ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2 ಲಕ್ಷ ಕಾರ್ಮಿಕರ ನಕಲಿ ಕಾರ್ಡ್‌ ರದ್ದತಿಗೆ ಕ್ರಮ

ಹಾವೇರಿ ಜಿಲ್ಲೆಯಲ್ಲಿ 21,396 ಆಕ್ಷೇಪಣಾ ಅರ್ಜಿಗಳು ಸಲ್ಲಿಕೆ
ಸಿದ್ದು ಆರ್‌.ಜಿ.ಹಳ್ಳಿ
Published 8 ಫೆಬ್ರುವರಿ 2024, 19:47 IST
Last Updated 8 ಫೆಬ್ರುವರಿ 2024, 19:47 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದ 2.23 ಲಕ್ಷ ನಕಲಿ ಕಾರ್ಡ್‌ಗಳು ತನಿಖೆಯಲ್ಲಿ ಪತ್ತೆಯಾಗಿದ್ದವು. ಇವುಗಳಲ್ಲಿ ಬರೋಬ್ಬರಿ 2 ಲಕ್ಷ ಅನರ್ಹ ಕಾರ್ಡ್‌ಗಳ ರದ್ದತಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಚಿಂತನೆ ನಡೆಸಿದೆ.

ಜಿಲ್ಲೆಯಲ್ಲಿ ಒಟ್ಟು 2.94 ಲಕ್ಷ ಕಾರ್ಮಿಕರ ಕಾರ್ಡ್‌ಗಳಿದ್ದು, ಶೇ 83ರಷ್ಟು ಅನರ್ಹರು ಕಾರ್ಮಿಕರ ಕಾರ್ಡ್‌ ಪಡೆದು ಸೌಲಭ್ಯ ಪಡೆಯುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಶಿಕ್ಷಕರು, ಪೊಲೀಸರು, ಖಾಸಗಿ ಕಂಪನಿ ನೌಕರರು, ವಾಹನ ಚಾಲಕರು, ಟೈಲರ್‌ಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸಾವಿರಾರು ಮಂದಿ ಸುಳ್ಳು ದಾಖಲೆ ಸೃಷ್ಟಿಸಿ, ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ಪಡೆದಿದ್ದಾರೆ ಎಂಬುದು ಬಹಿರಂಗವಾಗಿತ್ತು.

ನೈಜ ಕಟ್ಟಡ ಕಾರ್ಮಿಕರಲ್ಲದ ವ್ಯಕ್ತಿಗಳ ನೋಂದಣಿಯನ್ನು ರದ್ದುಪಡಿಸುವ ಸಂಬಂಧ ಹಾವೇರಿ ಜಿಲ್ಲೆಯ ಕಾರ್ಮಿಕ ನಿರೀಕ್ಷಕರ ಕಚೇರಿಗಳ ಸೂಚನಾ ಫಲಕ ಮತ್ತು ವೆಬ್‌ಸೈಟಿನಲ್ಲಿ ಮಾಹಿತಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರುವರಿ 1ರಿಂದ 8ರವರೆಗೆ ಅವಕಾಶ ಕಲ್ಪಿಸಲಾಗಿತ್ತು.

21 ಸಾವಿರ ಆಕ್ಷೇಪಣೆ ಅರ್ಜಿ:

2.23 ಲಕ್ಷ ನಕಲಿ ಕಾರ್ಡ್‌ಗಳ ರದ್ದತಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬರೋಬ್ಬರಿ 21,396 ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ. ಕೊನೆಯ ದಿನವಾದ ಗುರುವಾರ ಕಾರ್ಮಿಕ ನಿರೀಕ್ಷಕರ ಕಚೇರಿಗಳ ಮುಂಭಾಗ ಅರ್ಜಿ ಸಲ್ಲಿಸಲು ಕಾರ್ಮಿಕರು ಮುಗಿಬಿದ್ದಿದ್ದರು. ಒಂದೇ ದಿನ 10,847 ಅರ್ಜಿಗಳು ಸಲ್ಲಿಕೆಯಾಗಿವೆ. 

‘ಆಕ್ಷೇಪಣಾ ಅರ್ಜಿಗಳ ಜತೆ ಉದ್ಯೋಗದಾತರ ಮಾಹಿತಿ ಮತ್ತು ಕಾಮಗಾರಿ ವಿಳಾಸದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ತಿಳಿಸಿದ್ದೆವು. 21,396 ಆಕ್ಷೇಪಣಾ ಅರ್ಜಿಗಳ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ, ಪರಿಶೀಲಿಸುತ್ತೇವೆ. ಅರ್ಹ ಮತ್ತು ಅನರ್ಹ ಕಾರ್ಡ್‌ಗಳನ್ನು ಪತ್ತೆ ಮಾಡಿ, ಷರಾ ಬರೆಯಬೇಕಿದೆ. ನಂತರ ಕಾರ್ಮಿಕ ಕಲ್ಯಾಣ ಮಂಡಳಿ ಸೂಚನೆ ಮೇರೆಗೆ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ತಿಳಿಸಿದ್ದಾರೆ.

ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೊಟ್ಟಿದ್ದೆವು. 21396 ಆಕ್ಷೇಪಣಾ ಅರ್ಜಿಗಳು ಬಂದಿದ್ದು ಪರಿಶೀಲಿಸುತ್ತೇವೆ. ಉಳಿದ ನಕಲಿ ಕಾರ್ಡ್‌ಗಳನ್ನು ಕೂಡಲೇ ರದ್ದು ಮಾಡುತ್ತೇವೆ

– ಡಿ. ಭಾರತಿ ಸಿಇಒ ಕಾರ್ಮಿಕ ಕಲ್ಯಾಣ ಮಂಡಳಿ

‘ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಿ’

‘ಕಾರ್ಮಿಕರ ನಕಲಿ ಕಾರ್ಡ್‌ಗಳನ್ನು ರದ್ದು ಮಾಡುವ ಜತೆಗೆ ನಕಲಿ ಕಾರ್ಡ್‌ಗಳಿಗೆ ಮಂಜೂರಾತಿ ನೀಡಿದ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಂ.ಎಂ.ಕಾಲೇಭಾಗ ಕೆ.ಎಲ್‌.ಮಕಾನ್‌ದಾರ್‌ ಒತ್ತಾಯಿಸಿದ್ದಾರೆ.  ‘ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಒಂದು ವಾರ ಮಾತ್ರ ಅವಕಾಶ ಕೊಟ್ಟಿದ್ದು ಸರಿಯಲ್ಲ. ಕೆಲ ಕಾರ್ಮಿಕರು ಅನಕ್ಷರಸ್ಥರಾದರೆ ಇನ್ನೂ ಕೆಲವರು ದುಡಿಮೆಗೆಂದು ವಲಸೆ ಹೋಗಿದ್ದಾರೆರೆ. ಹೀಗಾಗಿ ಕನಿಷ್ಠ ಒಂದು ತಿಂಗಳು ಕಾಲಾವಕಾಶ ಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT