ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಲಪತಿ ವಿರುದ್ಧ ಬಿ.ಆರ್. ಪಾಟೀಲ ಹಕ್ಕುಚ್ಯುತಿ ಮಂಡನೆಗೆ ಸಿದ್ಧತೆ

ಮತ್ತೆ ತಾರಕಕ್ಕೇರಿದ ರಾಜ್ಯ ಸರ್ಕಾರ–ಸಿಯುಕೆ ಮಧ್ಯದ ಸಂಘರ್ಷ; ಸಂಘಟಕರಿಗೆ ನೋಟಿಸ್
Published 25 ಮೇ 2024, 0:30 IST
Last Updated 25 ಮೇ 2024, 0:30 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಈಚೆಗೆ ನಡೆದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮಗೆ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಸ್ಥಳೀಯ ಶಾಸಕರೂ ಆದ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ ಅವರು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದಾರೆ.

ಈ ಕುರಿತ ನೋಟಿಸ್‌ ಅನ್ನು ವಿಧಾನಸಭೆ ಸ್ಪೀಕರ್ ಕಚೇರಿಗೆ ನೀಡಿದ್ದಾರೆ. ‘ಕಳೆದ ಮಾರ್ಚ್ 11ರಂದು ಸಿಯುಕೆ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಘವು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕುಲಪತಿ ಹಲವು ಷರತ್ತುಗಳನ್ನು ವಿಧಿಸಿದ್ದರು. ನಂತರ ಸಂಘದ ಪದಾಧಿಕಾರಿಗಳಿಗೆ ನೋಟಿಸ್ ಸಹ ನೀಡಿದ್ದರು. ಇದು ವಿಶ್ವವಿದ್ಯಾಲಯದ ಅಧಿಕೃತ ಕಾರ್ಯಕ್ರಮವಲ್ಲ ಎಂಬ ಕಾರಣಕ್ಕೆ ಕುಲಪತಿ ಹಾಜರಾಗಿರಲಿಲ್ಲ. ಅಲ್ಲದೇ, ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನನ್ನನ್ನು ಸ್ವಾಗತಿಸಲೂ ಬಂದಿರಲಿಲ್ಲ. ಇದರಿಂದಾಗಿ ಶಾಸಕನಾದ ನನ್ನ ಹಕ್ಕಿಗೆ ಚ್ಯುತಿ ಬಂದಿದೆ’ ಎಂದು ಬಿ.ಆರ್‌. ಪಾಟೀಲ ದೂರು ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬಿ.ಆರ್. ಪಾಟೀಲ, ‘ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಶಾಸಕನಾದ ನನ್ನನ್ನು ವಿಶ್ವವಿದ್ಯಾಲಯದ ಯಾವೊಬ್ಬ ಸಿಬ್ಬಂದಿಯೂ ಸ್ವಾಗತಿಸಲಿಲ್ಲ. ಅಲ್ಲದೇ, ನಾನು ಹಾಗೂ ಸಚಿವ ಪ್ರಿಯಾಂಕ್ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಅರ್ಥದಲ್ಲಿ ಸಂಘಟಕರಿಗೆ ಕುಲಪತಿ ಪತ್ರ ಬರೆದಿದ್ದಾರೆ. ಹೀಗಾಗಿ, ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೇನೆ. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಾಹಿತಿ ಆರ್.ಕೆ. ಹುಡಗಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಅವರ ಸಿದ್ಧಾಂತ ಒಪ್ಪಿಗೆಯಾಗದ್ದಕ್ಕೆ ಕುಲಪತಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ‘ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಸಚಿವರು, ಶಾಸಕರನ್ನು ಹೊರತುಪಡಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧವಿರದವರನ್ನು ಕರೆಸದಂತೆ ಸೂಚಿಸಿದ್ದೆ. ಅದನ್ನು ಮೀರಿ ಕೆಲವರನ್ನು ಭಾಷಣ ಮಾಡಲು ಕರೆಸಿದ್ದಾರೆ. ವಿ.ವಿ. ವಾತಾವರಣವನ್ನು ರಾಜಕೀಯಕರಣ ಮಾಡಬಾರದು ಎಂಬ ಉದ್ದೇಶದಿಂದ ನೋಟಿಸ್ ನೀಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಕುಲಪತಿಯವರ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದನ್ನು ಈ ವೇಳೆ ಸ್ಮರಿಸಬಹುದು.

ಪ್ರೊ.ಸತ್ಯನಾರಾಯಣ
ಪ್ರೊ.ಸತ್ಯನಾರಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT