ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ: ಎಲ್ಲೆಲ್ಲೂ ಮೆಣಸಿನ ಘಾಟು

ಪ್ರಮೀಳಾ ಹುನಗುಂದ
Published 16 ಫೆಬ್ರುವರಿ 2024, 4:42 IST
Last Updated 16 ಫೆಬ್ರುವರಿ 2024, 4:42 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 83,568 ಕ್ವಿಂಟಲ್‌ (3,34,272 ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಹೆಚ್ಚಳ ಕಂಡು ಬಂದಿದೆ.

ಪ್ರಾಂಗಣದಲ್ಲಿ ಗುರುವಾರ ಪ್ರವಾಹ ರೂಪದಲ್ಲಿ ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ತರಲಾಗಿದ್ದರಿಂದ ಕಾಲಿಡಲು ಜಾಗವಿಲ್ಲದಂತಾಗಿತ್ತು. ಎಲ್ಲಿ ನೋಡಿದರೂ ಮೆಣಸಿನಕಾಯಿ ಚೀಲಗಳಿಂದ ತುಂಬಿ ತುಳುಕುತ್ತಿತ್ತು. ಒಟ್ಟಾರೆ ಮಾರುಕಟ್ಟೆಗೆ 4 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಮಾರಾಟಕ್ಕೆ ತರಲಾಗಿದ್ದು, ಟೆಂಡರ್‌ಗೆ ಇಡಲು ಸ್ಥಳಾವಕಾಶದ ಕೊರತೆಯಿಂದ ಮೆಣಸಿನಕಾಯ ಚೀಲಗಳನ್ನು ಹೊತ್ತ ನೂರಾರು ವಾಹನಗಳನ್ನು ‌ಕ್ರೀಡಾಂಗಣ ಬಳಿ, ರಟ್ಟಿಹಳ್ಳಿ ರಸ್ತೆ ಹಾಗೂ ಮತ್ತಿತ್ತರ ಸ್ಥಳಗಳಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಯಿತು.

ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ಜಾತ್ರಾ ನಿಮಿತ್ತ ಫೆ.19ರಂದು ರಜೆ ಘೋಷಣೆಯಾಗಿರುವುದು ರೈತರನ್ನು ಇನ್ನಷ್ಟು ಧಾವಂತದಿಂದ ಮಾರುಕಟ್ಟೆಗೆ ಬರುವಂತೆ ಮಾಡಿದೆ. ಗುರುವಾರದ ಆವಕ ಮಾರುಕಟ್ಟೆ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಿಂದ ಬರದಿಡುವಂತೆ ಮಾಡಿರುವುದು ವಿಶೇಷ. ಕಳೆದ ಎರಡು ವರ್ಷಗಳ ಹಿಂದೆ ಗರಿಷ್ಠ 61,782 ಕ್ವಿಂಟಲ್‌ (2,47,127) ಚೀಲ ಆವಕವಾಗಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

ಎಲ್ಲೆಲ್ಲೂ ಕೆಂಪು: ಮಾರುಕಟ್ಟೆ ಪ್ರಾಂಗಣದಲ್ಲಿ ಎಲ್ಲಿ ನೋಡಿದರೂ ಮೆಣಸಿನಕಾಯಿ ಚೀಲಗಳು. ಅಂಗಡಿಯ ಮುಂದೆ ಜಾಗವಿಲ್ಲದೆ ರಸ್ತೆಯ ಮೇಲಿಟ್ಟು ಮೆಣಸಿನಕಾಯಿ ಮಾರಾಟ ಮಾಡಲಾಯಿತು. ಪಟ್ಟಣದಲ್ಲಿ ಜನ ಜಂಗುಳಿ ಜೋರಾಗಿದ್ದು, ಹೋಟೆಲ್ ಸೇರಿದಂತೆ ವಿವಿಧ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದವು.

ಬುಧವಾರದಿಂದಲೇ ಮುಖ್ಯರಸ್ತೆ, ಮೋಟೆಬೆನ್ನೂರ, ಕಾಕೋಳ, ಕದರಮಂಡಲಗಿ, ಗುಮ್ಮನಹಳ್ಳಿ, ಮಲ್ಲೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು. ಎಪಿಎಂಸಿ ಸಿಬ್ಬಂದಿ ಹಗಲಿರುಳು ಕೆಲಸ ನಿರ್ವಹಿಸಿದ್ದರಿಂದ ಜನದಟ್ಟಣೆ ನಿಯಂತ್ರಣಕ್ಕೆ ಅನುಕೂಲ ವಾಗಿತ್ತು ಎಂದು ಎಪಿಎಂಸಿ ಕಾರ್ಯ ದರ್ಶಿ ಎಚ್‌.ವೈ.ಸತೀಶ ತಿಳಿಸಿದರು.

ಮಾರುಕಟ್ಟೆಗೆ ರೈತರಿಗೆ ಮಾತ್ರ ಪ್ರವೇಶ

ಮಾರುಕಟ್ಟೆ ಪ್ರಾಂಗಣದಲ್ಲಿ ರೈತರು ಹಾಗೂ ವರ್ತಕರನ್ನು ಹೊರತುಪಡಿಸಿ ಇನ್ನಿತರ ಜನರು ಒಳಗೆ ಬಾರದಂತೆ ನಿಗಾ ವಹಿಸಲಾಗಿತ್ತು. ರೈತರ ವಸ್ತುಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಎಪಿಎಂಸಿ ಕಚೇರಿಯ ಎದುರಿನ ರಸ್ತೆಯಲ್ಲಿ ಸ್ಥಳಾವಕಾಶ ಒದಗಿಸಲಾಗಿತ್ತು. ಬಿಕ್ಷುಕರು ಹಾಗೂ ಬೀದಿಬದಿ ವ್ಯಾಪಾರಿಗಳನ್ನು ಮಾರುಕಟ್ಟೆಯಿಂದ ಹೊರಗಿಟ್ಟು ಜನದಟ್ಟಣಿಯನ್ನು ನಿಯಂತ್ರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT