ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಮೇಲ್ಸೇತುವೆ ಸಂಚಾರಕ್ಕೆ ಆಗ್ರಹಿಸಿ 6 ರಂದು ಪ್ರತಿಭಟನೆ

Published 3 ಫೆಬ್ರುವರಿ 2024, 14:15 IST
Last Updated 3 ಫೆಬ್ರುವರಿ 2024, 14:15 IST
ಅಕ್ಷರ ಗಾತ್ರ

ಹಾಸನ: ನೂತನ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯ ಮೇಲಿನ ಸಂಚಾರಕ್ಕೆ ಕೂಡಲೇ ಅವಕಾಶ ನೀಡುವಂತೆ ಆಗ್ರಹಿಸಿ ಫೆ. 6 ರಂದು ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಎಪಿ ಮುಖಂಡ ಅಗಿಲೆ ಯೋಗೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕುಂಟುತ್ತ ಸಾಗಿರುವ ರೈಲ್ವೆ ಮೇಲ್ಸೇತುವೆ ಒಂದು ಬದಿಯ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆ. ಹೀಗಿರುವಾಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ದೂರಿದರು.

ಕೆಲವು ದಿನಗಳು ಮಾತ್ರ ಸಂಚಾರಕ್ಕೆ ಅವಕಾಶ ನೀಡಿ, ಇದೀಗ ಬಂದ್ ಮಾಡಲಾಗಿದೆ. ಇದರಿಂದ ನೂತನ ಬಸ್ ನಿಲ್ದಾಣ, ಚನ್ನಪಟ್ಟಣ ಬಡಾವಣೆ, ಕೋರ್ಟ್‌ಗಳಿವೆ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಆಗಿದೆ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಶಾಸಕ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಮುತುವರ್ಜಿ ವಹಿಸಿದ್ದರೆ ಕಾಮಗಾರಿಯನ್ನು ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಬಹುದಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಕಾಮಗಾರಿ ಮುಕ್ತಾಯ ಆಗಿಲ್ಲ ಎಂದು ಹೇಳಿದರು.

ಕಳೆದ ಬಾರಿ ಶಾಸಕರಾಗಿದ್ದ ಪ್ರೀತಂ ಗೌಡ ಅವರೂ, ಮೇಲ್ಸೇತುವೆ ಕಾಮಗಾರಿ ಮುಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಇಂದು ಶಾಸಕರಾಗಿರುವ ಸ್ವರೂಪ್ ಪ್ರಕಾಶ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬಿಗಿಯಾದ ನಿಲುವು ಹೊಂದದೇ ಇರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ಎಎಪಿ ಪಕ್ಷದಿಂದ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಹಾಗೂ ಲಿಂಗಾಯತ ಸಮುದಾಯದಿಂದ ಅಭ್ಯರ್ಥಿಗಳು ಸ್ಪರ್ಧಿಸುವ ಸಂಬಂಧ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದ್ದು, ಹಾಸನ ಕ್ಷೇತ್ರದಿಂದಲೂ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದರು.

ನಜೀರ್ ಅಹ್ಮದ್, ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT