ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸಂವಿಧಾನದ ಅನಕ್ಷರಸ್ಥೆ: ಅಪ್ಪಗೆರೆ ಸೋಮಶೇಖರ

Published 17 ಡಿಸೆಂಬರ್ 2023, 4:21 IST
Last Updated 17 ಡಿಸೆಂಬರ್ 2023, 4:21 IST
ಅಕ್ಷರ ಗಾತ್ರ

ಕಲಬುರಗಿ: ‘ದೇಶದಲ್ಲಿ ಸಂವಿಧಾನ ಜಾರಿಯಾಗಿ 73 ವರ್ಷಗಳು ಕಳೆದರೂ ಅಕ್ಷರ ಕಲಿತ ಬಹುತೇಕರಿಗೆ ಸಂವಿಧಾನದ ಸಾಕ್ಷರತೆ ಇಲ್ಲ. ಇದೊಂದು ರೀತಿಯಲ್ಲಿ ಸಂವಿಧಾನದ ಅನಕ್ಷರಸ್ಥೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಹೇಳಿದರು.

ಇಲ್ಲಿನ ಡಾ. ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜನರಲ್ಲಿ ಸಂವಿಧಾನ ಬಗ್ಗೆ ಸಾಕ್ಷರತೆ ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಾಕ್ಷರತೆ ಮೂಡಿಸಿ, ರಕ್ಷಣೆ ಮಾಡದೆ ಇದ್ದರೆ ಭಾರತಕ್ಕೆ ಭವಿಷ್ಯವಿಲ್ಲ. ಸಂವಿಧಾನ ಅಳಿಸಿ ಹೋದರೆ, ಅದರ ಫಲಾನುಭವಿಗಳಾದ ನಾವು ಭವಿಷ್ಯದ ಚರಿತ್ರೆಯಲ್ಲಿ ಖಳನಾಯಕರಾಗಿ ಉಳಿಯುತ್ತೇವೆ’ ಎಂದರು.

‘ಸಾವಿನ ಬಳಿಕವೂ ಅಂಬೇಡ್ಕರ್ ಅವರನ್ನು ಕೋಮುವಾದಿಗಳು ಅವಮಾನಿಸಿದ್ದರು. ಈಗ ಸಂವಿಧಾನಕ್ಕೆ ಜಾತಿ ಮತ್ತು ಅಸ್ಪೃಶ್ಯತೆಯ ಕಳಂಕ ಹಚ್ಚಿ, ಅದನ್ನು ನರಳುವಂತೆ ಮಾಡುತ್ತಿದ್ದಾರೆ. ಅಕ್ಷರ, ಉದ್ಯೋಗ, ರಾಜಕೀಯ ಹಕ್ಕು, ಅಧಿಕಾರ ಕೊಟ್ಟ ಸಂವಿಧಾನಕ್ಕೆ ಅಂಟಿರುವ ಕಳಂಕವನ್ನು ನಾವೆಲ್ಲರೂ ತೊಡೆದು ಹಾಕಬೇಕಿದೆ’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ಎಲ್ಲ ಜಾತಿ, ಧರ್ಮಗಳ ಹಿತದೃಷ್ಟಿಯನ್ನು ಇರಿಸಿಕೊಂಡು ಸಂವಿಧಾನ ಬರೆದಿದ್ದಾರೆ. ಎಲ್ಲ ಜಾತಿ, ಧರ್ಮ, ಸಮುದಾಯಗಳು ಸಂವಿಧಾನದ ಫಲವನ್ನು ಉಣ್ಣುತ್ತಿದ್ದಾರೆ. ಆದರೆ, ಸಂವಿಧಾನಕ್ಕೆ ಕನಿಷ್ಠ ಗೌರವ, ಕೃತಜ್ಞತೆ ಸಹ ತೋರಿಸುತ್ತಿಲ್ಲ. ಸಂವಿಧಾನವನ್ನು ಸುಟ್ಟು ಹಾಕಿದ್ದರೂ ಮೌನವಾಗಿ ಇದ್ದರು. ಇದು ದುರಂತ ಮತ್ತು ಆತಂಕಕಾರಿ ಬೆಳವಣಿಗೆ’ ಎಂದರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖ್ಯ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ, ‘ಬ್ರಿಟಿಷರ ಕಾಲದಲ್ಲಿ ಶೋಷಿತ ಸಮುದಾಯಗಳ ಸ್ಥಿತಿಗತಿ ತಿಳಿಯಲು ಜಾತಿ ಸಮೀಕ್ಷೆ ನಡೆಸಲಾಗಿತ್ತು. ಅದಾದ ಬಳಿಕ ಯಾವುದೇ ಸಮೀಕ್ಷೆ ನಡೆಯಲಿಲ್ಲ. ಕಾಂತರಾಜ ಆಯೋಗದ ಜಾತಿಗಣತಿ ವರದಿ ಅಂಗೀಕಾರಕ್ಕೆ ಮೇಲ್ವರ್ಗದ ಜಾತಿಗಳು ವಿರೋಧಿಸುತ್ತಿವೆ. ಜಾತಿ ಗಣತಿ ಜಾರಿಗೆ ಶೋಷಿತ ಸಮುದಾಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತು ಶಕ್ತಿ ತುಂಬಬೇಕಿದೆ. ಹೀಗಾಗಿ, 2024ರ ಜನವರಿ 31ರಂದು ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

‘ಸಂವಿಧಾನದ ಒಂದೊಂದೆ ಆಶಯಗಳನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದ್ದರೂ ನಾವೆಲ್ಲರೂ ಸಹಿಸಿಕೊಳ್ಳುತ್ತಿದ್ದೆವೆ. ಇದು ಸರಿಯಾದ ನಡೆಯಲ್ಲ. ಸಂವಿಧಾನ ರಕ್ಷಣೆಯ ಜತೆಗೆ ಜಾಗೃತಿಯೂ ಮೂಡಿಸಬೇಕು’ ಎಂದು ಹೇಳಿದರು.

ಅಣದೂರ ಬುದ್ಧ ವಿಹಾರದ ಭಂತೆ ವರಜ್ಯೋತಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅಲ್ಲಮಪ್ರಭು ಪಾಟೀಲ, ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ, ಮುಖಂಡರಾದ ರಮೇಶ ಡಾಕುಳಕಿ, ಮಾರುತಿ ಮಾಳಗಿ, ಶ್ರೀನಿವಾಸ ಖೇಳಗಿ, ಗೋಪಾಲ ರಾಂಪುರೆ, ಸಂಜೀವಕುಮಾರ ಜವಳಕರ್, ಸೋಮಶೇಖರ, ಮಾರುತಿ ಮಳಗಿ, ಶ್ರೀಹರಿ ಕರಕಳ್ಳಿ, ಬಾಬುರಾವ ಶೆಳ್ಳಗಿ, ಸೋಮಶೇಖರ ಬೆಡಕಪಳ್ಳಿ, ಸುಬ್ರಮಣ್ಯ, ಬಡಗಲಪುರ ನಾಗೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT