ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸರ್ಕಾರದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಳ: ಬಸವರಾಜ ಬೊಮ್ಮಾಯಿ

Published 19 ಏಪ್ರಿಲ್ 2024, 12:56 IST
Last Updated 19 ಏಪ್ರಿಲ್ 2024, 12:56 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ 43ರಷ್ಟು ಹೆಚ್ಚಳವಾಗಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯದಿಂದ ಕರ್ನಾಟಕ ಗೂಂಡಾ ರಾಜ್ಯವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದರೂ ರಾಜಕೀಯ ಪ್ರಭಾವ ಬಳಸಿ ಬಿಡುಗಡೆ ಮಾಡಿಸಲಾಗುತ್ತಿದೆ. ಪೊಲೀಸ್‌ ಠಾಣೆಗಳು ‘ಸೆಟ್ಲಮೆಂಟ್‌ ಕೇಂದ್ರ’ಗಳಾಗಿವೆ ಎಂದು ಹಾವೇರಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರೋಡ್ ಶೋ’ಗೂ ಮುನ್ನ ಮಾಧ್ಯಮದವರೊಂದಿಗೆ ಬೊಮ್ಮಾಯಿ ಮಾತನಾಡಿದರು.

ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ:

ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿಯೇ ಒಬ್ಬ ಯುವಕ ಯುವತಿಗೆ ಒಂಬತ್ತು ಬಾರಿ ಚಾಕುವಿನಿಂದ ಇರಿದು ಓಡಿ ಹೋಗುತ್ತಾನೆ ಎಂದರೆ ಅವನ ಹಿಂದೆ ಯಾವ ಶಕ್ತಿ ಇದೆ. ಗೃಹ ಸಚಿವರು ಅದೊಂದು ‘ಪ್ರೇಮ ಪಕ್ರರಣ’ ಎಂದು ಹಗುರ ಹೇಳಿಕೆ ಕೊಟ್ಟರೆ ಅಪರಾಧಿಗಳಿಗೆ ಪುಷ್ಟಿ ಬರದೇ ಇನ್ನೇನಾಗುತ್ತದೆ. ‘ಅವಳು ಪ್ರೀತಿ ನಿರಾಕರಣೆ ಮಾಡಿರೋದಕ್ಕೆ ಅವನು ಕೊಲೆ ಮಾಡಿದ್ದಾನೆ’ ಎಂದು ಹುಬ್ಬಳ್ಳಿ ಕಮಿಷನರ್ ಹೇಳಿದ್ದಾರೆ. ಇಷ್ಟೊಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಾವೇರಿಯಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಅದನ್ನು ಮುಚ್ಚಿ ಹಾಕುವ ಯತ್ನ ಮಾಡಿದರು. ನಂತರ ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ‘ಸಾಮೂಹಿಕ ಅತ್ಯಾಚಾರ ಪ್ರಕರಣ’ ದಾಖಲಿಸಿಕೊಂಡರು. ಬೆಳಗಾವಿಯಲ್ಲಿ ಸಿಎಂ, ಡಿಜಿಪಿ ಇದ್ದ ಸಂದರ್ಭದಲ್ಲೇ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆ ನಡೆಯಿತು. ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದರು.

‘ಹುಬ್ಬಳ್ಳಿ ಪ್ರಕರಣ: ಎಸ್‌ಐಟಿ ರಚನೆಯಾಗಲಿ’

ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿಯೂ ಕೊಲೆ ಪ್ರಕರಣಗಳು ನಡೆದಿದ್ದವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ‘ಮಾಸ್ ಮರ್ಡರ್’ಗಳು ಯಾಕೆ ನಡೆಯುತ್ತಿವೆ ಎನ್ನುವ ಬಗ್ಗೆ ಚಿಂತನೆ ಆಗಬೇಕು. ಹುಬ್ಬಳ್ಳಿ ಯುವತಿ ಕೊಲೆ ಪ್ರಕರಣವನ್ನು ಅಪರಾಧ ವಿಭಾಗದ ಡಿಜಿಪಿಗೆ ಉಸ್ತುವಾರಿ ವಹಿಸಬೇಕು. ವಿಶೇಷ ತನಿಖಾ ತಂಡ ರಚಿಸಬೇಕು. ಹುಬ್ಬಳ್ಳಿ ಘಟನೆಯಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಮೃತ ಯುವತಿಯ ತಂದೆಯೇ ಮಾಹಿತಿ ಕೊಟ್ಟಿದ್ದಾರೆ. ಪೋಲೀಸರು ಅವರನ್ನು ಬಂಧಿಸಿಲ್ಲ ಎಂದು ದೂರಿದರು.

‘ಶಿವಾನಂದರ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಲಿ’

‘ಶಿವಾನಂದ ಪಾಟೀಲರು ನನಗಿಂತ ಹಿರಿಯರು. ಅವರು ತಮ್ಮ ಜಿಲ್ಲೆಯ ಕಡೆ ಗಮನ ಹರಿಸಲಿ. ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರಿಗೆ ಟಿಕೆಟ್ ತಪ್ಪಿಸಿ ತಮ್ಮ ಮಗಳಿಗೆ ಟಿಕೆಟ್ ಕೊಡಿಸಿದ್ದಾರೆ. ಅವರ ತಟ್ಟೆಯಲ್ಲಿ ಏನು ಬಿದ್ದಿದೆ ಅಂತ ನೋಡಿಕೊಳ್ಳಲಿ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಬೊಮ್ಮಾಯಿ ಅವರಿಗೆ ವಯಸ್ಸಾಗಿದೆ. ಹಾವೇರಿ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕಿತ್ತು ಎಂದು ಸಚಿವ ಶಿವಾನಂದ ಪಾಟೀಲರು ಟೀಕೆಗೆ ಉತ್ತರಿಸಿದ ಬೊಮ್ಮಾಯಿ, ‘ವಯಸ್ಸು ಎಷ್ಟು ಅನ್ನುವುದು ಮುಖ್ಯವಲ್ಲ. 65ನೇ ವಯಸ್ಸಿನಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎನ್ನುವುದನ್ನು ನೋಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT