ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಮರಳು ಕೊರತೆ: ಕಟ್ಟಡ ಕಾಮಗಾರಿ ಕುಂಠಿತ, ನಿರುದ್ಯೋಗ ಸಮಸ್ಯೆ

Published 19 ಆಗಸ್ಟ್ 2023, 6:36 IST
Last Updated 19 ಆಗಸ್ಟ್ 2023, 6:36 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಾದ್ಯಂತ ಮರಳು (ಎಂ.ಸ್ಯಾಂಡ್‌) ಕೊರತೆಯಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಕುಂಠಿತಗೊಂಡಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸವಿಲ್ಲದೇ ಕಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕಾಮಗಾರಿಗಳು ಮರಳು ಸಿಗದಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದು, ಹೊಸದಾಗಿ ನಿರ್ಮಾಣ ಕಾಮಗಾರಿ ಸಹ ಪ್ರಾರಂಭವಾಗುತ್ತಿಲ್ಲ. ಕೆಲ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಮೊದಲೇ ಮರಳು ದಾಸ್ತಾನು ಮಾಡಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ ಕಟ್ಟಡ ನಿರ್ಮಾಣ ಉದ್ಯಮ, ಗುತ್ತಿಗೆದಾರರು ಹಾಗೂ ಕಾರ್ಮಿಕರ ಮೇಲೆ ಭಾರಿ ಹೊಡೆತ ಬಿದ್ದಿದೆ.

ಕಲಬುರಗಿ ಜಿಲ್ಲೆಯಲ್ಲಿ ದೇವಲಗಾಣಗಾಪುರ, ಶಹಾಪುರ, ಕಾಗಿಣಾ, ಅಫಜಲಪುರ ತಾಲ್ಲೂಕಿನ ಶಿವೂರ ಸೇರಿದಂತೆ ವಿವಿಧ ಮರಳು ಬ್ಲಾಕ್‌ಗಳಿಂದ ಮರಳು ಸರಬರಾಜು ಆಗುತ್ತಿತ್ತು. ಜೇವರ್ಗಿ ತಾಲ್ಲೂಕಿನಲ್ಲಿ ಮರಳು ಅಕ್ರಮ ಸಾಗಣೆ ತಡೆಯಲು ಹೋದ ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರದೇಶದ ಮರಳು ಬ್ಲಾಕ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಕಟ್ಟಡ ನಿರ್ಮಾಣದ ಎಲ್ಲ ವೆಚ್ಚವೂ ಅಧಿಕವಾಗಿದೆ. ಸಣ್ಣ ಪ್ರಮಾಣದ ಗುತ್ತಿಗೆದಾರರು ಮನೆ ನಿರ್ಮಾಣಕ್ಕಾಗಿ ಗ್ರಾಹಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಕಾಲಕ್ಕೆ ಮರಳು ಸಿಗದಿರುವುದರಿಂದ ಕಟ್ಟಡ ನಿರ್ಮಾಣ ನಿಗದಿತ ವೇಳೆಯಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ವೆಚ್ಚವೂ ಜಾಸ್ತಿಯಾಗುತ್ತಿದೆ ಎನ್ನುತ್ತಾರೆ ಗುತ್ತಿಗೆದಾರರು.

ಕಳೆದ ನಾಲ್ಕು ತಿಂಗಳ ಹಿಂದೆ 10 ಬ್ರಾಸ್‌ ಸಾಮರ್ಥ್ಯದ ಒಂದು ಟಿಪ್ಪರ್ ಮರಳು ₹35 ಸಾವಿರದಿಂದ ₹ 40 ಸಾವಿರದವರೆಗೆ ದೊರೆಯುತ್ತಿತ್ತು. ಮರಳು ಗಣಿಗಾರಿಕೆ ಸ್ಥಗಿತವಾಗಿರುವುದರಿಂದ ಎಲ್ಲಿಯೂ ಮರಳು ಸಿಗುತ್ತಿಲ್ಲ. ಹೆಚ್ಚು ಅಗತ್ಯವಿದ್ದವರು ಕೆಲವರ ಪ್ರಭಾವ ಬಳಸಿ 10 ಬ್ರಾಸ್‌ ಸಾಮರ್ಥ್ಯದ ಟಿಪ್ಪರ್‌ ಮರಳಿಗೆ ₹1 ಲಕ್ಷದಿಂದ ₹1.20 ಲಕ್ಷ ನೀಡಿ ಅಕ್ರಮವಾಗಿ ಖರೀದಿ ಮಾಡುತ್ತಿದ್ದಾರೆ. ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಕನಸು ಕನಸಾಗಿಯೇ ಉಳಿದಿದೆ ಎನ್ನುತ್ತಾರೆ ಮಾಲೀಕರೊಬ್ಬರು.

ಕಲಬುರಗಿ ನಗರದಲ್ಲಿಯೇ ಸುಮಾರು 70 ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಅವರು ಕಟ್ಟಡ ನಿರ್ಮಾಣದ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈಗ ಕೆಲಸ ಸಿಗದೇ ಹೊಟ್ಟೆ ಪಾಡಿಗೂ ಅಲೆಯುವಂತಾಗಿದೆ. ನಗರದ ರೈಲು ನಿಲ್ದಾಣ, ಓಂ ನಗರ ಸರ್ಕಲ್‌, ಸೂಪರ್‌ ಮಾರುಕಟ್ಟೆ, ಹುಮನಾಬಾದ್ ರಿಂಗ್‌ ರಸ್ತೆಯಲ್ಲಿ ದಿನಾಲೂ ಉದ್ಯೋಗಕ್ಕಾಗಿ ನಿಂತು ಕೆಲಸ ಕೇಳುತ್ತಾರೆ. ಕೆಲಸ ಸಿಗದೆ ಮತ್ತೆ ಮನೆಗೆ ಮರಳುತ್ತಾರೆ ಎನ್ನುತ್ತಾರೆ ಕಾರ್ಮಿಕ ಸಂಘಟನೆಯ ಮುಖಂಡರು.

(ಎಂ.ಸ್ಯಾಂಡ್‌) ಕೃತಕ ಮರಳು ಎಲ್ಲ ಕಡೆಗೂ ಸಿಗುವುದಿಲ್ಲ. ಕಡಿಮೆ ಪ್ರಮಾಣದಲ್ಲಿ ಯಾದಗಿರಿ ಹಾಗೂ ಹೈದರಾಬಾದ್‌ನಲ್ಲಿ ಲಭ್ಯವಿದೆ. ಅಲ್ಲಿಯಿಂದ ತರಿಸಲು ಸುಮಾರು 10 ಬ್ರಾಸ್‌ಗೆ ₹1 ಲಕ್ಷ ವೆಚ್ಚವಾಗುತ್ತದೆ. ಆದರೆ, ಹೊಳೆಯಲ್ಲಿರುವ ಮರಳಿನಂತೆ ಅದು ಗುಣಮಟ್ಟ ಹೊಂದಿರುವುದಿಲ್ಲ. ಇದರಿಂದ ಮನೆ ನಿರ್ಮಾಣ ಮಾಡುವವರು ಹಿಂಜರಿಯುತ್ತಾರೆ ಎನ್ನುತ್ತಾರೆ ಗುತ್ತಿಗೆದಾರರು.

ಮರಳು ಮಾಫಿಯಾ ಜೋರಾಗಿರುವುದರಿಂದ ಮನೆ ನಿರ್ಮಾಣ ಮಧ್ಯಮ ವರ್ಗದ ಜನರಿಗೆ ನಿಲುಕದ ಮಾತಾಗಿದೆ. ಕಡಿಮೆ ದರದಲ್ಲಿ ಮರಳು ಸಿಗುವಂತಾಗಬೇಕು.
ಬಸವರಾಜ ಖಂಡೇರಾವ ವಾಸ್ತುಶಿಲ್ಪಿ
ಮರಳು ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತವಾಗಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಮಸ್ಯೆಯಾಗುತ್ತಿದೆ.
ಭೀಮರಾಯ ಎಂ. ಕಂದಳ್ಳಿ ನವಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ

ಅ.15ರವರೆಗೆ ಸ್ಥಗಿತ

ಮುಂಗಾರು ಇರುವುದರಿಂದ ಪರಿಸರ ಮತ್ತು ಅರಣ್ಯ ಸಚಿವಾಲಯ ಕಾಯ್ದೆ ಅನ್ವಯ ಅಕ್ಟೋಬರ್‌ 15ರವರೆಗೆ ಮರಳು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಮರಳನ್ನು ಬಳಕೆಗೆ ಅವಕಾಶ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT