ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ | ಪ್ರಶ್ನೆ ಪತ್ರಿಕೆ ಸೋರಿಕೆ: ಮುಖ್ಯ ಶಿಕ್ಷಕ, ಶಿಕ್ಷಕ ಅಮಾನತು

Published 2 ಫೆಬ್ರುವರಿ 2024, 4:30 IST
Last Updated 2 ಫೆಬ್ರುವರಿ 2024, 4:30 IST
ಅಕ್ಷರ ಗಾತ್ರ

ಆಳಂದ: 2023ರ ಏಪ್ರಿಲ್‌ನಲ್ಲಿ ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ನಡೆದ ಜವಾಹರ ನವೋದಯ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಪಡಸಾವಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ ಹಾಗೂ ಮೋಘಾ (ಕೆ) ಶಾಲೆಯ ಸಹ ಶಿಕ್ಷಕ ಪರಮೇಶ್ವರ ದುಲಂಗೆ ಅವರನ್ನು ಅಮಾನತು ಮಾಡಲಾಗಿದೆ.

ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಜ.17 ರಂದು ಅಮಾನತು ಆದೇಶ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಆಯಾ ಶಾಲೆಗಳಿಗೆ ಅಮಾನತು ಪ್ರತಿಯನ್ನು ಮಂಗಳವಾರ ತಲುಪಿಸಲಾಗಿದೆ.

‘2023ರ ಏ.29 ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಅಂದಿನ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ, ಪಡಸಾವಳಿ ಶಾಲೆ ಮುಖ್ಯ ಶಿಕ್ಷಕ ಬಸವರಾಜ ದೊಡ್ಡಮನಿ ಹಾಗೂ ಮೋಘಾ (ಕೆ) ಶಾಲೆಯ ಶಿಕ್ಷಕ ಪರಮೇಶ್ವರ ದುಲಂಗೆ ಸ್ಥಳೀಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ’ ಎಂದು ವಿದ್ಯಾರ್ಥಿಗಳ ಪಾಲಕರಾದ ದೇವೀಂದ್ರಪ್ಪ ಶವರೆ, ಅರ್ಜುನ ಇಂಗಳೆ ಮತ್ತಿತರರು ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ, ಹೆಚ್ಚುವರಿ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ತನಿಖಾ ತಂಡ ರಚಿಸಿತ್ತು. ನಿಯೋಜಿತ ತನಿಖಾಧಿಕಾರಿಗಳು ಆಳಂದದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ದೂರುದಾರ ಪಾಲಕರ ಸಮ್ಮುಖದಲ್ಲಿ ವಿಚಾರಣೆ ಮಾಡಿದ್ದರು. ನಾಲ್ಕು ಬಾರಿ ಆರೋಪಿ ಶಿಕ್ಷಕರ ವಿಚಾರಣೆ ಬಳಿಕ ತನಿಖಾ ತಂಡ ಡಿಡಿಪಿಐಗೆ ವರದಿ ಸಲ್ಲಿಸಿತ್ತು.

ವರದಿ ಆಧರಿಸಿ ಪಟ್ಟಣದ ತರಬೇತಿ ಕೇಂದ್ರದ 20 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಗೆ ಆಯ್ಕೆಯಾಗಿದ್ದು ಸಾಬೀತಾಗಿತ್ತು. ಈ ವರದಿ ಆಧರಿಸಿ ಅಮಾನತುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT