ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೃತ ಇಂಜಿನಿಯರ್ ಕುಟುಂಬಕ್ಕೆ ₹1 ಕೋಟಿ ಪರಿಹಾರ

Published 8 ಡಿಸೆಂಬರ್ 2023, 16:01 IST
Last Updated 8 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ವಾಡಿ: ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಇಂಜಿನಿಯರ್ ರಮೇಶ್ ಪವಾರ ಅವರ ಕುಟುಂಬಕ್ಕೆ ಎಸಿಸಿ ಆಡಳಿತ ₹1 ಕೋಟಿ ಘೋಷಣೆ ಮಾಡಿದೆ.

ಬೆಳಗಿನ ಜಾವ ವಿಡಿಯೋ ಹೇಳಿಕೆ ಹಾಗೂ ಡೆತ್ ನೋಟ್ ಬರೆದು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ರಮೇಶ ಪವಾರ ಅವರು ಅಲ್ಲಿನ ಕಾರ್ಮಿಕರ ಪರಿಸ್ಥಿತಿ ಬಿಚ್ಚಿಟ್ಟಿದ್ದರು. ಸ್ವಯಂ ನಿವೃತ್ತಿಯ ತೂಗುಕತ್ತಿಯ ನಡುವೆ ಕಾರ್ಮಿಕರು ಕೆಲಸ ಮಾಡಬೇಕಾದ ಸ್ಥಿತಿ ಹಾಗೂ ಅಲ್ಲಿನ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಮಾತನಾಡಿ, ನಂತರ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರು ಹಾಗೂ ಸ್ಥಳೀಯರ ಸಹನೆಯ ಕಟ್ಟೆ ಒಡೆದಿತ್ತು. ಎಸಿಸಿ ಆವರಣ ಹಾಗೂ ಆತ್ಮಹತ್ಯೆ ಸ್ಥಳದಲ್ಲಿ ಜಮಾವಣೆಗೊಂಡ ನೂರಾರು ಜನರು ಕಾರ್ಖಾನೆ ಅಧಿಕಾರಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರಹಾಕಿದ್ದರು.

ಪ್ರತಿಭಟನೆ ಹಾಗೂ ಟೈರ್ ಸುಟ್ಟು ತಮ್ಮ ನೋವು ಹೊರಚೆಲ್ಲಿದ ಕಾರ್ಮಿಕರು ಹೇಳಿಕೆಯಲ್ಲಿ ದಾಖಲಾದ ಹೆಸರುಳ್ಳ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು. ಮೃತ ಕುಟುಂಬಕ್ಕೆ ಪರಿಹಾರ ಹಾಗೂ ಕಾರ್ಖಾನೆಯ ಕಾರ್ಮಿಕ ವಿರೋಧಿ ನೀತಿ ಕೈ ಬಿಡುವರೆಗೂ ಶವ ಕೆಳಗಿಳಿಸಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದರು. ಕಾರ್ಮಿಕರು ಕೆಲಸ ತ್ಯಜಿಸಿದ್ದರಿಂದ ಪ್ಲಾಂಟ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. 25 ವರ್ಷಗಳಿಂದ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿ ತಮ್ಮದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಕನಿಷ್ಠ ಭೇಟಿ ನೀಡಿ ಸಾಂತ್ವನ ಹೇಳದೇ ಅಧಿಕಾರಿಗಳು ಹೃದಯಹೀನ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಆರೋಪಿಗಳನ್ನು ಬಂಧಿಸದೆ ಹೊರಹೋಗಲು ಪೊಲೀಸರು ಸಹಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಸಹ ಆಕ್ರೋಶ ಹೊರಹಾಕಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಗುರುವಾರ ರಾತ್ರಿವರೆಗೂ ಮುಖಂಡರು ಹಾಗೂ ಎಸಿಸಿ ಪ್ಲಾಂಟ್ ಮುಖ್ಯಸ್ಥ ಅನಿಲ್ ಗುಪ್ತ ಹಾಗೂ ಇನ್ನಿತರ ಅಧಿಕಾರಿಗಳ ಜೊತೆ ಜಂಟಿ ಸಭೆ ಜರುಗಿತ್ತು. ಮೃತ ವ್ಯಕ್ತಿಯ ಪತ್ನಿ ಸುನೀತಾ ಅವರಿಗೆ ₹1 ಕೋಟಿ ಪರಿಹಾರ ನೀಡುವುದಾಗಿ ಹಾಗೂ ಕಾರ್ಮಿಕರ ಕುರಿತಾಗಿ ಸ್ಥಳೀಯರು ಹಾಗೂ ಕಾರ್ಮಿಕರು ಸಲ್ಲಿಸುವ ಬೇಡಿಕೆಗಳ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಸರಪಳಿಯಲ್ಲಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಲಾಯಿತು.

ಶುಕ್ರವಾರ ಬೆಳಿಗ್ಗೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT