ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನಲ್ಲಿ ಯುರೇನಿಯಂ

ದೇಶದ 16 ರಾಜ್ಯಗಳ ಕೊಳವೆ ಬಾವಿಗಳ ನೀರು ಮಲಿನ
Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ 16 ರಾಜ್ಯಗಳ ಅಂತರ್ಜಲ ದಲ್ಲಿ ಸುರಕ್ಷಿತ ಮಟ್ಟಕ್ಕಿಂತಲೂ ಹೆಚ್ಚು ಯುರೇನಿಯಂ ಇದೆ. ಅದೇ ನೀರನ್ನು ಕೋಟ್ಯಂತರ ಜನ ಕುಡಿಯಲು ಮತ್ತು ಕೃಷಿಗೆ ಬಳಸುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದೆ. ‘ಎನ್ವಿರಾನ್‌ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಲೆಟರ್ಸ್’ ನಿಯತಕಾಲಿಕದಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ.

‘ಭಾರತದಲ್ಲಿ ಒಂದು ಲೀಟರ್‌ ನೀರಿನಲ್ಲಿ 30 ಮೈಕ್ರೊಗ್ರಾಂಗಳಿಗಿಂತ ಕಡಿಮೆ ಯುರೇನಿಯಂ ಇದ್ದರೆ ಮಾತ್ರ ಅದು ಕುಡಿಯಲು–ಕೃಷಿಗೆ ಯೋಗ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಭಾರತದ ಕೆಲವು ಕೊಳವೆ ಬಾವಿಗಳಿಂದ ಸಂಗ್ರಹಿಸಿದ ಒಂದು ಲೀಟರ್‌ ನೀರಿನಲ್ಲಿ 2,074 ಮೈಕ್ರೊಗ್ರಾಂನಷ್ಟು ಯುರೇನಿಯಂ ಪತ್ತೆಯಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಆಂಧ್ರಪ್ರದೇಶದ ಗುಂಟೂರಿನ ಒಂದು ಬಾವಿಯ ಒಂದು ಲೀಟರ್ ನೀರಿನಲ್ಲಿ 2,074 ಮೈಕ್ರೊಗ್ರಾಂ ಮತ್ತು ಬೆಂಗಳೂರಿನ ಒಂದು ಬಾವಿಯಲ್ಲಿ 2,027 ಮೈಕ್ರೊಗ್ರಾಂ ಯುರೇನಿಯಂ ಪತ್ತೆಯಾಗಿದೆ. ಆದರೆ ರಾಜಸ್ಥಾನದಲ್ಲಿ ಪರಿಶೀಲನೆಗೆ ಒಳಪಡಿಸಿದ ಪ್ರತಿ ಮೂರು ಕೊಳವೆ ಬಾವಿಗಳಲ್ಲಿ ಒಂದು ಕೊಳವೆ ಬಾವಿಯ ನೀರಿನಲ್ಲಿ ಯುರೇನಿಯಂ ಅಪಾಯದ ಮಟ್ಟದಷ್ಟು ಇದೆ. ಕುಡಿಯುವ ನೀರಿನ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌) ಹಲವು ಅಧ್ಯಯನಗಳನ್ನು ನಡೆಸಿದೆ. ಆದರೆ ಕುಡಿಯುವ ನೀರಿನಲ್ಲಿರಬಹುದಾದ ಯುರೇನಿಯಂ ಬಗ್ಗೆ ಒಂದೂ ಅಧ್ಯಯನ ನಡೆದಿಲ್ಲ’ ಎಂದು ವರದಿ ಹೇಳಿದೆ.

ಭಾರತದ ನೆಲದ ಜಲಪದರದಲ್ಲಿ ಯುರೇನಿಯಂ ಭಾರಿ ಪ್ರಮಾಣದಲ್ಲಿ ಇದೆ. ಜಲಪದರದಲ್ಲಿನ ನೀರನ್ನು ವಿಪರೀತ ಮಟ್ಟದಲ್ಲಿ ಬಳಸಿ, ಖಾಲಿ ಮಾಡಲಾಗಿದೆ. ಅಳಿದುಳಿದ ಅಂತರ್ಜಲವು ಯುರೇನಿಯಂಯುಕ್ತ ಮಣ್ಣು ಮತ್ತು ಬಂಡೆಗಳ ಮೇಲೆ ಹರಿದುಬರುವುದರಿಂದ ಯುರೇನಿಯಂ ಅದಕ್ಕೆ ಸೇರುತ್ತಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಅಂತರ್ಜಲ ಬಳಕೆ ನಿಯಂತ್ರಿಸಿ: ಯುರೇನಿಯಂಯುಕ್ತ ನೀರನ್ನು ಕುಡಿದರೆ ಮೂತ್ರಪಿಂಡ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಭಾರತದಲ್ಲಿ ಅಂತಹ ನೀರನ್ನು ಕೋಟ್ಯಂತರ ಮಂದಿ ಕುಡಿಯುತ್ತಿದ್ದಾರೆ. ಜತೆಗೆ ಲಕ್ಷಾಂತರ ಎಕರೆಯಷ್ಟು ಕೃಷಿ ಭೂಮಿಯಲ್ಲಿ ಬಳಸಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುವುದು ಖಚಿತ. ಆದರೆ, ಆ ಪರಿಣಾಮಗಳೇನು ಎಂಬುದರ ಬಗ್ಗೆ ಇನ್ನಷ್ಟೇ ಅಧ್ಯಯನಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆದರೆ ಭಾರತವು ತಕ್ಷಣವೇ ಕ್ರಮ ತೆಗೆದುಕೊಂಡರೆ ಪರಿಸ್ಥಿತಿಯನ್ನು ಸುಧಾರಿಸಬಹುದು. ಅಂತರ್ಜಲದ ಬಳಕೆಗೆ ಮಿತಿ ಹೇರಬೇಕು. ಈ ಸಂಬಂಧ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ.

ಬೆಂಗಳೂರು, ಕೋಲಾರದಲ್ಲಿ ಹೆಚ್ಚು

ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ ಮತ್ತು ಚಾಮರಾಜನಗರದ ಹಲವು ಕೊಳವೆ ಬಾವಿಗಳ ನೀರನ್ನು ಪರೀಶಿಲಿಸಲಾಗಿದೆ. ಬೆಂಗಳೂರಿನ ಕೆಲವು, ಕೋಲಾರದ ಹಲವು ಬಾವಿಗಳ ನೀರಿನಲ್ಲಿ ಭಾರಿ ಪ್ರಮಾಣದ ಯುರೇನಿಯಂ ಅಂಶ ಪತ್ತೆಯಾಗಿದೆ. ಈ ಪ್ರದೇಶದಲ್ಲಿರುವ ಗ್ರಾನೈಟ್‌ ಶಿಲೆಯಲ್ಲಿ ಯುರೇನಿಯಂ ಇದೆ. ಅಂತರ್ಜಲವನ್ನು ಅತಿಯಾಗಿ ಬಳಸಿರುವುದರಿಂದ ನೀರು ಕಲುಷಿತಗೊಂಡಿದೆ. ಆದರೆ ಅದೇ ಸ್ವರೂಪದ ಶಿಲೆಗಳಿದ್ದರೂ, ಅಂತರ್ಜಲದ ಬಳಕೆ ಕಡಿಮೆ ಇರುವ ಕಾರಣ ಚಾಮರಾಜನಗರದ ಬಾವಿಗಳು ಸುರಕ್ಷಿತವಾಗಿವೆ.

‘ಭಾರತದಲ್ಲಿ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಿ, ಪರಿಣಾಮಕಾರಿಯಾಗಿ ಅನುಷ್ಠಾನ ತಂದರೆ ಸಮಸ್ಯೆ ಬಗೆಹರಿಯುತ್ತದೆ.

– ಅವ್ನೆರ್ ವೆಂಗೋಶ್, ಸಂಶೋಧನಾ ತಂಡದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT