ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಬಜೆಟ್‌ ಮೇಲೆ ಅಂತಹ ನಿರೀಕ್ಷೆ ಇಲ್ಲ: ಪ್ರಜ್ವಲ್ ರೇವಣ್ಣ

Published 15 ಫೆಬ್ರುವರಿ 2024, 13:56 IST
Last Updated 15 ಫೆಬ್ರುವರಿ 2024, 13:56 IST
ಅಕ್ಷರ ಗಾತ್ರ

ಹಾಸನ: ರಾಜ್ಯದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಅಂತಹ ನಿರೀಕ್ಷೆ ಇಲ್ಲ. ಅಲ್ಪ ನಿರೀಕ್ಷೆ ಇದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

ಗುರುವಾರ ದಿಶಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಮತ್ತು ರಾಜ್ಯದ ಆರ್ಥಿಕ ಸ್ಥಿತಿ ಎದ್ದು ಕಾಣುತ್ತಿದೆ. ಇದನ್ನು ಗಮನಿಸಿದರೆ, ಎಷ್ಟರ ಮಟ್ಟಿಗೆ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಜೆಟ್ ಮಂಡಿಸಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ ಎಂದರು.

ಬಜೆಟ್ ಬಗ್ಗೆ ಮುಂಚಿತವಾಗಿಯೇ ಮಾತನಾಡಿದರೆ ತಪ್ಪಾಗುತ್ತದೆ. ಬಜೆಟ್ ಮಂಡನೆ ಆದ ಮೇಲೆ ಯಾವ್ಯಾವ ವರ್ಗಗಳಿಗೆ ಎಷ್ಟೆಷ್ಟು ಅನುದಾನ ಕೊಟ್ಟಿದ್ದಾರೆ? ಯಾವ್ಯಾವ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂಬುದು ತಿಳಿಯಲಿದೆ ಎಂದರು.

ನನ್ನ ಪ್ರಕಾರ ಇರುವ ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಕೊಡಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಸ ಯೋಜನೆಗಳು ರೈತರ ಪರವಾಗಿ ಬರಲಿವೆಯೇ ಎಂಬ ಚಿಂತೆ ಕಾಡುತ್ತಿದೆ. ಎಲ್ಲ ವರ್ಗದವರ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕು. ಅದರಲ್ಲೂ ರೈತಾಪಿ ವರ್ಗದ ಮಂದಿ ಬಹಳಷ್ಟು ತೊಂದರೆಯಲ್ಲಿದ್ದಾರೆ. ರೈತಾಪಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ನಾಳೆ ಏನಾಗುತ್ತೋ ಗೊತ್ತಿಲ್ಲ. ಎಲ್ಲರೂ ಬಜೆಟ್‌ಗಾಗಿ ಕಾಯುತ್ತಿದ್ದಾರೆ. ನಮ್ಮ ಜಿಲ್ಲೆಗೆ ಇಂದಿನವರೆಗೂ ಒಂದೇ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಜ್ವಲ್, ಹಲವಾರು ಯೋಜನೆಗಳು ನಿಂತು ಹೋಗಿವೆ. ಎಸ್‌ಇಪಿ, ಟಿಎಸ್ಪಿಯಲ್ಲಿ ಒಂದಿಷ್ಟು ಚರಂಡಿ ರಸ್ತೆಗಳು ಮಾಡಲಾಗುತ್ತಿತ್ತು. ಇಂದು ಒಂದೇ ಒಂದು ಕಡೆ ಕೆಲಸವೂ ನಡೆಯುತ್ತಿಲ್ಲ ಎಂದು ದೂರಿದರು.

ಸರ್ಕಾರ ಅಭಿವೃದ್ಧಿ ಪರ ನಿಲ್ಲಬೇಕು. ಅನುದಾನ ಬಿಡುಗಡೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆ ಅಡಿ 15ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅವುಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದನ್ನು ಪ್ರಶ್ನಿಸಿದರೆ ಬಜೆಟ್ ಇಲ್ಲ ಎಂದು ಉತ್ತರ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲದಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಅಭಯ ನೀಡಬೇಕು. ಈ ಎಲ್ಲ ವಿಚಾರಗಳನ್ನು ಗಮನ ಹರಿಸಬೇಕು. ಬಜೆಟ್ ಮೂಲಕ ಅನುದಾನ ಕೊಟ್ಟು ರೈತರನ್ನು ಉಳಿಸಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಹೊರಗುತ್ತಿಗೆ ನೌಕರರಿಗೆ ಇನ್ನೂ ಸಂಬಳ ಬಿಡುಗಡೆ ಮಾಡಿಲ್ಲ. ಅಂತಹ ನೌಕರರಿಗೆ ಹಣ ಬಿಡುಗಡೆ ಮಾಡಬೇಕು. ಇದೇ ಸಂಬಳವನ್ನು ನಂಬಿ, ಅವರ ಕುಟುಂಬ ಜೀವನ ನಿರ್ವಹಣೆ ಇರುತ್ತದೆ. ಆದ್ದರಿಂದ ಸಂಬಳವನ್ನು ಶೀಘ್ರವೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT