ಅಶೋಕ ನೇತೃತ್ವದಲ್ಲಿ ಪ್ರತಿಭಟನೆ
ನಾಳೆ ಹಾವೇರಿ: ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜನವರಿ 20ರಂದು ಪ್ರತಿಭಟನೆ ನಡೆಯಲಿದೆ. ‘ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ಮತ್ತು ಸೂಕ್ತ ತನಿಖೆ ನಡೆಸುವಲ್ಲಿ ಪೋಲಿಸ್ ಇಲಾಖೆಯು ರಾಜ್ಯ ಸರ್ಕಾರದ ಮಧ್ಯವರ್ತಿಯಂತೆ ನಡೆದುಕೊಳ್ಳುವ ನೀತಿ ಖಂಡಿಸಿ ಮತ್ತು ಸಂತ್ರಸ್ತೆಗೆ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು. ‘ಬಿಜೆಪಿ ಜಿಲ್ಲಾ ಕಚೇರಿಯಿಂದ ಮಧ್ಯಾಹ್ನ 12ಕ್ಕೆ ಪಾದಯಾತ್ರೆ ಹೊರಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟಿಸುತ್ತೇವೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶಾಸಕ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸುವರು’ ಎಂದರು.