ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವ ಚೈತನ್ಯಲಿಂಗದ ಪೂಜೆ ಶಾಂತಿಯುತ

ಆಳಂದದಲ್ಲಿ ಪೊಲೀಸ್‌ ಸರ್ಪಗಾವಲು; ಅಘೋಷಿತ ಬಂದ್‌; ಸಂಚಾರಕ್ಕೆ ಅಡ್ಡಿ
Published 9 ಮಾರ್ಚ್ 2024, 5:03 IST
Last Updated 9 ಮಾರ್ಚ್ 2024, 5:03 IST
ಅಕ್ಷರ ಗಾತ್ರ

ಆಳಂದ: ಮಹಾಶಿವರಾತ್ರಿ ನಿಮಿತ್ತ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗದ ವಿಶೇಷ ಪೂಜೆಯು ಶುಕ್ರವಾರ ಪೊಲೀಸರ ಕಟ್ಟೆಚ್ಚರದ ನಡುವೆ ಶಾಂತಿಯುತವಾಗಿ ನಡೆಯಿತು.

ದರ್ಗಾ ಸಮಿತಿಯ 12 ಜನರು ಶುಕ್ರವಾರದ ಪೂಜೆ ಸಲ್ಲಿಸಿದರೆ, ಅಂದೋಲಾದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಡಾ. ಅವಿನಾಶ್ ಜಾಧವ, ಜಿ.ಪಂ. ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ 15 ಜನರಿಗೆ ಮಾತ್ರ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿತ್ತು. ಎಡಿಜಿಪಿ ಅಜಯ ಹಿಲೋರಿ, ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್ಪಿ ಎನ್‌ ಶ್ರೀನಿಧಿ, ತಹಶೀಲ್ದಾರ್‌ ಸುರೇಶ ಅಂಕಲಗಿ ಮತ್ತಿತರ ಅಧಿಕಾರಿಗಳ ಬೆಳಗ್ಗೆಯಿಂದಲೂ ಸ್ಥಳದಲ್ಲಿ ಇದ್ದರು.

ಕೋರ್ಟ್‌ ಅನುಮತಿ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ದರ್ಗಾ ಸಮಿತಿಗೆ ಮಧ್ಯಾಹ್ನ 1 ಗಂಟೆಗೆ ಅನುಮತಿ ನೀಡಲಾಗಿತ್ತು. ದರ್ಗಾ ಉತ್ತರ ದಿಕ್ಕಿನ ದ್ವಾರದಿಂದ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಕೊಡಲಾಗಿತ್ತು. ದರ್ಗಾ ಸಮಿತಿ ಅಧ್ಯಕ್ಷ ಆಸೀಫ್‌ ಅನ್ಸಾರಿ, ಮೋಹಿಜ್‌ ಕಾರಬಾರಿ, ಮೊಹಮದ್‌ ಇದ್ರೀಶ್‌ ಅನ್ಸಾರಿ, ಅಫ್ಜಲ್‌ ಅನ್ಸಾರಿ, ಅಲ್ಲಾವುದ್ದೀನ್‌ ಅನ್ಸಾರಿ, ವಾಜೀದ್‌ ಅನ್ಸಾರಿ, ಖಾಜಾ ನಜಮೋದ್ದಿನ್‌ ಪಟೇಲ್, ಶಕೀಲ್‌ ಅಹ್ಮದ್‌, ನಿಯಾಜ್‌ ಅನ್ಸಾರಿ, ಖಾಬರ್‌ ಅನ್ಸಾರಿ, ಫಕ್ರೋದ್ದಿನ್‌ ಅನ್ಸಾರಿ, ಮೂಸಾ ಅನ್ಸಾರಿ ಅವರು ಪೋಲಿಸ್‌ ಬಂದೋಬಸ್ತ್‌ನಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಸಾಯಂಕಾಲ 5ಕ್ಕೆ ರಾಘವಚೈತನ್ಯ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ 15 ಜನರಿಗೆ ಶಿವಲಿಂಗದ ಪೂಜೆಗೆ ಅನುಮತಿ ನೀಡಲಾಯಿತು. ಪಟ್ಟಣದ ಹೊರವಲಯದ ಪ್ರಗತಿ ಲೇಔಟ್‌ದಿಂದ ಪೊಲೀಸ್ ಬಂದೋಬಸ್ತ್‌ ನಡುವೆ ಕರೆತರಲಾಯಿತು. ಆಳಂದ–ಕಲಬುರಗಿ ಮುಖ್ಯ ರಸ್ತೆಯ ದರ್ಗಾ ದಕ್ಷಿಣ ದ್ವಾರದಿಂದ 15 ಜನರಿಗೆ ಮಾತ್ರ ಒಳಗೆ ತೆರಳಲು ಅನುಮತಿ ನೀಡಲಾಯಿತು. ಕಡಗಂಚಿಯ ವೀರಭದ್ರ ಸ್ವಾಮೀಜಿ, ಅಂದೋಲಾದ ಸಿದ್ದಲಿಂಗ ಸ್ವಾಮೀಜಿ, ವಿಎಚ್‌ಪಿ ಮುಖಂಡ ಲಿಂಗರಾಜಪ್ಪ ಅಪ್ಪಾ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಶಿವರಾಜ ಪಾಟೀಲ, ಹರ್ಷಾನಂದ ಗುತ್ತೇದಾರ, ಮಾಜಿ ಶಾಸಕ ದತಾತ್ರೇಯ ಪಾಟೀಲ, ಚಂದು ಪಾಟೀಲ, ಆನಂದರಾವ ಪಾಟೀಲ, ನಾಗೇಂದ್ರ ಕಾಬಡೆ, ಈರಣ್ಣಾ ಹತ್ತರಕಿ, ಸಂತೋಷ ಹಾದಿಮನಿ, ವಿಜಯಕುಮಾರ ರಾಠೋಡ, ಗುಂಡಪ್ಪ ಗೌಳಿ, ಪ್ರಕಾಶ ಜೋಶಿ ಅವರು ಕಾಲ್ನಡಿಗೆಯಲ್ಲಿ ತೆರಳಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ, ‘ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಲು ವಿಳಂಬ ಮಾಡಿತು. ಆದರೆ ಹೈಕೋರ್ಟ್‌ ಹಿಂದೂಗಳ ಧಾರ್ಮಿಕ ಹಕ್ಕು ರಕ್ಷಣೆ ಮಾಡಿದ್ದು, ಮುಂದೆ ಕಾನೂನಾತ್ಮಕ ಹೋರಾಟದಿಂದ ಮಂದಿರ ನಿರ್ಮಾಣದ ಯೋಜನೆ ರೂಪಿಸಲಾಗುವುದು‘ ಎಂದರು.

ಕಳೆದ ಮೂರು ವರ್ಷದಿಂದ ವಿವಾದ ಕೇಂದ್ರವಾಗಿ ಮಾರ್ಪಟ್ಟಿರುವ ಇಲ್ಲಿಯ ಲಾಡ್ಲೆ ಮಶಾಕ್‌ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆಗಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ಥಗಿತಗೊಂಡಿದ್ದವು. ಬಸ್‌ ನಿಲ್ದಾಣದಿಂದ ಬಸ್‌ ಸಂಚಾರಕ್ಕೆ ಅವಕಾಶ ಇರಲಿಲ್ಲ, ಹೊರವಲಯದ ಬಸ್‌ ಘಟಕದಿಂದ ಮಾತ್ರ ಬಸ್‌ ಓಡಾಟ ಕಂಡುಬಂತು.

ಆಳಂದ ಪಟ್ಟಣದಲ್ಲಿನ ದರ್ಗಾ ಸುತ್ತಲಿನಲ್ಲಿ ಪೋಲಿಸ್‌ ಬಂದೋಬಸ್ತ್‌
ಆಳಂದ ಪಟ್ಟಣದಲ್ಲಿನ ದರ್ಗಾ ಸುತ್ತಲಿನಲ್ಲಿ ಪೋಲಿಸ್‌ ಬಂದೋಬಸ್ತ್‌
ಸಕಾಲಕ್ಕೆ ಬಸ್ ಬಾರದೇ ಇದ್ದುದರಿಂದ ಆಳಂದ ಪಟ್ಟಣದಲ್ಲಿ ಪ್ರಯಾಣಿಕರ ಪರದಾಡಿದರು
ಸಕಾಲಕ್ಕೆ ಬಸ್ ಬಾರದೇ ಇದ್ದುದರಿಂದ ಆಳಂದ ಪಟ್ಟಣದಲ್ಲಿ ಪ್ರಯಾಣಿಕರ ಪರದಾಡಿದರು

ಪ್ರಯಾಣಿಕರ ಪರದಾಟ

ಆಳಂದ ಪಟ್ಟಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಹಣ್ಣುಹಂಪಲು ವ್ಯಾಪಾರದ ಅಂಗಡಿಗಳು ಹೋಟೆಲ್‌ ಅಂಗಡಿಗಳು ಬಂದ್‌ ಆದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದರು. ಗ್ರಾಮೀಣ ಭಾಗಕ್ಕೂ ಬಸ್‌ ಸಂಚಾರದ ಅಭಾವ ಕಂಡು ಬಂತು. ಅಲ್ಲದೆ ಕಲಬುರಗಿ ಸೋಲಾಪುರ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರು ಹಳೆಯ ಚೆಕ್‌ ಪೋಸ್ಟ್‌ ಹೊಸ ಚೆಕ್‌ ಪೋಸ್ಟ್‌ ವರೆಗೂ ಕಾಲ್ನಡಿಗೆಯಲ್ಲಿ ತೆರಳುವ ಸಂಕಷ್ಟವು ಎದುರಾಯಿತು. ಕೊತ್ತನ ಹಿಪ್ಪರಗಿಯ ಬಾಣಂತಿಯು ಅರ್ಧ ಗಂಟೆಗೂ ಹೆಚ್ಚು ಕಾಲ ಆಳಂದ ಬಸ್‌ ಘಟಕದ ಮುಖ್ಯ ರಸ್ತೆ ಮೇಲೆ ಬಿಸಿಲಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಪಿಐ ಮಹಾದೇವ ಪಂಚಮುಖಿ ಖುದ್ದು ಅಟೊ ಮೂಲಕ ಈ ಮಹಿಳೆಗೆ ಬಸ್‌ ನಿಲ್ದಾಣಕ್ಕೆ ತಲುಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT