಶ್‌ ಸಂಗ್ರಹಿಸಿದ್ದಾರೆ. ಇಂದಿರಾಗಾಂಧಿ ಚಿತ್ರ ಇರುವ ₹ 5 ಮುಖಬೆಲೆಯ 50 ನಾಣ್ಯಗಳು ಜವಾಹರ್‌ಲಾಲ್ ನೆಹರೂ ಅವರ ಭಾವಚಿತ್ರದ 50 ಹಳೆಯ ನಾಣ್ಯಗಳು ಸ್ವಾತಂತ್ರ್ಯ ನಂತರದ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸಿದ ಸಾಧನೆ ಇವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT