ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಬಾವಿಯಲ್ಲಿ ಬಿದ್ದು ಅಣ್ಣ ತಂಗಿ ಸಾವು

Published 30 ಜನವರಿ 2024, 6:02 IST
Last Updated 30 ಜನವರಿ 2024, 6:02 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಪಟಪಳ್ಳಿ ಗ್ರಾಮದಲ್ಲಿ ಅಣ್ಣ ಹಾಗೂ ತಂಗಿ ಭಾನುವಾರ ರಾತ್ರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ಈ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಪಟಪಳ್ಳಿಯ ಅಣ್ಣ ಸಂದೀಪ್ (23) ಹಾಗೂ ತಂಗಿ ನಂದಿನಿ‌ (19) ಮೃತರು.

ನಂದಿನಿ ಸಣ್ಣ ಸಣ್ಣ ವಿಚಾರಕ್ಕೂ ಹಠ ಮಾಡುತ್ತಿದ್ದಳು. ಪಿಯುಸಿ ನಂತರ ಓದನ್ನು ಮಧ್ಯದಲ್ಲೇ ನಿಲ್ಲಿಸಿದ್ದಳು. ಕಾಲೇಜಿಗೆ ಹೋಗು ಎಂದರೂ ಆಕೆ ಕೇಳದಿರುವುದಕ್ಕೆ ಮನೆಯಲ್ಲಿ ಭಾನುವಾರ ರಾತ್ರಿ ಜಗಳವಾಗಿದೆ. ಆಗ ಮನೆಯಿಂದ ನಂದಿನಿ ಓಡಿ ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಸಂದೀಪ್‌ ಬಂದಿದ್ದಾನೆ. ಈ ವೇಳೆ ನಂದಿನಿ ಬಾವಿಗೆ ಜಿಗಿದಿದ್ದಾಳೆ. ತಂಗಿಯನ್ನು ರಕ್ಷಿಸಲು ಅಣ್ಣನೂ ಬಾವಿಗೆ ಹಾರಿದ್ದಾನೆ. ಇಬ್ಬರಿಗೂ ಈಜು ಬಾರದೇ ಇರುವುದರಿಂದ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಹೋದ ಅಣ್ಣ–ತಂಗಿ ವಾಪಸ್‌ ಬಾರದಿರುವುದರಿಂದ ಕುಟುಂಬದವರು ಭಾನುವಾರ ರಾತ್ರಿಯಿಂದಲೇ ಹುಡುಕಿದ್ದರೂ ಪತ್ತೆಯಾಗಿಲ್ಲ. ಪಟಪಳ್ಳಿ ಗ್ರಾಮದ ಹಳೆ ಹಾಗೂ ಹೊಸ ಊರಿನ‌ಮಧ್ಯೆ ತೊರೆಯಲ್ಲಿ ನಿರ್ಮಿಸಿದ ಬಾವಿಯಲ್ಲಿ ನಂದಿನಿ ಮುಡಿದಿದ್ದ ಹೂವುಗಳು ತೇಲುತ್ತಿತ್ತು. ಇದರಿಂದ ಅನುಮಾನ ಬಂದು ಬಾವಿಯಲ್ಲಿ ಶೋಧಿಸಲಾಗಿದೆ. ಸೋಮವಾರ ಮಧ್ಯಾಹ್ನ 4 ಗಂಟೆಗೆ ನಂದಿನಿ ಮೃತದೇಹ ಪತ್ತೆಯಾಗಿದೆ. ನಂತರ ಸಂದೀಪನಿಗಾಗಿ ಶೋಧ ನಡೆಸಲು ಅಗ್ನಿ ಶಾಮಕ ಠಾಣೆಯವರನ್ನು ಕರೆಸಿದ್ದಾರೆ. ರಾತ್ರಿ 7 ಗಂಟೆಗೆ ಸಂದೀಪನ‌ ಮೃತ ದೇಹವನ್ನು ಬಾವಿಯಿಂದ ಹೊರ ತೆಗೆಯಲಾಯಿತು. ನಂತರ ಕುಟುಂಬದ ಸದಸ್ಯರಿಂದ ದೂರು ದಾಖಲಿಸಿಕೊಂಡು ತಡರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ. ಚಿಂಚೋಳಿ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಹಣಮಂತ ಭಂಕಲಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT