ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಪ್ರಚಾರದ ಅಖಾಡಕ್ಕೆ ಇಳಿದ ‘ಕಮಲ’ ಪಡೆ

Published 22 ಫೆಬ್ರುವರಿ 2024, 4:53 IST
Last Updated 22 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಹಾಗೂ ಖರ್ಗೆ ಪ್ರಭಾವದ ಕಲ್ಯಾಣ ಕರ್ನಾಟಕವನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿಯ ನಾಯಕರು, ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.

371(ಜೆ) ತಿದ್ದುಪಡಿಗೆ ಹತ್ತು ವರ್ಷ ಹಾಗೂ ರಾಜಕೀಯ ಜೀವನಕ್ಕೆ ಕಾಲಿಟ್ಟು 52 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೀದರ್‌ನಲ್ಲಿ ಬೃಹತ್ ಅಭಿನಂದನಾ ಸಮಾರಂಭ ನಡೆಯಿತು. ಅದರ ಮರುದಿನವೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರು ಕಲಬುರಗಿ ಮತ್ತು ಬೀದರ್‌ನಲ್ಲಿ ಪ್ರವಾಸ ಮಾಡಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಚೌಹಾಣ್ ಅವರು ಸೇಡಂನಲ್ಲಿ ಬುಧವಾರ ‘2024ಕ್ಕೆ ಮತ್ತೊಮ್ಮೆ ಮೋದಿ’ ಎಂಬ ಚುನಾವಣಾ ಪ್ರಚಾರದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ನಗರದಲ್ಲಿಯೂ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ, ದೇವರ ದರ್ಶನಪಡೆದರು. ಜಿಲ್ಲೆಯಲ್ಲಿ ಲಿಂಗಾಯತರ ಪ್ರಾಬಲ್ಯದ ನಡುವೆಯೂ ಬಂಜಾರ ಸಮುದಾಯದ ಮತಗಳೂ ಬಹು ಸಂಖ್ಯೆಯಲ್ಲಿವೆ. ಹೀಗಾಗಿ, ಎರಡೂ ಸಮುದಾಯಗಳ ಬುಟ್ಟಿಗೆ ಕೈಹಾಕಿ ಮತಫಸಲು ತೆಗೆಯಲು ಬಿಜೆಪಿಯ ನಾಯಕರು ಪ್ರಚಾರದ ಆರಂಭಿಕ ಹೆಜ್ಜೆ ಇರಿಸಿದ್ದಾರೆ.

‘ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆಗಿಳಿದರೆ ಅವರಿಗೆ ವಯಸ್ಸಾಗಿದೆ. ಹೀಗಾಗಿ, ಮತ್ತೊಮ್ಮೆ ಅತ್ಯಧಿಕ ಮತಗಳಿಂದ ಸೋಲಿಸಿ ಚುನಾವಣಾ ಅಖಾಡದಿಂದ ಶಾಶ್ವತವಾಗಿ ವಿಶ್ರಾಂತಿ ನೀಡಿ’ ಎಂದ ಚೌಹಾಣ್‌, ತಾವು ಬಂದಿದ್ದರ ಸಂದೇಶವನ್ನು ಸೇಡಂನಲ್ಲಿ ಕಾರ್ಯಕರ್ತರಿಗೆ ರವಾನಿಸಿದರು.

ಖರ್ಗೆ ಅವರು ತಾವು ವಹಿಸಿಕೊಂಡ ಜವಾಬ್ದಾರಿಯನ್ನು ನಿಷ್ಠೆ ಮತ್ತು ನಿಷ್ಠುರತೆಯಿಂದ ಸಮರ್ಥವಾಗಿ ನಿಭಾಯಿಸುವ ಕಾರ್ಯಶೈಲಿಗೆ ವಿರೋಧ ಪಕ್ಷದವರೂ ತಲೆದೂಗಿದ್ದು ಸಾಕಷ್ಟು ನಿದರ್ಶನಗಳಿವೆ. ಈ ಬಗ್ಗೆ ಅರಿತಿರುವ ನಾಲ್ಕು ಬಾರಿಯ ಸಿಎಂ ಚೌಹಾಣ್ ಅವರು, ‘ವಯಸ್ಸಾದರೂ ಖರ್ಗೆ ಅವರು ಮಹಾಘಟಬಂಧನ್ ಕಟ್ಟಿಕೊಂಡು ಮೋದಿಯವರನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದಾರೆ’ ಎನ್ನುವ ಮೂಲಕ ಖರ್ಗೆ ಅವರ ಶಕ್ತಿ ಬಗ್ಗೆಯೂ ಕಾರ್ಯಕರ್ತರಿಗೆ ಎಚ್ಚರಿಸಿದ್ದಾರೆ.

‘ಪಕ್ಷದ ಒಳಗೆ ಖರ್ಗೆ ಅವರು ಖಡಕ್ ಮಾತಾಡುತ್ತಿದ್ದರೆ ಒಬ್ಬೊಬ್ಬರೇ ನಾಯಕರು ಪಕ್ಷದಿಂದ ಹೊರ ಬರುತ್ತಿದ್ದಾರೆ. ಮತ್ತೊಂದು ಕಡೆ ನಾಯಕ ರಾಹುಲ್ ಗಾಂಧಿ ಅವರು ಪಕ್ಷ ಬಿಟ್ಟು ದೇಶದಲ್ಲಿ ಓಡಾಡುತ್ತಿದ್ದಾರೆ. ಇದರಿಂದಾಗಿ ಖರ್ಗೆ ಚಿಂತಾಕ್ರಾಂತರಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಥೆ ಮುಗಿಯಲಿದೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರ ಆತ್ಮ ವಿಶ್ವಾಸ ಕುಗ್ಗಿಸುವ ಮಾತುಗಳನ್ನು ನಗರದಲ್ಲಿ ಆಡಿದರು.

‘ಕಾಂಗ್ರೆಸ್ ಪಕ್ಷ ಸೋನಿಯಾ, ರಾಹುಲ್‌ ಗಾಂಧಿ, ಪ್ರಿಯಾಂಕ್ ಗಾಂಧಿ ಅವರ ಹಿಡಿತದಲ್ಲಿದೆ. ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿದ್ದರೆ, ಇಲ್ಲಿ ಅವರ ಮಗ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾರೆ. ಸರ್ವಾಧಿಕಾರ, ಪರಿವಾರವಾದ ಕಾಂಗ್ರೆಸ್‌ನಲ್ಲಿದೆ’ ಎಂದು ಕುಟುಂಬ ರಾಜಕಾರಣದ ಬಗ್ಗೆಯೂ ಪ್ರಸ್ತಾಪಿಸಿದರು.

‘ಕಾಂಗ್ರೆಸ್‌ನವರನ್ನು ಮುಗಿಸಲು ಕಲಬುರಗಿಗೆ ಬಿಜೆಪಿಗರು ದೌಡು’

‘ಬಿಜೆಪಿಯ ವರಿಷ್ಠರು ಪದೇ ಪದೇ ಕಲಬುರಗಿಗೆ ಏಕೆ ಬರುತ್ತಿದ್ದಾರೆ? ಯಾರನ್ನು ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ತಮ್ಮ ಅಭ್ಯರ್ಥಿಯನ್ನು ನೋಡಿ ಸಲಹೆ ಕೊಡಲು ಅಥವಾ ಕಾಂಗ್ರೆಸ್‌ನವರನ್ನು ಮುಗಿಸಲು ಬರುತ್ತಿರಬೇಕು. ನೀವೇ ಊಹಿಸಿಕೊಳ್ಳಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಲೋಕಸಭೆಯಲ್ಲಿ ಇರುವುದೇ 543 ಸೀಟು. ಅಬ್ಬರದ ಪ್ರಚಾರದಲ್ಲಿರುವ ಮೋದಿ ಅವರು 400 500 ಸೀಟುಗಳನ್ನು ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಬೇರೆಯವರಿಗೆ ಏನು ಸಿಗಲ್ಲ. 543 ಸೀಟು ಅವರೇ ಗೆಲ್ಲುತ್ತಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ನಡವಳಿಕೆ ಸರಿಯಲ್ಲ’ ಎಂದು ಹರಿಹಾಯ್ದರು. ‘ದೇಶದಲ್ಲಿ ನಿರಂಕುಶ ನಾಯಕತ್ವ ಮತ್ತು ಸರ್ವಾಧಿಕಾರ ಆಡಳಿತ ತರಲು ಮೋದಿ ಸಾಹೇಬರು ಬಯಸುತ್ತಿದ್ದು ಅದನ್ನೇ ಮಾಡಿ ತೋರಿಸುತ್ತಿದ್ದಾರೆ. ಈ ಬಗ್ಗೆ ನಾವು ಜನರಿಗೆ ತಿಳಿಸುತ್ತಿದ್ದೇವೆ. ಆದರೆ ಕೆಲವರು ಮೋದಿ ಇದ್ದರೆ ಮಾತ್ರವೇ ದೇಶ ನಡೆಯುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಗುಂಗಿನಲ್ಲಿ ಇದ್ದಾರೆ’ ಎಂದು ಹೇಳಿದರು. ‘70 ವರ್ಷಗಳಿಂದ ಮೋದಿ ಇಲ್ಲದೆ ದೇಶ ನಡೆಯಲಿಲ್ಲವೇ? ಐ.ಕೆ. ಗುಜ್ರಾಲ್ ಎಚ್‌.ಡಿ. ದೇವೇಗೌಡ ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ನಾಯಕರು ದೇಶ ಕಟ್ಟಿದ್ದಾರೆ. ಬಡವರ ಬಗ್ಗೆ ಅನುಕಂಪ ಇರಿಸಿಕೊಂಡು ಆಡಳಿತ ನಡೆಸಿದ್ದಾರೆ. ಆದರೆ ಮೋದಿ ಅವರದ್ದು ಜಾಹೀರಾತು ಸರ್ಕಾರ. ಪತ್ರಿಕೆಯಲ್ಲಿ ಮೋದಿ ಫೋಟೊ ಟಿವಿಯಲ್ಲಿ ಮೋದಿ ಮಾತು ಇಲ್ಲದೆ ಏನೂ ಸಿಗಲ್ಲ. ಹೀಗಾದರೆ ದೇಶ ಹೇಗೆ ಬೆಳೆಯುತ್ತದೆ’ ಎಂದು ಪ್ರಶ್ನಿಸಿದರು.

ಸ್ವಚ್ಛತೆಗೆ ಸ್ಥಳೀಯ ನಾಯಕರು ಸಾಥ್

ದೇವಸ್ಥಾನ ಆವರಣ ಸ್ವಚ್ಛತಾ ಅಭಿಯಾನದಲ್ಲಿ ಶಿವರಾಜ್‌ ಸಿಂಗ್ ಚೌಹಾಣ್ ಅವರಿಗೆ ಕೇಂದ್ರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಸಂಸದ ಡಾ.ಉಮೇಶ ಜಾಧವ ಶಾಸಕರಾದ ಬಸವರಾಜ ಮತ್ತಿಮಡು ಡಾ.ಅವಿನಾಶ ಜಾಧವ ಮೇಯರ್ ವಿಶಾಲ್ ದರ್ಗಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸೇರಿ ಹಲವರು ಸಾಥ್ ನೀಡಿದರು. ದೇವಸ್ಥಾನಕ್ಕೆ ತೆರಳಿ ಮರುಳಾರಾಧ್ಯ–ಶರಣಬಸವೇಶ್ವರರ ಕರ್ತೃ ಗದ್ದುಗೆಯ ದರ್ಶನ ಪಡೆದರು.  ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಹಾಗೂ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌.ಅಪ್ಪ ಅವರ ಆಶೀರ್ವಾದವನ್ನೂ ಪಡೆದರು.

ಏಕಾಂಗಿಯಾದರೇ ಜಾಧವ?

ಸ್ವಚ್ಛತಾ ಅಭಿಯಾನದಲ್ಲಿ ಬಿಜೆಪಿ ನಾಯಕರು ತಮ್ಮ ಆಪ್ತರು ಬೆಂಬಲಿಗರೊಂದಿಗೆ ದೇವಸ್ಥಾನ ಆವರಣಕ್ಕೆ ಬಂದರು. ಆದರೆ ಸಂಸದ ಡಾ.ಉಮೇಶ ಜಾಧವ ಅವರು ಕಾರಿಂದ ಇಳಿದು ಒಬ್ಬರೇ ಬಂದು ಅಭಿಯಾನದಲ್ಲಿ ಪಾಲ್ಗೊಂಡರು. ಬಹುತೇಕ ನಾಯಕರು ಚೌಹಾಣ್‌ ಅವರೊಂದಿಗೆ ದೇವಸ್ಥಾನದ ಗದ್ದುಗೆಗೆ ತೆರಳಿದ್ದರು. ಕೆಲ ಹೊತ್ತಿನಲ್ಲಿ ಆಚೆ ಬಂದ ಜಾಧವ ಒಂದಿಷ್ಟು ಕಾರ್ಯಕರ್ತರ ಜತೆಗೆ ಮಾತನಾಡಿದರು. ಇದರ ನಡುವೆಯೇ ಅಹವಾಲು ಒಂದನ್ನು ಸ್ವೀಕರಿಸಿದರು.

ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಇಲ್ಲದೊಂದು ಮಾತನಾಡುತ್ತಿದ್ದಾರೆ. ಯಾತ್ರೆ ಬನಾರಸ್ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಯುವಕರು ಕುಡಿದು ನೃತ್ಯ ಮಾಡಿದ್ದಾರೆ.
ಶಿವರಾಜ್‌ ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ ಮಧ್ಯಪ್ರದೇಶ
ಜಿಲ್ಲೆಯಲ್ಲಿ ಸಾಕಷ್ಟು ಬಿಸಿಲಿದ್ದರೂ ಬಿಜೆಪಿಗರು ಆಸಕ್ತಿಯಿಂದ ಕಲಬುರಗಿಗೆ ಬರುತ್ತಿದ್ದಾರೆ. ಅಮಿತ್ ಶಾ ಸೇರಿದಂತೆ ಹಲವರು ಪದೇ ಪದೇ ಬಂದು ಠಿಕಾಣಿ ಹೂಡುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT