ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಜಿಲ್ಲೆಗಳ ₹6.28 ಕೋಟಿ ಹಾಲಿನ ಪ್ರೋತ್ಸಾಹ ಧನ ಬಾಕಿ

Published 30 ಮೇ 2024, 4:29 IST
Last Updated 30 ಮೇ 2024, 4:29 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವ್ಯಾಪ್ತಿಯ ಹಾಲು ಪೂರೈಕೆದಾರರಿಗೆ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುವ ₹5 ಪ್ರೋತ್ಸಾಹಧನ 2023ರ ಅಕ್ಟೋಬರ್‌ನಿಂದ ಬಿಡುಗಡೆಯಾಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ.

ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ 412 ಕಾರ್ಯನಿರತ ಹಾಲು ಉತ್ಪಾದಕ ಸಂಘಗಳಿದ್ದು, ಒಟ್ಟು 10,600ಕ್ಕೂ ಹೆಚ್ಚು ರೈತರು ಈ ಒಕ್ಕೂಟಕ್ಕೆ ಹಾಲು ಪೂರೈಸುತ್ತಿದ್ದಾರೆ.

ಒಕ್ಕೂಟ ವ್ಯಾಪ್ತಿಯ ಸಾಮಾನ್ಯ ವರ್ಗದ ಹಾಲು ಪೂರೈಕೆದಾರರಿಗೆ 2023ರ ಅಕ್ಟೋಬರ್‌ನಿಂದ 2024ರ ಏಪ್ರಿಲ್‌ ತನಕದ ₹6.02 ಕೋಟಿ ಪ್ರೋತ್ಸಾಹಧನ ಪಾವತಿಯಾಗಿಲ್ಲ. ಇನ್ನು, 2024ರ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳ ಸೇರಿ ಪರಿಶಿಷ್ಟ ಜಾತಿಯ ಹೈನುಗಾರರಿಗೆ ₹10.43 ಲಕ್ಷ, ಪರಿಶಿಷ್ಟ ಪಂಗಡ ವರ್ಗದ ಹೈನುಗಾರರಿಗೆ ₹15.76 ಲಕ್ಷ ಸೇರಿದಂತೆ ಒಕ್ಕೂಟ ವ್ಯಾಪ್ತಿಯ ಮೂರು ಜಿಲ್ಲೆಗಳ ಹೈನುಗಾರರಿಗೆ ಒಟ್ಟು ₹6.28 ಕೋಟಿ ಪ್ರೋತ್ಸಾಹಧನ ಪಾವತಿ ಬಾಕಿ ಉಳಿದಿದೆ. ಮೇ ತಿಂಗಳ ಲೆಕ್ಕವೂ ಸೇರಿದರೆ ₹7 ಕೋಟಿಗೂ ಅಧಿಕ ಮೊತ್ತವಾಗುತ್ತದೆ.

ರಾಜ್ಯ ಸರ್ಕಾರ ಕ್ಷೀರೋತ್ಪಾದನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲು ಪೂರೈಕೆದಾರರಿಗೆ ಪ್ರತಿ ಲೀಟರ್‌ಗೆ ₹5ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಆದರೆ, ಅದು ನಿಯಮಿತವಾಗಿ ಹೈನುಗಾರರಿಗೆ ತಲುಪದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಹೆಚ್ಚುತ್ತಿದೆ ಸಂಕಷ್ಟ: ‘ನಮ್ಮ ಸಂಘದಲ್ಲಿ 50 ರೈತರು ಹಾಲು ಹಾಕುತ್ತಾರೆ. ನಿತ್ಯ ಸರಾಸರಿ 450 ಲೀಟರ್‌ಗಳಷ್ಟು ಹಾಲು ಸಂಗ್ರಹವಾಗುತ್ತದೆ. ಸಂಘದ ಸದಸ್ಯರಿಗೆ ಕಳೆದ ಏಳು ತಿಂಗಳಿಂದ ಹಾಲಿನ ಪ್ರೋತ್ಸಾಹಧನ ಸರ್ಕಾರದಿಂದ ಬಿಡುಗಡೆಯೇ ಆಗಿಲ್ಲ. ಮೊದಲೆಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ಹಣ ಬಿಡುಗಡೆ ಆಗುತಿತ್ತು. ಇದೇ ಮೊದಲ ಬಾರಿ ಇಷ್ಟೊಂದು ದೀರ್ಘ ಅವಧಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಪ್ರೋತ್ಸಾಹಧನ ನಿಯಮಿತವಾಗಿ ಬಿಡುಗಡೆಯಾಗಿದ್ದರೆ, ಬೇಸಿಗೆ ಹಾಗೂ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ದನಗಳಿಗೆ ಒಣಮೇವು, ಹಿಂಡಿ–ಬೂಸಾ ಖರೀದಿಗೆ ನೆರವಾಗುತ್ತಿತ್ತು. ಒಂದೆಡೆ ಬರಗಾಲ– ಬೇಸಿಗೆಯಿದೆ. ಮತ್ತೊಂದೆಡೆ ಪ್ರೋತ್ಸಾಹಧನವೂ ಕೈಸೇರುತ್ತಿಲ್ಲ. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸಂಕಷ್ಟ ಎದುರಾಗಿದೆ’ ಎಂದು ಆಳಂದ ತಾಲ್ಲೂಕಿನ ಜಮಗಾ(ಜೆ) ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರೇವಣಸಿದ್ದಪ್ಪ ಅಪಚಂದ ‘ಪ್ರಜಾವಾಣಿ‌’ಗೆ ಪ್ರತಿಕ್ರಿಯಿಸಿದರು.

<p class="quote">ಒಕ್ಕೂಟ ವ್ಯಾಪ್ತಿಯ ರೈತರ ಬಾಕಿ ಪ್ರೋತ್ಸಾಹ ಧನವನ್ನು ಪಾವತಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು</p><p class="quote"></span></p>
ಆರ್‌.ಕೆ.ಪಾಟೀಲ, ಅಧ್ಯಕ್ಷ, ಕಲಬುರಗಿ, ಬೀದರ್‌, ಯಾದಗಿರಿ ಹಾಲು ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT