ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಣಕು ಕಾರ್ಯಾಚರಣೆ: ಸಿಟ್ಟಾದ ಜಿಲ್ಲಾಧಿಕಾರಿ

Published 18 ಮೇ 2024, 17:08 IST
Last Updated 18 ಮೇ 2024, 17:08 IST
ಅಕ್ಷರ ಗಾತ್ರ

ಸಕಲೇಶಪುರ (ಹಾಸನ): ನೈಋತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಕವಾಯತು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರ ಆಕ್ರೋಶಕ್ಕೆ ಕಾರಣವಾಯಿತು.

‘ರೈಲು ನಿಲ್ದಾಣದಲ್ಲಿ ಅಪಘಾತವಾಗಿ ಪ್ರಯಾಣಿಕರ ಸಾವು– ನೋವುಗಳು ಉಂಟಾಗಿವೆ’ ಎಂಬ ಮಾಹಿತಿ ತಲುಪಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಉಪ ವಿಭಾಗಾಧಿಕಾರಿ ಡಾ. ಎಂ.ಕೆ. ಶ್ರುತಿ ಹಾಗೂ ತಹಶೀಲ್ದಾರ್ ಜಿ. ಮೇಘನಾ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಇಬ್ಬರೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಪ್ರಯಾಣಿಕರ ರೈಲಿನ ಸ್ಲೀಪರ್ ಕೋಚ್ ಉರುಳಿ ಬಿದ್ದಿತ್ತು. ಎನ್‌ಡಿಆರ್‌ಎಫ್‌ ತಂಡ ತುರ್ತು ಕಾರ್ಯನಿರ್ವಹಣೆ ಮಾಡುತ್ತಿದ್ದದನ್ನು ನೋಡಿ ಅವರು ಮತ್ತಷ್ಟು ಗಾಬರಿಗೊಂಡರು.

‘ಅದು ಅಣಕು ಕವಾಯತು’ ಎಂದು ಅವರಿಗೆ ಆಗಷ್ಟೇ ತಿಳಿಯಿತು. ಆ ಮಾಹಿತಿಯನ್ನು ನೀಡುವುದರೊಳಗೇ ಜಿಲ್ಲಾಧಿಕಾರಿಯೂ ನಿಲ್ದಾಣಕ್ಕೆ ಬಂದಿಳಿದರು. ಅಣಕು ಕಾರ್ಯಾಚರಣೆಯ ವಿಷಯ ತಿಳಿಯುತ್ತಿದ್ದಂತೆಯೇ ಸಿಟ್ಟಾದರು.

‘ಜಿಲ್ಲಾಧಿಕಾರಿಯಾಗಿ ಸಾಕಷ್ಟು ಕೆಲಸಗಳಿರುತ್ತವೆ. ಮೊನ್ನೆ ಆಲೂರಿನ ಕೆರೆಯಲ್ಲಿ ನಾಲ್ಕು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಈಗ ದೊಡ್ಡ ಪ್ರಮಾಣದಲ್ಲಿ ರೈಲು ಅಪಘಾತವಾಗಿದೆ ಎಂದು ಎಲ್ಲಾ ಕೆಲಸ ಬಿಟ್ಟು ತರಾತುರಿಯಲ್ಲಿ ಬರುವಂತೆ ಮಾಡಿದ್ದೀರಿ’ ಎಂದು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT