ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಾಥಪುರ: ಸುಬ್ರಮಣ್ಯಸ್ವಾಮಿ ಅದ್ಧೂರಿ ಮಹಾರಥೋತ್ಸವ

ದಕ್ಷಿಣಕಾಶಿ ರಾಮನಾಥಪುರ ಷಷ್ಠಿತೇರು ಸಂಪನ್ನ: ಅಪಾರ ಸಂಖ್ಯೆಯ ಭಕ್ತರು ಭಾಗಿ
Last Updated 2 ಡಿಸೆಂಬರ್ 2019, 12:00 IST
ಅಕ್ಷರ ಗಾತ್ರ

ಕೊಣನೂರು (ಹಾಸನ ಜಿಲ್ಲೆ): ದಕ್ಷಿಣಕಾಶಿ ಷಷ್ಠಿತೇರು ಎಂದೇ ಪ್ರಸಿದ್ಧಿಯಾಗಿರುವ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿಯವರ ಮಹಾರಥೋತ್ಸವವು ಸೋಮವಾರ ತುಂತುರು ಮಳೆಯಲ್ಲಿಯೂ ಸಂಭ್ರಮದಿಂದ ಜರುಗಿತು.

ರಥೋತ್ಸವಕ್ಕೂ ಮುನ್ನ ಸುಬ್ರಮಣ್ಯಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕಿ ಬಗೆ ಬಗೆಯ ಬಣ್ಣಗಳಿಂದ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ರಥಕ್ಕೆ ತಹಶೀಲ್ದಾರ್ ರೇಣುಕುಮಾರ್ ಮತ್ತು ಶಾಸಕ ಎ.ಟಿ.ರಾಮಸ್ವಾಮಿ ಪೂಜೆ ನೆರವೇರಿಸಿದ ನಂತರ ಕಾದು ನಿಂತಿದ್ದ ಭಕ್ತ ಸಮೂಹ ಸುಬ್ರಮಣ್ಯಸ್ವಾಮಿ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆದರು. ರಥಮಾರ್ಗದುದ್ದಕ್ಕೂ ನವದಂಪತಿಗಳು ರಥಕ್ಕೆ ಹಣ್ಣು, ಧವನ ಎಸೆದು ಭಕ್ತಿ ಸಮರ್ಪಿಸಿದರು.

ದೇಗುಲದಲ್ಲಿ ಚಂಡೆ ವಾದನ
ದೇಗುಲದಲ್ಲಿ ಚಂಡೆ ವಾದನ

ರಥದ ಮುಂದೆ ಸಾಗಿದ ಮಂಗಳವಾದ್ಯ, ಚಂಡೆ, ಬ್ಯಾಂಡ್ ವಾದ್ಯ ಮತ್ತು ಗಾರುಡಿಗೊಂಬೆ ಸೇರಿದಂತೆ ಜಾನಪದ ಹಲವು ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ರಥೋತ್ಸವದ ಅಂಗವಾಗಿ ರಾಮನಾಥಪುರದ ರಾಮೇಶ್ವರ, ರಾಘವೇಂದ್ರ, ಆಂಜನೇಯ, ಅಗಸ್ತ್ಯೇಶ್ವರ, ಬಸವೇಶ್ವರ, ಪಟ್ಟಾಭಿರಾಮ, ಲಕ್ಷ್ಮೀನರಸಿಂಹ, ಲಕ್ಷ್ಮಣೇಶ್ವರ, ಬಸವೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದು ಜಾತ್ರೆಗೆ ಬಂದ ಭಕ್ತರು ಎಲ್ಲ ದೇವಾಲಯಗಳಿಗೂ ತೆರಳಿ ದರ್ಶನ ಪಡೆದರು.

ಮುಂಜಾನೆ 3 ಗಂಟೆಯಿಂದಲೇ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಕಾವೇರಿ ನದಿಯಲ್ಲಿ ಮಿಂದು ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದರು.

ಕಾವೇರಿಯಲ್ಲಿ ಮಿಂದ ಭಕ್ತರು ಗಂಗಾಪೂಜೆ ಹಾಗೂ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲೆರೆದರು. ವಹ್ನಿ ಪುಷ್ಕರಿಣಿಯಲ್ಲಿನ ಮೀನುಗಳಿಗೆ ಪುರಿ, ಕಡಲೆಕಾಯಿ ಹಾಕಿ ಖುಷಿಪಟ್ಟರು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು

ಜಾತ್ರೆಯಲ್ಲಿನ ಸಾಲು ಅಂಗಡಿಗಳಲ್ಲಿ ಆಟಿಕೆ, ಸಿಹಿತಿಂಡಿ, ಪುರಿ ಮತ್ತಿತರ ವ್ಯಾಪಾರವು ಜೋರಾಗಿ ನಡೆಯಿತು. ಜಾತ್ರೆಯಲ್ಲಿ ಕುಡಿಯುವನೀರು, ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ಮುಂತಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಶಾಸಕ ಎಚ್.ಡಿ.ರೇವಣ್ಣ ದಂಪತಿ, ಪುತ್ರ ಸೂರಜ್, ಎ.ಮಂಜು, ಶಾಸಕ ಎ.ಟಿ.ರಾಮಸ್ವಾಮಿ ದೇವಾಲಯಕ್ಕೆ ತೆರಳಿ ಸುಬ್ರಮಣ್ಯಸ್ವಾಮಿಯ ದರ್ಶನ ಪಡೆದರು. ಗ್ರಾ.ಪಂ ಅಧ್ಯಕ್ಷ ಕಾಳೇಗೌಡ, ಆರ್.ಐ.ಸ್ವಾಮಿ, ಮಾಜಿ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ, ಪಿಡಿಒ ವಿಜಯಕುಮಾರ್ ಮತ್ತು ಸಾವಿರಾರು ಸಂಖ್ಯೆಯ ಭಕ್ತರಿದ್ದರು.

ನಾಗರಕಲ್ಲುಗಳಿಗೆ ಭಕ್ತರಿಂದ ಪೂಜೆ
ನಾಗರಕಲ್ಲುಗಳಿಗೆ ಭಕ್ತರಿಂದ ಪೂಜೆ

ಸಿಗದ ಗೋಗರ್ಭ ಶಿಲೆ ಪೂಜೆ: ಭಕ್ತರಲ್ಲಿ ಬೇಸರ

ಪ್ರತಿವರ್ಷ ರಥೋತ್ಸವಕ್ಕೆ ಬಂದ ನೂರಾರು ಭಕ್ತರು ಪಾಪ ಪರಿಹಾರದ ನಂಬಿಕೆಯಿಂದ ಗೋಗರ್ಭ ಶಿಲೆಯಡಿಯಲ್ಲಿ ನುಸುಳಿ ಪೂಜೆ ಸಲ್ಲಿಸುತ್ತಿದ್ದರಿಂದ ಗೋಗರ್ಭ ಶಿಲೆಯು ಸ್ನಾನಘಟ್ಟದ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಆದರೆ, ಈ ಬಾರಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಗೋಗರ್ಭ ಶಿಲೆಯ ಬಳಿ ಭಕ್ತರು ಹೋಗಲಾಗದ್ದರಿಂದ ಅನೇಕರಲ್ಲಿ ಬೇಸರ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT