ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ನಗರದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ

Published 25 ಡಿಸೆಂಬರ್ 2023, 15:32 IST
Last Updated 25 ಡಿಸೆಂಬರ್ 2023, 15:32 IST
ಅಕ್ಷರ ಗಾತ್ರ

ಕಲಬುರಗಿ: ವಿದ್ಯುತ್‌ ದೀಪಗಳ ನಕ್ಷತ್ರಗಳಲ್ಲಿ ಮಿನುಗಿದ ಚರ್ಚ್‌ಗಳು, ವೈವಿಧ್ಯಮಯವಾಗಿ ನಿರ್ಮಿಸಿದ ಗೋದಲಿಗಳಿಗೂ ದೀಪಗಳ ಸರಮಾಲೆ, ಕ್ರೈಸ್ತ ಧರ್ಮಗುರುಗಳು, ಫಾದರ್‌, ಫಾಸ್ಟರ್‌ಗಳಿಂದ ಬೈಬಲ್ ಪಠಣ, ಯುವತಿಯರ ತಂಡಗಳ ಕ್ಯಾರೆಲ್ಸ್ ಗಾಯನಗಳ ಸುಶ್ರಾವ್ಯ, ಮೊಂಬತ್ತಿ ಬೆಳಗಿಸಿ ಪ್ರಾರ್ಥನೆ, ಸ್ನೇಹಿತರು, ಓರಿಗೆಯವರು, ಬಂಧುಗಳು ಪರಸ್ಪರ ಭೇಟಿಯಾಗಿ ಕ್ರಿಸ್‌ಮಸ್ ಶುಭಾಶಯ ವಿನಿಮಯ...

ನಗರದ ಚರ್ಚ್‌ಗಳಲ್ಲಿ ಸೋಮವಾರ ಯೇಸುಕ್ರಿಸ್ತನ ಜನನದ ಅಂಗವಾಗಿ ಕ್ರೈಸ್ತ ಬಾಂಧವರು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದ ಕ್ರಿಸ್‌ಮಸ್‌ ಹಬ್ಬದಲ್ಲಿ ಕಂಡುಬಂದ ದೃಶ್ಯಗಳಿವು.

ಕೋರ್ಟ್‌ ರಸ್ತೆಯ ದೈವಾನುಗ್ರಹ ಮಾತೆ ಮಹಾದೇವಾಲಯ (ಸೇಂಟ್ ಮೇರಿ ಚರ್ಚ್), ಜೆಸ್ಕಾಂ ಪ್ರಧಾನ ಕಚೇರಿ ಮುಂಭಾಗದ ಹಿಂದೂಸ್ತಾನ್ ಕವನೆಂಟ್ ಚರ್ಚ್‌, ಐವಾನ್–ಇ–ಶಾಹಿ ಸಮೀಪದ ಕ್ರೈಸ್ತ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌, ತಾಜ ಸುಲ್ತಾನಪುರ ಸಮೀಪದ ಹೋಲಿ ಫೆಲೊಶಿಪ್ ಚರ್ಚ್‌, ಶಹಾಬಾದ್ ರಸ್ತೆ, ಹಳೆ ಜೇವರ್ಗಿ ರಸ್ತೆ, ಬಸವನಗರ, ದೇವರಪಾಳ್ಯ ಪ್ರದೇಶದ ಚರ್ಚ್‌ಗಳು ಸೇರಿದಂತೆ 15ಕ್ಕೂ ಹೆಚ್ಚು ಚರ್ಚ್‌ಗಳು, ಮದರ್ ಥೆರೆಸಾ ಆಸ್ಪತ್ರೆ ಆವರಣ, ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಿಸ್‌ಮಸ್ ಸಡಗರ ಕಳೆಗಟ್ಟಿತು.

ಸೇಂಟ್ ಮೇರಿ ಚರ್ಚ್‌ನಲ್ಲಿ ಧರ್ಮಪೀಠದ ಧರ್ಮಾಧ್ಯಕ್ಷ ಡಾ. ರಾಬರ್ಟ್‌ ಮೈಕೆಲ್‌ ಮಿರಾಂಡಾ, ಧರ್ಮಗುರು ಫಾದರ್ ಸ್ಟ್ಯಾನಿ ಲೋಬೊ, ಧರ್ಮಕೇಂದ್ರದ ಫಾದರ್ ಪ್ರವೀಣ್, ಸಹಾಯಕ ಗುರು ಫಾದರ್ ಲಾರ್ಸರ್ ಚೇತನ್, ಫಾದರ್ ಆರ್ಥರ್ ಪಯಾಜ್, ಫಾದರ್ ದೇವರಾಜ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಸಂಪ್ರದಾಯದ ಪ್ರಕಾರ ಭಾನುವಾರ ರಾತ್ರಿಯಿಂದಲೇ ಕ್ರಿಸ್‌ ಮಸ್ ಆಚರಣೆ ಶುರುವಾದವು. ಧರ್ಮಗುರುಗಳ ಸಮ್ಮುಖದಲ್ಲಿ ಕ್ಯಾರೆಲ್ಸ್ ಗೀತೆಗಳು, ಗೋದಲಿ ಉದ್ಘಾಟನೆ, ಒಂದೂವರೆ ಗಂಟೆ ಕಾಲ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಧರ್ಮಗುರುಗಳು ಭಕ್ತರಿಗೆ ಕ್ರಿಸ್‌ಮಸ್ ಸಂದೇಶ ನೀಡಿದರು. ಪ್ರಭು ಯೇಸು ಅವರು ಭೂಮಿಗೆ ಬರಲು ಕಾರಣವಾದ ಸಂಕಷ್ಟದ ದಿನಗಳನ್ನು ತಿಳಿಹೇಳಿದರು.

ಕ್ರೈಸ್ತ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಸಭಾ ಪಾಲಕ ಡೇವಿಡ್ ನಥಾನಿಯಲ್, ಸಹ ಸಭಾಪಾಲಕರಾದ ಡಾ.ಸುರೇಶ ಮಾರ್ಕ್, ಯಶ್ವಂತ ಮುಡಲಗಿ, ಸಹಾಯಕ ಫ್ರಾನ್ಸಸ್ ಜಯವಂತ, ಪ್ರಮುಖರಾದ ಸಂಜಯ್ ಸ್ಯಾಮ್ಯುಲ್, ಸೂರ್ಯಕುಮಾರ, ಸರೋಜಿನಿ ಪಾಲ್, ರೆವರೆಂಡ್ ಸುಮಂತ್ ಡಿ. ಸರಡಗಿ, ಸ್ಯಾಮ್ಯುಲ್ ಸುಂದರ್ ನೇತೃತ್ವದಲ್ಲಿ ಕ್ರಿಸ್‌ಮಸ್ ಆಚರಣೆಗಳು ನಡೆದವು. ವಿಶೇಷ ಪ್ರಾರ್ಥನೆ, ಕ್ರಿಸ್‌ಮಸ್ ಗಾಯನ ಕಳೆ ತಂದಿತ್ತು.

ಕ್ರೈಸ್ತರು ಮಾತ್ರವಲ್ಲದೇ ಅನ್ಯಧರ್ಮೀಯರೂ ಚರ್ಚ್‌ಗಳಿಗೆ ಭೇಟಿ ನೀಡಿ, ಮೊಂಬತ್ತಿ ಹಚ್ಚಿ ಪ್ರಾರ್ಥಿಸಿದರು. ಪ‍್ರಾರ್ಥನೆ ಮುಗಿಸಿ ಹೊರಬಂದ ಪ್ರತಿಯೊಬ್ಬರಿಗೂ ಧರ್ಮಗುರುಗಳು ತಲೆಯ ಮೇಲೆ ಕೈಇರಿಸಿ ಶುಭವಾಗಲಿ ಎಂದು ಹರಸಿದರು.

ಸರ್ವರ ಒಳಿತಿಗಾಗಿ ಪ್ರಾರ್ಥನೆ

ಫಾದರ್ ಪ್ರವೀಣ್ ‘ಜಗತ್ತಿನ ಪ್ರತಿಯೊಬ್ಬರಿಗೂ ಒಳಿತಾಗಲಿ. ದೇಶದಲ್ಲಿ ಎಲ್ಲರೂ ಏಕತೆಯಿಂದ ಬಾಳ್ವೆ ಮಾಡುವಂತೆ ಆಗಲಿ. ಎಲ್ಲರಲ್ಲಿಯೂ ಸಂತೋಷ ಸಂಯಮ ಕರುಣೆ ಶಾಂತಿ ಮೂಡುವಂತೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು’ ಎಂದು ಸೇಂಟ್‌ ಮೇರಿ ಚರ್ಚ್‌ನ ಫಾದರ್ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಗತ್ತಿಗೆ ಶಾಂತಿಯ ಸಂದೇಶ ತಿಳಿಸಲು ಯೇಸು ಭೂಮಿಗೆ ಬಂದ ಶುಭದಿನವಿದು. ಪ್ರಪಂಚದ ಎಲ್ಲರೂ ಆರೋಗ್ಯವಂತರಾಗಿ ಸಹೋದರರಂತೆ ಒಂದಾಗಿ ಇರಲಿ. ಈಗಿರುವ ಸಂಘರ್ಷಗಳಿಂದ ಜಗತ್ತು ಮುಕ್ತವಾಗಲಿ’ ಎಂದರು.

ಡಿ.30ರಂದು ಸರ್ವಧರ್ಮೀಯರ ಕ್ರಿಸ್‌ಮಸ್

‘ಎಲ್ಲ ಧರ್ಮದವರು ಒಳಗೊಂಡಂತೆ ಡಿಸೆಂಬರ್ 30ರಂದು ಸೇಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಸರ್ವಧರ್ಮೀಯ ಕ್ರಿಸ್‌ಮಸ್ ಆಚರಿಸಲಾಗುತ್ತದೆ’ ಎಂದು ಫಾದರ್ ಪ್ರವೀಣ್ ತಿಳಿಸಿದರು. ‘ಡಿಸೆಂಬರ್‌ ಆರಂಭದಿಂದ ಶುರುವಾಗುವ ಕ್ರಿಸ್‌ಮಸ್ ಸಡಗರ ತಿಂಗಳ ಪೂರ್ತಿ ನಡೆಯುತ್ತದೆ. ಯೇಸು ಜನನದ ಡಿ.25 ನಮ್ಮೆಲ್ಲರಿಗೂ ಸಂಭ್ರಮದ ದಿನ. ಕ್ರೈಸ್ತ ಬಾಂಧವರು ಸೇರಿ ಕ್ರಿಸ್‌ಮಸ್ ಆಚರಿಸುತ್ತೇವೆ. ಅನ್ಯ ಧರ್ಮಿಯರನ್ನು ಒಳಗೊಳ್ಳಲು ಸರ್ವಧರ್ಮೀಯರ ಕ್ರಿಸ್‌ಮಸ್ ಆಚರಿಸಿಕೊಂಡು ಹೋಗಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT