ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ: HD ರೇವಣ್ಣ

Published 22 ಮೇ 2024, 14:14 IST
Last Updated 22 ಮೇ 2024, 14:14 IST
ಅಕ್ಷರ ಗಾತ್ರ

ಹಾಸನ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ? ಅವರ ಮಂತ್ರಿಗಳೇ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

ವಿಧಾನ ಪರಿಷತ್‌ ಚುನಾವಣೆ ಸಂಬಂಧ ಬಿಜೆಪಿ–ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಜೊತೆಗಿನ ಸಭೆಯ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿ ಇದ್ದು ಆ ಕಡೆ ಹೋಗಿರುವ ಕೆಲವರು, ಸರ್ಕಾರ ಬಂದು ಒಂದು ವರ್ಷ ಆಗಿದೆ. ಏನು ಕೊಡುಗೆ ಕೊಡಿಸಿದ್ದಾರೆ? ನಾವು ಶಾಲಾ- ಕಾಲೇಜಿಗೆ ಮೂಲಸೌಕರ್ಯ ಕೊಟ್ಟು ತೋರಿಸಿದ್ದೇವೆ’ ಎಂದರು.

‘ಈ ಸರ್ಕಾರ ರಾಜ್ಯದಲ್ಲಿ ಯಾವುದಾದರೂ ರಸ್ತೆ ಗುಂಡಿ ಮುಚ್ಚಿದ್ದಾರೆಯೇ? ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದಾರಾ’ ಎಂದು ಪ್ರಶ್ನಿಸಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದಲ್ಲಿ. 1,500 ಹೈಸ್ಕೂಲು, 240 ಪ್ರಥಮ ದರ್ಜೆ ಕಾಲೇಜು ತೆರೆಯಲಾಗಿತ್ತು. ಖಾಲಿ ಇದ್ದ ನೂರಾರು ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಅವರ ಅವಧಿಯಲ್ಲಿಯೇ’ ಎಂದರು.

‘50ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಏನು ಮಾಡಲು ಆಗಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು, ಕುಮಾರಸ್ವಾಮಿ, ಹಾಗೂ ಜೆಡಿಎಸ್ ಶಾಸಕರು’ ಎಂದರು.

ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆಯನ್ನು ತೆರೆದಿಲ್ಲ ಎಂದು ಹೇಳಿದ ಅವರು, ‘ಶಿಕ್ಷಕರ ಮಕ್ಕಳಿಗೆ ಶೇ 10 ಮೀಸಲಾತಿ ಕೊಡಬೇಕು’ ಎಂದು ಆಗ್ರಹಿಸಿದರು.

‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈಗ 6ನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಮೊದಲನೇ ಸ್ಥಾನದಲ್ಲಿತ್ತು. ಈ ರೀತಿ ಆಗಲು ಕಾರಣ ಯಾರು? ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಅವರು ಮುನಿಸಿಕೊಂಡಿದ್ದಾರೆ ಇವರು ಮುನಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ನಮ್ಮಲ್ಲಿ ಯಾವುದೇ ಮುನಿಸಿಲ್ಲ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ.
ಎ.ಮಂಜು, ಶಾಸಕ

ಜನತೆಯ ತೀರ್ಪಿಗೆ ತಲೆಬಾಗುವೆ: ‘ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶವನ್ನು ಜನತೆಯ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆಬಾಗುತ್ತೇನೆ. ನಾವು ಅಧಿಕಾರಕ್ಕಾಗಿ ಹೋರಾಟ ಮಾಡಲ್ಲ. ಅಧಿಕಾರ ಇದ್ದರೂ ಕೆಲಸ ಮಾಡುತ್ತೇವೆ. ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯೆ ನೀಡಿದ ರೇವಣ್ಣ, ‘ಯಾರು ಆತಂಕ ಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ನಮ್ಮ ಜಿಲ್ಲೆಯ ಜನರು 60 ವರ್ಷ ದೇವೇಗೌಡರನ್ನು ಕಾಪಾಡಿದ್ದಾರೆ. ನಾನಿದ್ದೇನೆ, ಎ. ಮಂಜು, ಸ್ವರೂಪ್‌ ಪ್ರಕಾಶ್, ಜೆಡಿಎಸ್‌ ನಾಯಕರು ಇದ್ದಾರೆ’ ಎಂದರು.

ಶಾಸಕ ಸ್ವರೂಪ್ ಪ್ರಕಾಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ, ಜೆಡಿಎಸ್ ಮುಖಂಡರಾದ ಬಿ.ವಿ. ಕರೀಗೌಡ, ಕೆ.ಎಂ. ರಾಜೇಗೌಡ, ಜೆಡಿಎಸ್ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎಸ್. ದ್ಯಾವೇಗೌಡ, ಎಸ್. ಮಂಜೇಗೌಡ, ದೊಡ್ಡದಿಣ್ಣೆ ಸೋಮಶೇಖರ್ ಉಪಸ್ಥಿತರಿದ್ದರು‌.

‘ಯಾವುದೇ ಅಸಮಾಧಾನ ಇಲ್ಲ’

ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ–ಜೆಡಿಎಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಬಿಜೆಪಿ ಮುಖಂಡ ನಿರಂಜನ್‌ಮೂರ್ತಿ ಹೇಳಿದರು. ಬಿಜೆಪಿಯಲ್ಲಿ ನಾನೂ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದೇವು. ಶ್ರೀಕಂಠೇಗೌಡರು ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ. ಆದರೆ ಇದೀಗ ಎಲ್ಲರೂ ಒಟ್ಟಾಗಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರ ಗೆಲುವಿಗೆ ಶ್ರಮಿಸುತ್ತೇವೆ. ಆ ಮೂಲಕ ದೇವೇಗೌಡರಿಗೆ ಖುಷಿ ಕೊಡುವ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಅವರ ಕೈಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು.

ಶಿಕ್ಷಕರ ಸಮಸ್ಯೆಗಳು ಹಲವಾರು ಇವೆ. ಕುಮಾರಸ್ವಾಮಿ ಯಡಿಯೂರಪ್ಪ ಅವರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT