ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹೆಚ್ಚುತ್ತಿರುವ ಅಪರಾಧ ಕೃತ್ಯ: 4 ವರ್ಷಗಳಲ್ಲಿ 952 ಕೊಲೆ ಪ್ರಕರಣ

ಕಲ್ಯಾಣ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪರಾಧ ಕೃತ್ಯ
ವಿನಾಯಕ ಭಟ್‌
Published 5 ಮಾರ್ಚ್ 2024, 6:08 IST
Last Updated 5 ಮಾರ್ಚ್ 2024, 6:08 IST
ಅಕ್ಷರ ಗಾತ್ರ

ಕಲಬುರಗಿ: ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ವಲಯದ ಪ್ರಗತಿಪಥದಲ್ಲಿ ಇನ್ನೂ ಮಂದಗತಿಯಲ್ಲೇ ಸಾಗುತ್ತಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಕೊಲೆ ಪ್ರಕರಣಗಳು ಮೇಲಿಂದ ಮೇಲೆ ‘ಸದ್ದು’ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕ್ಷುಲ್ಲಕ ಕಾರಣಕ್ಕೂ ಕೊಲೆ ಮಾಡುವುದು ಈ ಭಾಗದಲ್ಲಿ ಸಾಮಾನ್ಯವೆಂಬಂತಾಗಿದೆ. ಮಾತುಕತೆ ಅಥವಾ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಷಯಗಳಿಗೂ ‘ಕೊಲೆ’ ಎಂಬುವುದೇ ದೊಡ್ಡ ‘ಸಾಧನ’ ಎಂಬಂತಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೊಲೆಗಳೇ ಇದಕ್ಕೆ ಸಾಕ್ಷಿ.

ಜಿಲ್ಲೆಯಲ್ಲಿ ಈಚೆಗೆ ನಡೆದ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ಬಿಜೆಪಿ ಮುಖಂಡ ಮಹಾಂತಪ್ಪ ‌ಸಿದ್ದರಾಮಪ್ಪ ಆಲೂರೆ ಕೊಲೆ ಹಾಗೂ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರ ಆಪ್ತ, ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ಗಿರೀಶ್‌ಬಾಬು ಚಕ್ರ ಹತ್ಯೆ ಪ್ರಕರಣಗಳು ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುತ್ತಿದೆ. ಹಂತಕರ ಅಟ್ಟಹಾಸದಿಂದಾಗಿ ಕುಖ್ಯಾತಿಗೆ ಒಳಗಾಗಿದ್ದ ಭೀಮಾ ತೀರದ ಪ್ರದೇಶವು ಇದೀಗ ಮತ್ತೆ ಸುದ್ದಿಯಾಗುತ್ತಿದೆ. 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್‌ಬಿಆರ್‌ಬಿ) ವರದಿಗಳ ಪ್ರಕಾರ 2020ರಿಂದ 2023ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 5,373 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲೇ 952 (ಶೇ 17.71) ಕೊಲೆ ಪ್ರಕರಣಗಳು ದಾಖಲಾಗಿವೆ. 

ಎನ್‌ಸಿಆರ್‌ಬಿ ವರದಿಯನ್ನು ಅವಲೋಕಿಸಿದಾಗ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಂಡುಬಂದಿದೆ. 2020ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 220 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 232 ಹಾಗೂ 2022ರಲ್ಲಿ 258 ಪ್ರಕರಣಗಳು ದಾಖಲಾಗಿವೆ. ಎಸ್‌ಸಿಆರ್‌ಬಿ 2023ರಲ್ಲಿ ನೀಡಿದ ಪ್ರತಿ ತಿಂಗಳ ವರದಿಯನ್ನು ಕ್ರೋಡೀಕರಿಸಿದಾಗ 242 ಕೊಲೆ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ. ಮೊದಲು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದರೂ, ಸಂತ್ರಸ್ತರು ಸಾವನ್ನಪ್ಪಿದಾಗ ಕೊಲೆ ಪ್ರಕರಣವಾಗಿ ಮಾರ್ಪಡುತ್ತವೆ. ಇದನ್ನೂ ಪರಿಗಣನೆಗೆ ತೆಗೆದುಕೊಂಡರೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಆಸ್ತಿ ವಿವಾದ–ಕೌಟುಂಬಿಕ ಕಲಹಕ್ಕೆ ಬಲಿ:

ದಾಖಲಾಗಿರುವ ಕೊಲೆ ಪ್ರಕಣಗಳ ಪೈಕಿ ಸಣ್ಣ–ಪುಟ್ಟ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಸಿಟ್ಟಿನ ಭರದಲ್ಲಿ ಕೊಲೆ ಮಾಡಿರುವ ಪ್ರಕರಣಗಳೇ ಹೆಚ್ಚಿವೆ ಎಂಬುದು ವರದಿಯನ್ನು ಅವಲೋಕಿಸಿದಾಗ ಕಂಡುಬರುತ್ತದೆ. ಇದರ ಜೊತೆಗೆ ಜಮೀನು ವ್ಯಾಜ್ಯ, ಆಸ್ತಿ ವಿವಾದ, ಹಳೆ ವೈಷಮ್ಯ, ಮಾದಕ ವ್ಯಸನ, ವೆಭಿಚಾರ, ಅತ್ಯಾಚಾರ, ಪ್ರೇಮ ವೈಫಲ್ಯ... ಹೀಗೆ ಹಲವು ಕಾರಣಗಳಿಗೆ ಹತ್ಯೆ ನಡೆಯುತ್ತಿವೆ.

ಕಳೆದ ಡಿಸೆಂಬರ್‌ನಲ್ಲಿ ಕಲಬುರಗಿ ನಗರದಲ್ಲಿ ಆಸ್ತಿ ವ್ಯಾಜ್ಯ ಕಾರಣಕ್ಕೆ ನಡುರಸ್ತೆಯಲ್ಲೇ ವಕೀಲ ಈರಣ್ಣಗೌಡ ಅವರನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನಲ್ಲಿ ಆಸ್ತಿಗಾಗಿ ಮಲತಾಯಿಯು ಐದು ತಿಂಗಳ ಮಗುವಿಗೆ ವಿಷವುಣಿಸಿ ಕೊಲೆ ಮಾಡಿದ್ದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು.

ಕಳೆದ ನವೆಂಬರ್‌ ತಿಂಗಳಲ್ಲಿ ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹುಮನಾಬಾದ್‌ನಲ್ಲಿ ಪತಿಯೇ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿದ್ದು, ಲಿಂಗಸುಗೂರು ತಾಲ್ಲೂಕಿನಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ್ದು ಹಾಗೂ ಮಾನ್ವಿಯಲ್ಲಿ ಪತ್ನಿಯನ್ನು ಕೊಂದ ಪತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಮಾದಕ ವಸ್ತುಗಳ ಸೇವನೆಯಿಂದಾಗುವ ಪರಿಣಾಮಗಳ ಕರಾಳ ಮುಖವನ್ನು ತೆರೆದಿಟ್ಟಿವೆ.

ಅಫಜಲಪುರದ ಚೌಡಾಪುರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ಹತ್ಯೆ, ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಕಾಂಗ್ರೆಸ್‌ ಮುಖಂಡ ಪ್ರಸಾದ್‌ ಮುದ್ಲಾಪುರ ಕೊಲೆ ಪ್ರಕರಣ ‘ರಾಜಕೀಯ ವೈಷಮ್ಯ’ಕ್ಕೆ ಜೀವ ತೆತ್ತ ಘಟನೆಗಳು ಇನ್ನೂ ಮಾಸಿಲ್ಲ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕೊಲೆ ಪ್ರಕರಣಗಳು, ಕಲ್ಯಾಣ ಕರ್ನಾಟಕದ ಸಾಮಾಜಿಕ ಸ್ಥಿತಿ–ಗತಿಗೆ ಕನ್ನಡಿ ಹಿಡಿಯುತ್ತಿವೆ.

ಕಲ್ಯಾಣ ಕರ್ನಾಟಕ ನಕ್ಷೆ
ಕಲ್ಯಾಣ ಕರ್ನಾಟಕ ನಕ್ಷೆ
ಕಲ್ಯಾಣ ಕರ್ನಾಟಕ ನಕ್ಷೆ
ಕಲ್ಯಾಣ ಕರ್ನಾಟಕ ನಕ್ಷೆ
ಕಾನೂನಿನಡಿ ವ್ಯಾಜ್ಯ ಬಗೆಹರಿಸಿಕೊಳ್ಳಬಹುದು ಎಂಬ ಪ್ರಜ್ಞೆ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಕಡಿಮೆ ಇದೆ. ಹೀಗಾಗಿಯೇ ಸಣ್ಣ–‍ಪುಟ್ಟ ವಿಚಾರಕ್ಕೂ ಗಲಾಟೆ ಮಾಡಿಕೊಂಡು ಕೊಲೆ ಮಾಡುತ್ತಿದ್ದಾರೆ.
– ಚೇತನ್‌ ಆರ್‌. ಪೊಲೀಸ್‌ ಕಮಿಷನರ್‌ ಕಲಬುರಗಿ
ಕಲಬುರಗಿಯಲ್ಲೇ ಹೆಚ್ಚು ಕೊಲೆ
ಎನ್‌ಸಿಆರ್‌ಬಿ ಹಾಗೂ ಎಸ್‌ಸಿಆರ್‌ಬಿ ವರದಿಗಳಲ್ಲಿರುವ ಕಳೆದ ನಾಲ್ಕು ವರ್ಷಗಳ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಅವಧಿಯಲ್ಲಿ ಕಲಬುರಗಿ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 119 ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 187 ಸೇರಿ ಜಿಲ್ಲೆಯಲ್ಲಿ ಒಟ್ಟು 306 ಕೊಲೆ ಪ್ರಕರಣಗಳು ದಾಖಲಾಗಿವೆ. ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ 160 ಪ್ರಕರಣಗಳು ನಮೂದಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 139 ಪ್ರಕರಣಗಳು ಹಾಗೂ 2022ರಿಂದ ಎರಡು ವರ್ಷಗಳ ಅವಧಿಯಲ್ಲಿ ವಿಜಯನಗರದಲ್ಲಿ (ಈ ಮೊದಲು ಬಳ್ಳಾರಿ ಜಿಲ್ಲೆಯಲ್ಲಿತ್ತು) 32 ಪ್ರಕರಣಗಳು ದಾಖಲಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ಕೇವಲ 80 ಪ್ರಕರಣಗಳು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 75 ಪ್ರಕರಣಗಳು ಮಾತ್ರ ದಾಖಲಾಗಿರುವುದು ಸಮಾಧಾನಕರ ಸಂಗತಿ.

ಮಾಹಿತಿ: ಎನ್‌ಸಿಆರ್‌ಬಿ ವರದಿ

2023ರಲ್ಲಿ ದಾಖಲಾದ ಕೊಲೆ ಪ್ರಕರಣ

ಕಲಬುರಗಿ ನಗರ;26

ಕಲಬುರಗಿ ಗ್ರಾಮೀಣ;53

ಯಾದಗಿರಿ;15

ಬೀದರ್‌;40

ರಾಯಚೂರು;42

ಕೊಪ್ಪಳ;27

ಬಳ್ಳಾರಿ;21

ವಿಜಯನಗರ;18

ಕಲ್ಯಾಣ ಕರ್ನಾಟಕ;242

ರಾಜ್ಯ;1281

ಮಾಹಿತಿ: ಎಸ್‌ಬಿಆರ್‌ಬಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT