ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಚಿಂತನೆ ಜತೆಗೆ ಹಳೆ ಸಂಸ್ಕೃತಿ ಉಳಿಸಿ

ಭಾರತೀಯ ಸಂಸ್ಕೃತಿ ಉತ್ಸವದ ಸ್ವಾಗತ ಸಮಿತಿ ಸಭೆ; ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
Published 19 ಮಾರ್ಚ್ 2024, 4:48 IST
Last Updated 19 ಮಾರ್ಚ್ 2024, 4:48 IST
ಅಕ್ಷರ ಗಾತ್ರ

ಕಲಬುರಗಿ: ‘ಹೊಸ ಚಿಂತನೆಗಳ ಜತೆಗೆ ಹಳೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ. ನಮ್ಮತನವನ್ನು ರಕ್ಷಿಸುವ ಪ್ರಯತ್ನ ಭಾರತೀಯ ಸಂಸ್ಕೃತಿ ಉತ್ಸವದ ಮೂಲಕ ನಡೆಯಲಿದ್ದು, ಅದಕ್ಕೆ ಅಗತ್ಯವಾದ ಸಹಾಯ ಉದಾರವಾಗಿ ಹರಿದುಬರಬೇಕು’ ಎಂದು ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಖಮಿತ್ಕರ್ ಭವನದಲ್ಲಿ ಸೋಮವಾರ ನಡೆದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ಸ್ವಾಗತ ಸಮಿತಿ ಮತ್ತು ಆಮಂತ್ರಿತರ ಸಭೆಯಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯನ್ನು ಅನುಸರಿಸಲು ವಿಶ್ವವೇ ಮುಂದೆ ಬರುತ್ತಿದೆ. ಆದರೆ, ನಮ್ಮ ಯುವ ಪೀಳಿಗೆ ಅನಾಗರಿಕತೆಯಡೆಗೆ ಸಾಗುತ್ತಿದೆ. ಅನಾಗರಿಕತೆಯ ಹಾದಿ ತುಳಿಯುತ್ತಿರುವವರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಮಹತ್ಕಾರ್ಯವನ್ನು ಉತ್ಸವದ ಮೂಲಕ ಜರುಗಲಿದೆ. ಇದೊಂದು ಅಭಿಮಾನದ ಸಂಗತಿ’ ಎಂದರು.

‘ಪ್ರಕೃತಿಯ ರಕ್ಷಣೆ ಹಾಗೂ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ಅಪರೂಪದ ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿ, ವಿಜ್ಞಾನ, ಉದ್ಯಮ, ಪ್ರತಿಭೆಯ ಪ್ರದರ್ಶನಗಳನ್ನು ಏರ್ಪಡಿಸಿ, ಜ್ಞಾನ ಪರಂಪರೆಯನ್ನು ವಿಸ್ತಾರವಾಗಲಿದೆ. ಸಂಸ್ಕೃತಿ ಪಸರಿಸುವ ಪ್ರಯತ್ನಕ್ಕೆ ಎಲ್ಲರೂ ಒಗ್ಗೂಡಿ ಕೈ ಜೋಡಿಸಬೇಕಿದೆ’ ಎಂದು ಸಲಹೆ ನೀಡಿದರು.

ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಮಾತನಾಡಿ, ‘ಮನುಷ್ಯರು ಭೂಮಿಗೆ ಧಕ್ಕೆ ಆಗದಂತೆ ಇತಿಹಾಸ ನಿರ್ಮಿಸಬೇಕು. ಪ್ರಕೃತಿ ಕೇಂದ್ರಿತವಾದ ವಿಕಾಸನ ಪದ್ಧತಿ ರೂಢಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪರಂಪರೆಯ ಪ್ರಜ್ಞೆ ಇನ್ನಷ್ಟು ವಿಸ್ತಾರಗೊಳ್ಳಬೇಕು’ ಎಂದರು.

‘ಭಾರತ ಮಾತೆ, ದೈವಿ ಮಾತೆ, ಗೋಮಾತೆಯು ದೇಶದ ಶಕ್ತಿಯಾಗಿದೆ. ಮನುಷ್ಯರಿಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯ ಅವಶ್ಯವಿದೆ. ಆದರೂ ನಾವು ನೈಸರ್ಗಿಕವಾಗಿ ಬದುಕಬೇಕು’ ಎಂದು ಹೇಳಿದರು.

ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಿದರು.

ಪ್ರಮುಖರಾದ ಮಾಧವರೆಡ್ಡಿ ಹೈದರಾಬಾದ್, ವಿಎಚ್‌ಪಿ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ರವೀಂದ್ರ ಧಾರಿಯಾ, ಹರ್ಷಾನಂದ ಸ್ವಾಮಿಜಿ, ವೇಣುಗೋಪಾಲರೆಡ್ಡಿ, ಡಾ.ಗುರುರಾಜ ಕರ್ಜಗಿ, ವಾಸುದೇವ ದೇಶಪಾಂಡೆ, ಡಾ.ಬಿ.ಜಿ.ಮೂಲಿಮನಿ ಇತರರು ಉಪಸ್ಥಿತರಿದ್ದರು.

ಒಂಬತ್ತು ದಿನ ಉತ್ಸವ

ಸೇಡಂ ಸಮೀಪದ ಬೀರನಳ್ಳಿಯ ಪ್ರಕೃತಿ ನಗರದಲ್ಲಿ 2025ರ ಜನವರಿ 29ರಿಂದ ಫೆಬ್ರುವರಿ 6ರ ವರೆಗೆ ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ-7 ನಡೆಯಲಿದೆ. 240 ಎಕರೆಯ ಜಮೀನಿನಲ್ಲಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ಸವಕ್ಕೂ ಮುನ್ನ ಯೋಗ ತರಬೇತಿ ವಿವಿಧ ಸ್ಪರ್ಧೆ ವಿಕಾಸ ಯಾತ್ರೆ ಶೋಭಾಯಾತ್ರೆ ಮಹಾಸಂಕಲ್ಪ ಪೂಜೆ ಪ್ರದರ್ಶನಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT