ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾರ್ಡ್ | 1.20 ಲಕ್ಷ ವಿತರಣೆ: 2040 ನಕಲಿ ಕಾರ್ಡ್ ಪತ್ತೆ

ಸಂತೋಷ್‌ ಸಿ.ಬಿ.
Published 15 ಫೆಬ್ರುವರಿ 2024, 6:12 IST
Last Updated 15 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಹಾಸನ: ಕಟ್ಟಡ ಕಾರ್ಮಿಕರಿಗೆ ದೊರೆಯುತ್ತಿರುವ ಕೆಲವು ಸೌಲಭ್ಯಗಳ ಆಸೆಗೆ ಕಾರ್ಮಿಕರಲ್ಲದವರು ಲೇಬರ್ ಕಾರ್ಡ್ ಪಡೆದಿದ್ದು, ಅಂತಹ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಕಾರ್ಮಿಕ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಕಾರ್ಡ್ ಪತ್ತೆ ಅಭಿಯಾನ ನಡೆಸಿರುವ ಇಲಾಖೆ, 2,040 ಬೋಗಸ್‌ ಕಾರ್ಡ್‌ಗಳನ್ನು ಪತ್ತೆ ಮಾಡಿದೆ.

ಕಾರ್ಮಿಕ ಕಾರ್ಡ್‌ ಪಡೆದ ಫಲಾನುಭವಿಗಳಿಗೆ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೋವಿಡ್–19 ಸಂದರ್ಭದಲ್ಲಿ ಕೆಲ ಕಾರ್ಮಿಕರಿಗೆ ಕಾರ್ಡ್ ಸೌಲಭ್ಯ ನೆರವಾಗಿದ್ದವು. ಸೌಲಭ್ಯಗಳು ದೊರೆಯುವ ಹಿನ್ನೆಲೆಯಲ್ಲಿ ಕಾರ್ಮಿಕರ ಕಾರ್ಡ್‌ ಪಡೆಯಲು ಸಾಕಷ್ಟು ಬೇಡಿಕೆಗಳು ಬಂದಿದೆ.

 ಕಾರ್ಡ್ ಪಡೆದವರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೌಲಭ್ಯ, ವೈದ್ಯಕೀಯ ಖರ್ಚು ವೆಚ್ಚದ ಸಹಾಯಧನ, ಕಾಲಕಾಲಕ್ಕೆ ಅಗತ್ಯ ಇರುವ ಕಿಟ್‌ಗಳ ವಿತರಣೆ, ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್, ಸ್ಕೂಲ್ ಕಿಟ್, ಸ್ಕಾಲರ್‌ಶಿಪ್‌, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅರ್ಹತೆ ಮೇರೆಗೆ ವಿವಿಧ ಸೌಲಭ್ಯಗಳು, ವಿವಾಹಕ್ಕೆ ಸಹಾಯಧನ ದೊರೆಯುತ್ತಿದೆ.

ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇವರಲ್ಲಿ ಕಟ್ಟಡಕ್ಕೆ ಪೇಂಟ್‌ ಮಾಡುವವರು, ಎಲೆಕ್ಟ್ರಿಕ್ ವೈರ್ ಅಳವಡಿಸುವವರು, ಗಾರೆ ಕೆಲಸದವರು, ಬಾರ್ ಬೆಂಡಿಂಗ್ ಮಾಡುವವರು, ಟೈಲ್ಸ್ ಹಾಕುವವರು ಸೇರಿದಂತೆ ಕಟ್ಟಡ ನಿರ್ಮಾಣ ಸಂಬಂಧ ಕಾರ್ಯನಿರ್ವಹಿಸುವ ಎಲ್ಲರೂ ಕಟ್ಟಡ ಕಾರ್ಮಿಕರ ಪಟ್ಟಿಗೆ ಸೇರುತ್ತಾರೆ.

‘ಸುಳ್ಳು ದಾಖಲೆಗಳನ್ನು ನೀಡಿ, ಕಾರ್ಡ್‌ ಪಡೆದಿದ್ದ ಅನರ್ಹರನ್ನು ಪತ್ತೆ ಕಾರ್ಮಿಕ ಇಲಾಖೆ ಪತ್ತೆ ಮಾಡಿದೆ. ಈಗಾಗಲೇ 2,040 ಕಾರ್ಡ್‌ಗಳನ್ನು ಇಲಾಖೆಯ ತಂತ್ರಾಂಶದಲ್ಲಿ ಫ್ರೀಜ್‌ ಮಾಡಲಾಗಿದ್ದು, ಮತ್ತೆ ಪತ್ತೆಯಾಗುವ ಕಾರ್ಡ್‌ಗಳನ್ನು ಸಹ ಹಂತ ಹಂತವಾಗಿ ಫ್ರೀಜ್‌ ಮಾಡಲಾಗುವುದು. ರಾಜ್ಯದಾದ್ಯಂತ ಇಲಾಖೆಯಿಂದ ಇಂತಹ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಅಭಿಯಾನ ನಡೆದಿದ್ದು, ಲಕ್ಷಾಂತರ ಮಂದಿ ಕಾರ್ಡ್‌ಗಳನ್ನು ದುರುಪಯೋಗ ಮಾಡಿಕೊಂಡಿರುವುದು ಪತ್ತೆ ಮಾಡಲಾಗಿದೆ’ ಎಂದು ಕಾರ್ಮಿಕ ಅಧಿಕಾರಿ ಯಮುನಾ ಹೇಳಿದರು.

ಕಟ್ಟಡ ಕಾರ್ಮಿಕ ಅಲ್ಲದವರೂ ಕಾರ್ಮಿಕರ ಕಾರ್ಡ್‌ ಮಾಡಿಸಿಕೊಂಡಿರುವ ಉದಾಹರಣೆಗಳು ಪತ್ತೆಯಾಗುತ್ತಿವೆ. ಈ ಅಕ್ರಮವನ್ನು ಪತ್ತೆ ಹಚ್ಚಲು ಸಾಕಷ್ಟು ಕೆಲಸವನ್ನು ಇಲಾಖೆಯ ಅಧಿಕಾರಿಗಳು ಮಾಡಬೇಕಿದ್ದು, ನಿರ್ದಿಷ್ಟ ತಪಾಸಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೀಗೆ ತಪಾಸಣೆ ಮಾಡಿದಾಗ 2,040ಕ್ಕೂ ಹೆಚ್ಚು ಕಾರ್ಡುಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್ ನೋಂದಣಿ ಮಾಡುವ ಸಂದರ್ಭದಲ್ಲಿಯೇ ಇಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾರ್ಡ್ ವಿತರಣೆ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಮಿನಲ್ ಕೇಸ್‌: ಬೋಗಸ್ ಕಾರ್ಡ್ ಪಡೆದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ. ಬೋಗಸ್ ಕಾರ್ಡ್ ಪಡೆದ ಬಗ್ಗೆ ಮಾಹಿತಿ ಲಭ್ಯವಾದ ನಂತರ ಅಂಥವರಿಗೆ ಕಾರಣ ಕೇಳಿ, ಸೂಚನಾ ಪತ್ರವನ್ನು ಇಲಾಖೆಯಿಂದ ಹೊರಡಿಸಲಾಗುತ್ತದೆ. ನೋಟೀಸ್ ನೀಡಿದ ನಂತರ ಬಹುತೇಕರು ಖುದ್ದಾಗಿ ಇಲಾಖೆ ಕಚೇರಿಗೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಂಥವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿ ಯಮುನಾ ತಿಳಿಸಿದರು.

ತಪ್ಪು ಮಾಹಿತಿ ಹಾಗೂ ಇತರರ ಹೆಸರಲ್ಲಿ ಕಾರ್ಡ್‌ ಪಡೆಯುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT