ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ನಿರ್ವಹಣೆ: ಕಾರ್ಯಪಡೆ ಸಭೆ

ಚಿಂಚೋಳಿ ಮತಕ್ಷೇತ್ರ: ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲು ಸೂಚನೆ
Published 22 ನವೆಂಬರ್ 2023, 16:02 IST
Last Updated 22 ನವೆಂಬರ್ 2023, 16:02 IST
ಅಕ್ಷರ ಗಾತ್ರ

ಚಿಂಚೋಳಿ: ‘ಮತಕ್ಷೇತ್ರದಲ್ಲಿ ಕುಡಿವ ನೀರು ಹಾಗೂ ಜಾನುವಾರುಗಳ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ಬರ ನಿರ್ವಹಣೆಗೆ ಕೈಗೊಳ್ಳುವ ಕುಡಿವ ನೀರಿನ ಕಾಮಗಾರಿ ಬರ ನಿರ್ವಹಣೆಯ ತಾಲ್ಲೂಕು ಮಟ್ಟದ ಕಾರ್ಯಪಡೆಯ ಸಭೆಯ ಅನುಮೋದನೆ ಪಡೆದು ಅನುಷ್ಠಾನಗೊಳಿಸಬೇಕು’ ಎಂದು ಶಾಸಕ ಡಾ. ಅವಿನಾಶ  ಜಾಧವ ಸೂಚಿಸಿದರು.

ತಾಲ್ಲೂಕು ಆಡಳಿತಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದರು.

ಸಭೆಗೆ ಗೈರಾದ ಚಿಂಚೋಳಿ ಮತ್ತು ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಕಾಳಗಿಯ ಸಹಾಯಕ ಕೃಷಿ ನಿರ್ದೆಶಕ, ಕಾಳಗಿ ತೋಟಗಾರಿಕಾ ಸಹಾಯಕ ನಿರ್ದೆಶಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಬೇಕು. ನಿರ್ಲಕ್ಷಿಸಿದರೆ ನಾನು ನಿಮ್ಮ ವಿರುದ್ಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಬೇಕಾಗುತ್ತದೆ’ ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

‘ಸದ್ಯ ತಾಲ್ಲೂಕಿನಲ್ಲಿ ಜಾನುವಾರುಗಳ ಮೇವಿನ ಕೊರತೆಯಿಲ್ಲ. ಮೂರು ಕಡೆ ಮೇವು ಬ್ಯಾಂಕ್ ಮತ್ತು ಚೆಕ್ ಪೋಸ್ಟ್ ತೆರೆಬೇಕು. ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿರುವ 30 ಹಳ್ಳಿಗಳನ್ನು ಗುರುತಿಸಲಾಗಿದೆ. ಜನರಿಗೆ ಸಮರ್ಪಕ ಕುಡಿವ ನೀರು ಪೂರೈಸಲು ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಚಿಂಚೋಳಿ ತಾಲ್ಲೂಕಿನ 14, ಕಾಳಗಿ ತಾಲ್ಲೂಕಿನ 16 ಸೇರಿ ಒಟ್ಟು 30 ಹಳ್ಳಿಗಳಿವೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮತ್ತು ಕಾಳಗಿ ತಹಶೀಲ್ದಾರ್ ಘಮಾವತಿ ರಾಠೋಡ್ ತಿಳಿಸಿದರು.

‘ಜಲಜೀವನ ಮಿಷನ್ ಅಡಿ 215 ಕಾಮಗಾರಿ ಮಂಜೂರಾಗಿದ್ದು 100 ಕಾಮಗಾರಿ ಪೂರ್ಣಗೊಂಡಿವೆ. ಗ್ರಾ.ಪಂ.ಗೆ ನೀರು ನೈರ್ಮಲ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಕಾಮಗಾರಿ ಪೂರ್ಣಗೊಂಡ ಖಾತ್ರಿ ಆಧರಿಸಿ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು’ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಹುಲ್ ಕಾಂಬ್ಳೆ ತಿಳಿಸಿದರು.

‘ಪಿಡಿಒಗಳ ಹಾಗೂ ಗ್ರಾ.ಪಂ. ಅಧ್ಯಕ್ಷರ ಜಂಟಿ ಸಭೆ ನಡೆಸಿ ಈ ಕುರಿತು ಚರ್ಚಿಸುತ್ತೇನೆ. ಬಳಿಕ ಕಾಮಗಾರಿ ಪೂರ್ಣಗೊಂಡು ಜನರಿಗೆ ಉಪಯೋಗಕ್ಕೆ ಬಂದ ಮೇಲೆ ಪಂಚಾಯಿತಿಗೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ತಾ.ಪಂ. ಇಒ ಶಂಕರ ರಾಠೋಡ್ ಮಾಹಿತಿ ನೀಡಿದರು.

ವಿಮಾ ನೋಂದಣಿ ಕುಸಿತ, ಶಾಸಕ ಬೇಸರ: ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಫಸಲಬಿಮಾ ಯೋಜನೆಯ ಅಡಿಯಲ್ಲಿ ಕಳೆದ ವರ್ಷ 31 ಸಾವಿರ ರೈತರು ಬೆಳೆ ವಿಮೆ ನೋಂದಾಯಿಸಿದರೆ, ಪ್ರಸಕ್ತ ವರ್ಷ 19,600 ರೈತರು ನೋಂದಾಯಿಸಿದ್ದಕ್ಕೆ ಶಾಸಕರು ಬೇಸರ ವ್ಯಕ್ತಪಡಿಸಿ, ಕಡಿಮೆಯಾಗಲು ಕಾರಣ ಏನು ಎಂದು ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಳೆದ ವರ್ಷ ರೈತರಿಗೆ ಹಾನಿಯಾಗಿತ್ತು ಆದರೆ ಬೆಳೆ ಇಳುವರಿ ಕಟಾವು ಪರೀಕ್ಷೆಯಲ್ಲಿ ಎಂದಿನಂತೆ ಇಳುವರಿ ದಾಖಲಾಗಿದ್ದರಿಂದ ರೈತ ನಿರಾಸೆಗೊಂಡು ವಿಮೆ ಮಾಡಿಸಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿ ಪ್ರಸಕ್ತ ವರ್ಷ ತೊಗರಿಗೆ ಮಧ್ಯಂತರ ವಿಮಾ ಪರಿಹಾರ ಮಂಜೂರು ಮಾಡಲು ಕಂಪೆನಿ ಒಪ್ಪಿಗೆ ನೀಡಿದೆ ಎಂದರು.

ಸಭೆಯಲ್ಲಿ ಕಾಳಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಲಾಸರಾಜ್, ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಕಾಳಗಿ ಪ.ಪಂ. ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಡಾ.ಧನರಾಜ ಬೊಮ್ಮಾ, ಗಿರಿರಾಜ ಸಜ್ಜನ, ಸಣ್ಣ ನೀರಾವರಿ ಇಲಾಖೆಯ ಎಇಇ ರಾಜಶೇಖರ ಅಲಗೂಡಕರ್, ತೋಟಗಾರಿಕಾ ಇಲಾಖೆಯ ರಾಜಕುಮಾರ ಗೋವಿಂದ, ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ, ಶಿರಸ್ತೇದಾರ ಸುಭಾಷ ನಿಡಗುಂದಿ, ಕಂದಾಯ ನಿರೀಕ್ಷಕರಾದ ರವಿಪಾಟೀಲ, ಕೇಶವ ಕುಲಕರ್ಣಿ, ಆರೀಫ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT