ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಿಯಾಂಕ್ ಖರ್ಗೆ ಬಗ್ಗೆ ಅನಗತ್ಯ ಟೀಕೆ: ಅರ್ಜುನ್ ಭದ್ರೆ ಅಸಮಾಧಾನ

Published 23 ನವೆಂಬರ್ 2023, 14:38 IST
Last Updated 23 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಮುವಾದದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಇದನ್ನು ಸಹಿಸದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ಮುಖಂಡ ಎನ್. ರವಿಕುಮಾರ್ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅಸಮಾಧಾನ ವ್ಯಕ್ತಪಡಿಸಿದರು.

ನಗರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಕೇಳಲು ವಿಜಯೇಂದ್ರ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ನಡೆದ ಹಲ್ಲೆಗೂ ಪ್ರಿಯಾಂಕ್ ಖರ್ಗೆಯವರೇ ಕಾರಣ ಎಂದು ರವಿಕುಮಾರ್ ಟೀಕಿಸುತ್ತಿದ್ದಾರೆ. ಮಣಿಕಂಠ ವಿರುದ್ಧ ಅಕ್ಕಿ ಕಳ್ಳತನ ಸೇರಿದಂತೆ ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಿವೆ. ಇಂತಹ ವ್ಯಕ್ತಿಯನ್ನು ಸಮರ್ಥಿಸಿಕೊಂಡು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಹಲ್ಲೆ ವಿಷಯವನ್ನು ಮುಂದಿಟ್ಟುಕೊಂಡು ರವಿಕುಮಾರ್ ದಲಿತರ ಮಧ್ಯೆ ವಿಷ ತುಂಬುವ ಕೆಲಸ ಮಾಡುತ್ತಿದ್ದಾರೆ. ಪ್ರಿಯಾಂಕ್ ಅವರ ಬಗ್ಗೆ ಉದ್ಧಟತನದಿಂದ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು. ದಲಿತರ ಮತ್ತು ಹಿಂದುಳಿದವರ ಮಧ್ಯೆ ಒಡಕು ಉಂಟು ಮಾಡುವ ದೊಂಬರಾಟ ಕೂಡಲೇ ನಿಲ್ಲಿಸದೇ ಇದ್ದರೆ ರವಿಕುಮಾರ್ ವಿರುದ್ಧ ಚಳವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಆರ್‌ಎಸ್‌ಎಸ್‌ ತಂಟೆಗೆ ಬಂದರೆ ನಾಶವಾಗುತ್ತೀರಿ ಎಂದು ಆರ್. ಅಶೋಕ ಹೇಳಿದ್ದಾರೆ. ಇದು ಖಂಡನೀಯ. ದೇಶದ ಪ್ರಥಮ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್‌ಎಸ್‌ಎಸ್‌ ನಿಷೇಧ ಮಾಡಿದ್ದು ಅಶೋಕ ಅವರಿಗೆ ಗೊತ್ತಿಲ್ಲವೇ‘ ಎಂದು ಪ್ರಶ್ನಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಮಣ್ಣು ಮುಕ್ಕಿಸಿದ್ದು ಬಿಜೆಪಿಯನ್ನಲ್ಲ, ಬದಲಾಗಿ ಆರ್‌ಎಸ್‌ಎಸ್‌ ಸಂಘಟನೆಯನ್ನು. ಆರ್‌ಎಸ್‌ಎಸ್‌ ಕಾರ್ಯಸೂಚಿ ದೇಶದ ಜನರನ್ನು ಕೋಮು ಆಧಾರದ ಮೇಲೆ ಒಡೆಯುವುದೇ ಆಗಿದೆ’ ಎಂದರು.

ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಖಜಾಂಚಿ ಸೂರ್ಯಕಾಂತ ಆಜಾದಪುರ, ನಗರ ಸಂಚಾಲಕ ಶಿವಕುಮಾರ ಕೊರಳ್ಳಿ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT